Advertisement

ದಲಿತ ದಂಪತಿಗಳ ಸನ್ಮಾನಿಸಲು ತೀರ್ಮಾನ

08:47 AM Jul 13, 2017 | |

ಶಿಕಾರಿಪುರ: ತಾವು ಇದುವರೆಗೆ ಹೋಗಿ ಉಪಾಹಾರ ಸ್ವೀಕರಿಸಿದ ದಲಿತರ ಮನೆಯ ದಂಪತಿಗಳನ್ನು ಬೆಂಗಳೂರಿಗೆ ಕರೆಸಿ ಸನ್ಮಾನಿಸಲು ನಿಶ್ಚಯಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

Advertisement

ಪಟ್ಟಣದ ದಲಿತ ಕೇರಿಯ ಅಂಬೇಡ್ಕರ್‌ ನಗರದ ದಲಿತ ಮಹಾದೇವಪ್ಪ ಬಾವಿ ಅವರ ಮನೆಯಲ್ಲಿ ಬೆಳಗ್ಗಿನ ಉಪಾಹಾರ ಸ್ವೀಕರಿಸದ ಬಳಿಕ ನಡೆದ 133ನೇ ಮತಗಟ್ಟೆಯ ಸಭೆಯಲ್ಲಿ ಅವರು ಮಾತನಾಡಿದರು. ನಾನು ದಲಿತರ ಮನೆಗೆ ಹೋಗಿ ಉಪಾಹಾರ
ಮಾಡುವುದನ್ನು ಕಾಂಗ್ರೆಸ್‌ನವರು ಹಗುರವಾಗಿ ನೋಡುತ್ತಿರುವುದಲ್ಲದೆ ಟೀಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರ ಹೆಸರು ಹೇಳಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನವರಿಗೆ ನಮ್ಮನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ನಮ್ಮ ಪಕ್ಷ ವಾಸ್ತವವಾಗಿ ದಲಿತರ ಬಗ್ಗೆ ಕಳಕಳಿ ಹೊಂದಿದ್ದು ಅದು ದಲಿತ ಸಮಾಜಕ್ಕೆ ತಿಳಿದಿದೆ. ಕಾಂಗ್ರೆಸ್‌ನವರು ಡಾ| ಅಂಬೇಡ್ಕರ್‌ ಅವರನ್ನು ನಡೆಸಿಕೊಂಡ ರೀತಿಯನ್ನು ಈಗ ಸ್ಮರಿಸಿಕೊಳ್ಳಬೇಕು. ಡಾ| ಅಂಬೇಡ್ಕರ್‌ ಅವರು ತೀರಿಕೊಂಡಾಗ ದೆಹಲಿಯ ರಾಜ್‌ಘಾಟ್‌ನಲ್ಲಿ ಅವರ ಶವಸಂಸ್ಕಾರಕ್ಕೆ ಅವಕಾಶ ನೀಡದೆ ಕೊನಗೆ ಮುಂಬಯಿಯ ದಾದರ್‌ನಲ್ಲಿ ನೆರವೇರಿಸಲಾಗಿತ್ತು.
ಅಂಬೇಡ್ಕರ್‌ ಅವರು ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ ಕಾಂಗ್ರೆಸ್‌ಗೆ ಮಾತನಾಡುವ
ಯಾವುದೇ ನೈತಿಕ ಹಕ್ಕಿಲ್ಲ. ಡಾ| ಬಾಬು ಜಗಜೀವನ ರಾಂರನ್ನು ಪ್ರಧಾನಿ ಮಾಡಬೇಕೆಂದು ವಾಜಪೇಯಿಯವರು ಮುಂದೆ ಬಂದಾಗ
ವಿರೋಧಿಸಿದ್ದೇ ಕಾಂಗ್ರೆಸ್‌ನವರು. ಆದರೆ ಪ್ರಧಾನಿ ಮೋದಿ ಅವರು ಡಾ| ಅಂಬೇಡ್ಕರ್‌ ದಿನಾಚರಣೆಯನ್ನು ವರ್ಷಪೂರ್ತಿ ಆಚರಿಸಲು ಆದೇಶ ಮಾಡಿದ್ದಲ್ಲದೆ ಅವರು ಲಂಡನ್‌ನಲ್ಲಿ ಓದುತ್ತಿದ್ದ ಮನೆಯನ್ನು ಖರೀದಿಸಿ ಅಲ್ಲಿ ವ್ಯಾಸಂಗ ಮಾಡುವ ಭಾರತದ ದಲಿತ
ವಿಧ್ಯಾರ್ಥಿಗಳಿಗೆ ಅವಕಾಶ ನೀಡಿದ್ದಾರೆ. ಮುಂಬಯಿನ ದಾದರ್‌ನಲ್ಲಿ ಅವರ ಸ್ಮಾರಕಕ್ಕಾಗಿ ಕೋಟ್ಯಂತರ ರೂಗಳನ್ನು ಬಿಡುಗಡೆಗೊಳಿಸಿದ್ದು ಈಗ ಸ್ಮಾರಕದ ಕೆಲಸ ನಡೆಯುತ್ತಿದೆ ಎಂದರು.

