ಬೀದರ: ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ಕಾಯ್ದೆ ತಿದ್ದುಪಡಿಯ ಗಂಭೀರ ಪರಿಣಾಮಗಳನ್ನು ಗಮನಿಸಿ ಕೂಡಲೇ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ನ.3ರಂದು ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ತಿಳಿಸಿದೆ.
ನಗರದ ಐಎಂಎ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಿ ಸರ್ಕಾರದ ಉದ್ದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು. ಕಾಯ್ದೆ ಜಾರಿಯಿಂದ ಹಲವು ಅಂಶಗಳಿಂದ ಆಗುವ ಅನಾಹುತಗಳ ಬಗ್ಗೆ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ಸಮಿತಿ ಮುಂದೆ ಐಎಂಎ ವಿಷಯ ಮಂಡಿಸಿದಾಗ
ನ್ಯಾಯಾಧೀಶರು ಸರಿ ಎಂದು ಪರಿಗಣಿಸಿ ಕೈ ಬಿಟ್ಟಿದ್ದರು.
ಆರೋಗ್ಯ ಸಚಿವರು ಈ ಸಮಿತಿ ವರದಿಯನ್ನು ಕಡೆಗಣಿಸಿ, ತಮಗೆ ಬೇಕಾದ ಅಂಶಗಳನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಇದು ಪೂರ್ವಾಗ್ರಹಪೀಡಿತವಾಗಿದ್ದು, ಆಸ್ಪತ್ರೆಗಳ ಮೇಲೆ ಮತ್ತು ಬಹುಮುಖ್ಯವಾಗಿ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ವೈಯಕ್ತಿಕವಾಗಿ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಸಂಪೂರ್ಣ ಘಾಸಿ ಉಂಟುಮಾಡುವ ಈ ಕರಾಳ ತಿದ್ದುಪಡಿಗಳನ್ನು ಜಾರಿಗೆ ತರದೇ ಸಮಸ್ಯೆ ಬಗೆಹರಿಸಿ ವೈದ್ಯರು ಹಾಗೂ ಸಾರ್ವಜನಿಕರನ್ನು ನೆಮ್ಮದಿಯಾಗಿರಿಸಬೇಕು ಎಂದು ಮನವಿ ಮಾಡಲಾಯಿತು.
ವೈದ್ಯರಾದ ನಮಗೆ ಮತ್ತು ನಮ್ಮನ್ನು ನಂಬಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 15 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕು. ನಮ್ಮ ಆಗ್ರಹ ನಡೆವೆಯೂ ತಿದ್ದುಪಡಿಗಳನ್ನು ಯಥಾವತ್ತಾಗಿ ಜಾರಿಗೆ ತಂದರೆ ನಾವು ನಮ್ಮ ವೃತ್ತಿ ತ್ಯಜಿಸುವ ಅನಿವಾರ್ಯತೆ ಸೃಷ್ಟಿಸಿದಂತಾಗುತ್ತದೆ ಅಲ್ಲದೇ ಮುಂದಾಗುವ ಎಲ್ಲ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಡಾ| ಎ.ಸಿ. ಲಲಿತಮ್ಮ, ಉಪಾಧ್ಯಕ್ಷರಾದ ಡಾ| ವಿ.ವಿ. ನಾರಾಜ, ಡಾ| ಸರಿತಾ ಭದಭದೆ, ಕಾರ್ಯದರ್ಶಿ ಡಾ| ಮಹೇಶ ಪಾಟೀಲ ಮತ್ತಿತರರು ಇದ್ದರು.