Advertisement

ಮೈತ್ರಿಗೆ ಅಂಟಿಕೊಳ್ಳಲು ಕೈ ತೀರ್ಮಾನ

09:23 AM May 26, 2019 | Sriram |

ಬೆಂಗಳೂರು: ಲೋಕಸಭೆ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ನಾಯಕರು ಮೈತ್ರಿ ಮುರಿದುಕೊಂಡು ಬೀದಿಗೆ ಬರುವುದಕ್ಕಿಂತ ಇದ್ದಷ್ಟು ದಿನ ಇರುವ ಮೈತ್ರಿಗೆ ಅಂಟಿಕೊಂಡು ಹೋಗುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರ ಸರ್ಕಾರಿ ನಿವಾಸದಲ್ಲಿ ಸಚಿವರು ಹಾಗೂ ಪಕ್ಷದ ಮುಖಂಡರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ಕೆಲವು ಹಿರಿಯ ನಾಯಕರಿಂದಲೇ ವ್ಯಕ್ತವಾಗಿದೆ.

ಪ್ರತಿಯೊಂದು ಕ್ಷೇತ್ರದ ಸೋಲಿನ ಬಗ್ಗೆ ಸಚಿವರಿಂದ ನಾಯಕರು ಮಾಹಿತಿ ಪಡೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಮೈತ್ರಿ ನಾಯಕರು ನೀಡುತ್ತಿದ್ದ ಗೊಂದಲದ ಹೇಳಿಕೆಗಳು ಸೋಲಿಗೆ ಕಾರಣ ಎಂದು ಬಹುತೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಪಕ್ಷದ ನಾಯಕರ ನಿರ್ಧಾರಗಳೂ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವೀರಪ್ಪ ಮೊಯ್ಲಿ ಅವರು ತಮ್ಮ ನಡವಳಿಕೆಯಿಂದಲೇ ಸೋತಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವು ಸಚಿವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿಯಲ್ಲಿ ವಿ.ಎಸ್‌.ಉಗ್ರಪ್ಪ ಉಪ ಚುನಾವಣೆಯಲ್ಲಿ 2 ಲಕ್ಷ ಅಂತರದಿಂದ ಗೆಲುವು ಪಡೆದು ಈಗ ಕೇವಲ ಐವತ್ತು ಸಾವಿರ ಮತಗಳಿಂದ ಸೋಲು ಕಂಡಿರುವುದಕ್ಕೆ ಜಿಲ್ಲೆಯ ಸಚಿವರಾದ ಇ. ತುಕಾರಾಂ ಹಾಗೂ ಪಿ.ಟಿ.ಪರಮೇಶ್ವರ್‌ ನಾಯ್ಕ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಕೊನೆವರೆಗೂ ಬಳ್ಳಾರಿಯಲ್ಲಿಯೇ ಉಳಿದುಕೊಂಡಿದ್ದರೆ, ಗೆಲುವು ಸಿಗುತ್ತಿತ್ತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಅವರು ಕೊನೆಯ ಎರಡು ದಿನ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದರಿಂದ ಬಳ್ಳಾರಿಯಲ್ಲಿ ಸೋಲಿಗೆ ಕಾರಣವಾಯಿತು ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇನ್ನು ಬೆಂಗಳೂರಿನ ಕೇಂದ್ರ ಮತ್ತು ಉತ್ತರ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಇದ್ದರೂ, ಸೋತಿರುವ ಬಗ್ಗೆ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ರಿಜ್ವಾನ್‌ ಅರ್ಷದ್‌ ಮಹದೇವಪುರ ಭಾಗದಲ್ಲಿ ಇನ್ನಷ್ಟು ಶ್ರಮ ಹಾಕಬೇಕಿತ್ತು ಎಂಬ ಮಾತು ಕೇಳಿ ಬಂದಿದೆ. ಅಲ್ಲದೇ ಹಿರಿಯ ಶಾಸಕ ರೋಷನ್‌ ಬೇಗ್‌ ಸಕ್ರಿಯರಾಗಿ ಪಕ್ಷದ ಪರವಾಗಿ ಕೆಲಸ ಮಾಡದಿರವುದು ಸೋಲಿಗೆ ಕಾರಣ ಎಂದು ವಿಶ್ಲೇಷಣೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಎಲ್ಲ ರೀತಿಯ ಸಮರ್ಥ ಅಭ್ಯರ್ಥಿಯಾಗಿದ್ದರೂ ಅವರಿಗೆ ಸೋಲಾ ಯಿತೆಂದರೆ, ಆ ಕ್ಷೇತ್ರದಲ್ಲಿನ ಶಾಸಕರ ಅತಿಯಾದ ಆತ್ಮವಿಶ್ವಾಸ ಕಾರಣ ಎಂಬ ಮಾತುಗಳು ಸಭೆಯಲ್ಲಿ ವ್ಯಕ್ತವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ವೇಳೆ, ಬೆಂಗ ಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಸಂಸದ ಡಿ.ಕೆ. ಸುರೇಶ್‌ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ.