ವಿಸ್ತಾರಕರಾಗಿ ಹೊರಟಿರುವ ಪಕ್ಷದ ಕಾರ್ಯಕರ್ತರು ದಲಿತ ಬಂಧುಗಳ ಮನೆಗೆ ಹೋಗಬೇಕು. ಅವರ ವಿಶ್ವಾಸ ಗಳಿಸಬೇಕು. ದಲಿತರ ಪ್ರತಿ ಮನೆಯೂ ಬಿಜೆಪಿ ಮನೆಯಾಗಬೇಕು. ನಿಮ್ಮ ಮನೆಗೆ ದಲಿತರನ್ನು ಕರೆದು ವಿಶ್ವಾಸದಿಂದ ಸತ್ಕರಿಸಬೇಕು ಎಂದರು.
ನಾನು ಅಧಿಕಾರದಲ್ಲಿದ್ದಾಗ ಎಲ್ಲ ಧರ್ಮೀಯರನ್ನ ಗಮನದಲ್ಲಿ ಇಟ್ಟುಕೊಂಡು ಸಮರ್ಥಕವಾಗಿ ಆಡಳಿತ ನಡೆಸಿ ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಟ್ಟಿದ್ದೆ. ಈಗ ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ಸಿದ್ದರಾಮಯ್ಯನವರ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮನವರಿಕೆಯಾಗುವ ರೀತಿಯಲ್ಲಿ ಮುಟ್ಟಿಸಬೇಕು ಎಂದರು. ಶಾಸಕ ಬಿ.ವೈ. ರಾಘ‌ವೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ರೇವಣಪ್ಪ, ಕೆ.ಎಸ್‌. ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೂಪಕಲಾ, ನಾಗರಾಜ ಗೌಡ, ನಾಗರಾಜಪ್ಪ ಮತ್ತಿತರರು ಇದ್ದರು. 

ರಾಜ್ಯ ಸರ್ಕಾರ ಸತ್ತಿದೆ: ಯಡಿಯೂರಪ್ಪ ಆನಂದಪುರ: ರಾಜ್ಯ ಸರ್ಕಾರ ಜನರ ಪಾಲಿಗೆ  ಇದ್ದರೂ ಸತ್ತಂದಿದ್ದು ಕಾನೂನು ಸುವ್ಯವಸ್ಥೆ
ಸಂಪೂರ್ಣ ಹದಗೆಟ್ಟಿದೆ. ಎಲ್ಲೆಡೆ ಲೂಟಿ, ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು. 

Advertisement

ಸಮೀಪದ ಯಡೇಹಳ್ಳಿಯ ದಲಿತರ ಮನೆಗಳಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕೇಂದ್ರದಿಂದ ಬಂದ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ
ವಿಫಲವಾಗಿದೆ. ತನ್ನ ಬೊಕ್ಕಸದಿಂದಲೂ ಬರ ಪರಿಹಾರ ಕಾರ್ಯ ನಿರ್ವಹಿಸುತ್ತಿಲ್ಲ. ಕೇಂದ್ರದಿಂದ ಬಂದ 5600 ಕೋಟಿ ಹಣವನ್ನೂ ಬಳಸಿಕೊಂಡಿಲ್ಲ. ನೀರಾವರಿ ಯೋಜನೆಗಳು ಆಗುತ್ತಿಲ್ಲ. ಪರಿಶಿಷ್ಟ ಜಾತಿ- ವರ್ಗದ ಅಭಿವೃದ್ಧಿಗಾಗಿ ಹಣ ಖರ್ಚು ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗುತ್ತಿದ್ದು ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. 16 ಜಿಲ್ಲೆಗಳನ್ನು ಬರ ಪೀಡಿತ ಜಿಲ್ಲೆಯಾಗಿ ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯ ನಡೆದಿದೆ. ಜಿಲ್ಲೆಗಳನ್ನು
ಆಯ್ಕೆ ಮಾಡಿ ಕೇಂದ್ರಕ್ಕೆ ಸಲ್ಲಿಸಲು ರಾಜ್ಯಕ್ಕೆ ಸುತ್ತೋಲೆ ನೀಡಲಾಗಿದೆ ಎಂದರು. 

ದಲಿತರ ಕಾಲೋನಿಗೆ ಭೇಟಿ ನೀಡಿ ಅವರ ಸಂಕಷ್ಟಗಳನ್ನು ಕೇಳಲಾಗುತ್ತಿದ್ದು ಬಹುತೇಕ ಹೆಣ್ಣುಮಕ್ಕಳು ತಮ್ಮ ಗಂಡಂದಿರ ಸಾರಾಯಿ
ಸಹವಾಸದಿಂದ ನೊಂದಿದ್ದು ಸಾರಾಯಿ ನಿಷೇಧಿಸುವ ಅಗತ್ಯ ಇದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next