Advertisement

ಉಪಚುನಾವಣೆ ಅಭ್ಯರ್ಥಿ ಬಗ್ಗೆ ಇಂದು ನಿರ್ಧಾರ

08:19 AM Mar 11, 2017 | |

ಚಿಕ್ಕಮಗಳೂರು: ವಿಧಾನಸಭಾ ಉಪಚುನಾವಣೆಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ಶನಿವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಸಖರಾಯಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆ ನಡೆಯಲಿರುವ ಗುಂಡ್ಲು ಪೇಟೆ ಹಾಗೂ ನಂಜನಗೂಡು ಕ್ಷೇತ್ರದ ಮುಖಂಡರ ಸಭೆಯನ್ನು ಶನಿವಾರ ಬೆಂಗಳೂರಿನಲ್ಲಿ
ಕರೆಯಲಾಗಿದೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಜನ ಪಾಠ ಕಲಿಸಬೇಕು: ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಜನರ ಬಗ್ಗೆ ಕಾಳಜಿಯಿಲ್ಲ. ಕುಡಿವ ನೀರಿಗೆ ಪರಿತಪಿಸಲಾಗುತ್ತಿದೆ. ಜಾನುವಾರುಗಳಿಗೆ ಮೇವಿಲ್ಲ. ಬೆಳೆ ಪರಿಹಾರವನ್ನೂ ನೀಡಿಲ್ಲ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಉದ್ಧಟತನವೇ ಕಾರಣ
ಎಂದು ದೂರಿದರು. ಕೇಂದ್ರ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಿಂದೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ 17,450 ಕೋಟಿ ರೂ. ನಷ್ಟವಾಗಿತ್ತು. 4 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸಿಕ್ಕಿದ್ದು ಕೇವಲ 450 ಕೋಟಿ ರೂ. ಮಾತ್ರ. ಈಗ 1700 ಕೋಟಿ ರೂ. ನೀಡುವುದಾಗಿ ಘೋಷಿಸಿ ಈವರೆಗೆ ಕೇವಲ 450 ಕೋಟಿ ರೂ. ಕೊಟ್ಟಿದೆ. 40 ಲಕ್ಷ ರೈತರಿಗೆ 450 ಕೋಟಿ ರೂ.ಯಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ತಿಳಿಸಿದರು.

ಬಿ.ಎಸ್‌.ಯಡಿಯೂರಪ್ಪ ಈಗಾಗಲೇ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ ಎಂಬ ರೀತಿಯಲ್ಲಿ ಮಾತನಾಡುತ್ತಾರೆ. ಮತದಾರರು ಯಡಿಯೂರಪ್ಪ ಅವರ ಜೇಬಿನಲ್ಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಒಟ್ಟಾರೆಯಾಗಿ ಎರಡೂ
ಪಕ್ಷಗಳಿಗೆ ಜನರ ಸಮಸ್ಯೆ ಪರಿಹರಿಸುವ ಕಾಳಜಿಯಿಲ್ಲ. ಇಂತಹ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಮತದಾರರು ಈ ಎರಡೂ ಪಕ್ಷಗಳ ನಡವಳಿಕೆಯನ್ನು ಗಮನಿಸಿ, ಅವರ ಬಗ್ಗೆ ಅರಿತು ತಕ್ಕ ಪಾಠ ಕಲಿಸಲಿ ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದರು. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ. ಆ ರಾಜ್ಯಗಳ ಪರಿಸ್ಥಿತಿ, ವಿಚಾರಗಳೇ ಬೇರೆ ಕರ್ನಾಟಕದ್ದೇ ಬೇರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ತಮಗೆ ಕುತೂಹಲವೂ ಇಲ್ಲ ಎಂದರು.

ಬಿಎಸ್‌ವೈಗೆ ನೈತಿಕತೆ ಇಲ್ಲ
ರೈತರ ಸಾಲ ಮನ್ನಾ ಮಾಡುವಂತೆ ಬಿಜೆಪಿಯವರು ಗುರುವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಿದ್ದಾರೆ. ಜನ ಮನೆಗೆ ಕಳುಹಿಸುವ ಮೊದಲು ರೈತರ ಸಾಲಮನ್ನಾ ಮಾಡಿ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು. ಕೇಂದ್ರದಲ್ಲಿ ಅವರದೇ ಪಕ್ಷ ಆಡಳಿತ ನಡೆಸುತ್ತಿದೆ. ಕೇಂದ್ರ ರೈತರಿಗೆ ಈವರೆಗೆ ಏನು ಕೊಟ್ಟಿದೆ ಎಂಬುದನ್ನು ಅವರು ಜನತೆಗೆ ಮೊದಲು ತಿಳಿಸಲಿ ಎಂದು ಸವಾಲು ಹಾಕಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next