ಲೋಕಸಭೆ ಚುನಾವಣೆ ಫ‌ಲಿತಾಂಶದ ಹಿನ್ನಡೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಫ‌ಲಿತಾಂಶದಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಿಲ್ಲ. ಇನ್ನೂ ನಾಲ್ಕು ವರ್ಷ ಸರ್ಕಾರ ಇರುತ್ತದೆ. ಲೋಕಸಭೆ ಚುನಾವಣೆಗೂ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ.
-ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕ

ಸೋಲಿನ ಪರಾಮರ್ಶೆ ನಡೆದಿದೆ. ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸುವ ಬಗ್ಗೆಯೂ ಚರ್ಚೆಯಾಗಿದೆ. ಮೈತ್ರಿಯಿಂದ ನಮಗೆ ಹಿನ್ನಡೆ ಯಾಯ್ತು ಎಂದು ಹೇಳುವುದಿಲ್ಲ. ಎಲ್ಲಿ ತಪ್ಪಾಗಿದೆ ಎಂದು ನೋಡಬೇಕು. ಬಿಜೆಪಿ ಒಂದು ವರ್ಷದಿಂದ ಸರ್ಕಾರ ಉರುಳಿಸುವ
ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ.
 -ದಿನೇಶ್‌ ಗುಂಡೂ ರಾವ್‌ ಕೆಪಿಸಿಸಿ ಅಧ್ಯಕ್ಷ

ಲೋಕಸಭೆ ಚುನಾವಣೆಯಲ್ಲಿ ನಾವು ಎಡವಿಲ್ಲ. ಬಿದ್ದು ಗಾಯವಾಗಿದೆ. ಇದು ಹೇಗಾಯಿತು ಎನ್ನುವುದರ ಬಗ್ಗೆ ಬೂತ್‌ ಮಟ್ಟದ ಕಾರ್ಯಕರ್ತರ ಜೊತೆ ಕುಳಿತು ಚರ್ಚೆ ಮಾಡಬೇಕು. ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ.
ಇಡೀ ದೇಶದಲ್ಲಿಯೇ ಹೀಗಾಗಿದೆ.
 - ಡಿ.ಕೆ. ಸುರೇಶ್‌, ಸಂಸದ

ಕಾಂಗ್ರೆಸ್‌ನಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲ. ಈಗಾಗಲೇ ಎಲ್ಲ ಸಚಿವರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ವಿಶ್ವಾಸ ಇದೆ ಎಂಬ ಭರವಸೆ ನೀಡಿದ್ದೇವೆ. ಕುಮಾರಸ್ವಾಮಿ ನಾಯಕತ್ವದಲ್ಲಿಯೇ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ.
 - ಎಂ.ಬಿ.ಪಾಟೀಲ್‌, ಗೃಹ ಸಚಿವ

ಮೈತ್ರಿ ಬಗ್ಗೆಯೂ ಅಪಸ್ವರ
ಮೈತ್ರಿ ಬಗ್ಗೆಯೂ ಕೆಲವು ಸಚಿವರು ಅಪಸ್ವರ ಎತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಅಭಿಪ್ರಾಯಗಳನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ಗೆ ವಿಜಯಪುರ ಹಾಗೂ ಉತ್ತರ ಕನ್ನಡ ಕ್ಷೇತ್ರಗಳನ್ನು ಬಿಟ್ಟುಕೊಡುವ ಅಗತ್ಯವಿರಲಿಲ್ಲ. ಆದರೂ ಅವರಿಗೆ ನೀಡಲಾಯಿತು ಎಂಬ ಚರ್ಚೆ ನಡೆಸಲಾಗಿದೆ. ಮೈತ್ರಿ ಕಡಿದುಕೊಳ್ಳುವ ಬಗ್ಗೆ ಕೆಲವು ಸಚಿವರು ಸಲಹೆ ನೀಡಿದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಶೀಘ್ರವೇ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಿ ಮುಂದಿನ ಹೆಜ್ಜೆ ಇಡೋಣ ಎಂದು ಸಮಜಾಯಿಸಿ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈತ್ರಿಯಿಂದ ಆಗಿರುವ ಹಿನ್ನಡೆಯ ಬಗ್ಗೆ ಈಗ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಈ ಫ‌ಲಿತಾಂಶದಿಂದ ಮೈತ್ರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಚಿವರು ತಮ್ಮ ಇಲಾಖೆಗಳ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement

Udayavani is now on Telegram. Click here to join our channel and stay updated with the latest news.

Next