ಬೆಂಗಳೂರು: ಟರ್ಫ್ ಕ್ಲಬ್‌ನಿಂದ ಬರಬೇಕಿರುವ 37.46 ಕೋಟಿ ರೂ. ಬಾಕಿ ಹಣ ವಸೂಲಿ ಮಾಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಬೆಂಗಳೂರು ಟರ್ಫ್ ಕ್ಲಬ್ ಗುತ್ತಿಗೆ ಅವಧಿ 2009 ರ ಡಿ.31ಕ್ಕೆ ಮುಕ್ತಾಯವಾಗಿದೆ. ಆದರೆ, ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಟರ್ಫ್ ಕ್ಲಬ್ ಸ್ಥಳಾಂತರಿಸುವ ಕುರಿತು ಈಗಾಗಲೇ ನಿರ್ಧಾರವಾಗಿದೆ. ಆದರೆ, ಅವರನ್ನು ಸ್ಥಳಾಂತರ ಮಾಡುವುದು ಹಾಗೂ ದಂಡ ವಸೂಲಿ ಏಕಕಾಲಕ್ಕೆ ಮಾಡಲು ಬರುವುದಿಲ್ಲ ಎಂದು ಅಡ್ವೋಕೇಟ್ ಜನರಲ್ ಸಲಹೆ ನೀಡಿದ್ದರಿಂದ ಮೊದಲು ದಂಡ ವಸೂಲಿ ಮಾಡಲು ತೀರ್ಮಾನಿಸಲಾಗಿದೆ. ಟರ್ಫ್ ಕ್ಲಬ್ ಸ್ಥಳಾಂತರ ನಿರ್ಧಾರ ದಿಂದ ಸರ್ಕಾರ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದರು.
ತೀರ್ಮಾನವಿಲ್ಲ: ಬೆಂಗಳೂರು ಟರ್ಫ್ ಕ್ಲಬ್‌ನವರು ವಾರ್ಷಿಕ ಆದಾಯದಲ್ಲಿ ಶೇ.2ರಷ್ಟು ರಾಜ್ಯ ಸರ್ಕಾರಕ್ಕೆ ಬಾಡಿಗೆ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಲಾಭದಲ್ಲಿ ಶೇ.2 ರಷ್ಟು ನೀಡಲು ಮನವಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
30 ವರ್ಷಕ್ಕೆ ಗುತ್ತಿಗೆ: ಇದೇ ವೇಳೆ, ಮೈಸೂರು ಟರ್ಫ್ ಕ್ಲಬ್ ಗುತ್ತಿಗೆ ಅವಧಿಯನ್ನು 30 ವರ್ಷಗಳಿಗೆ ವಿಸ್ತರಿಸಲಾಗಿದ್ದು, ವಾರ್ಷಿಕ ಲಾಭದ ಶೇ.2 ರಷ್ಟು ಸರ್ಕಾರಕ್ಕೆ ಆದಾಯ ನೀಡುವ ಒಪ್ಪಂದ ಮಾಡಿಕೊಂಡು 30 ವರ್ಷಕ್ಕೆ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿಗಳ ಆದಾಯ ಮಿತಿಯನ್ನು 87 ಸಾವಿರದಿಂದ 3 ಲಕ್ಷ ರೂ.ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, 3ಲಕ್ಷದವರೆಗೂ ಆದಾಯ ಇರುವವರು ಅರ್ಜಿ ಹಾಕಬಹುದೆಂದರು.
3 ಅಂತಸ್ತಿಗೆ ಸೀಮಿತ: ಮುಖ್ಯಮಂತ್ರಿ ಬಹುಮಹಡಿ ಕಟ್ಟಡ ಯೋಜನೆಯಲ್ಲಿ 14 ಅಂತಸ್ತಿನ ಕಟ್ಟಡಗಳ ಬದಲು 3 ಅಂತಸ್ತಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಆರ್ಥಿಕ ವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ 14 ಅಂತಸ್ತಿನ ಮಹಡಿ ಕಟ್ಟಡಗಳ ನಿರ್ವಹಣೆ ಕಷ್ಟವಾಗುವು ದರಿಂದ ಈಗಾಗಲೇ ಅರ್ಜಿ ಹಾಕಿರುವ ಮನೆ ಹೊರತು ಪಡಿಸಿ ಮುಂದೆ ನಿರ್ಮಾಣವಾಗುವ ಮನೆಗಳಿಗೆ ಜಿ +3 ಗೆ ಮಿತಿ ಹೇರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಟರ್ಫ್ ಕ್ಲಬ್ ಪ್ರತಿನಿಧಿಗಳಿಂದ ಸಿಎಂ ಭೇಟಿ: ಬೆಂಗಳೂರು ಟರ್ಫ್ ಕ್ಲಬ್ ಬಾಡಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಟರ್ಫ್ ಕ್ಲಬ್ ಚಟುವಟಿಕೆ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನ ಮಾಡಿದೆ. ಹೀಗಾಗಿ ಟರ್ಫ್ ಕ್ಲಬ್ ಪದಾಧಿಕಾರಿಗಳು ಸೋಮವಾರ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ, ಟರ್ಫ್ ಕ್ಲಬ್ ಚಟುವಟಿಕೆ ಸ್ಥಗಿತಗೊಳಿ ಸದಂತೆ ಮನವಿ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಕಪ್ ರೇಸ್ ಆಯೋಜಿಸಲು ತೀರ್ಮಾನಿಸಿದ್ದು, ರೇಸ್‌ಗೆ ಚಾಲನೆ ನೀಡಲು ಮುಖ್ಯಮಂತ್ರಿಗೆ ಆಹ್ವಾನ ನೀಡಲು ಬಂದಿದ್ದೆವು ಎಂದು ಟರ್ಫ್ ಕ್ಲಬ್ ಪ್ರತಿನಿಧಿಗಳು ತಿಳಿಸಿದ್ದಾರೆ.