Advertisement

ಉಕ್ಕಿನ ನಿರ್ಧಾರಕ್ಕೆ ಸಚಿವರ ಕಿಡಿ

03:45 AM Mar 07, 2017 | Team Udayavani |

ಬೆಂಗಳೂರು: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ವಿವಾದಿತ ಸ್ಟೀಲ್‌ ಬ್ರಿಡ್ಜ್ ಯೋಜನೆಯನ್ನು ದಿಢೀರನೆ ಕೈ ಬಿಡುವ ತೀರ್ಮಾನ ಪ್ರಕಟಿಸಿದ್ದಕ್ಕೆ ಮಂತ್ರಿ ಪರಿಷತ್‌ ಸಭೆಯಲ್ಲಿ ಸಚಿವರುಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಸಂಪುಟ ಸಭೆಯಲ್ಲಿ ಸ್ಟೀಲ್‌ ಬ್ರಿಡ್ಜ್ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ತೆಗೆದುಕೊಂಡ ತೀರ್ಮಾನವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸದೇ ಏಕಾಏಕಿ ಯೋಜನೆ ರದಟಛಿತಿ ಪ್ರಕಟಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಸಚಿವರು ಇದರಿಂದ ಸರ್ಕಾರ ಕಿಕ್‌ ಬ್ಯಾಕ್‌ ಪಡೆದಿದೆ ಎನ್ನುವ ಬಿಜೆಪಿ ಆರೋಪವನ್ನು ಸಾಬೀತು ಪಡಿಸಿ ದಂತಾಯಿತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಒಂದು ವೇಳೆ ಸ್ಟೀಲ್‌ ಬ್ರಿಡ್ಜ್ ಯೋಜನೆ ರದ್ದು ಪಡಿಸುವುದಿದ್ದರೂ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದ ನಿರ್ಧಾರ ತೆಗೆದು ಕೊಂಡು ಪ್ರಕಟಿಸಿದ್ದರೆ ಉತ್ತಮ ವಾಗಿರುತ್ತಿತ್ತು ಎಂದು ಅಭಿಪ್ರಾಯ ಪಟ್ಟ ಸಚಿವರು, ಬೆಂಗಳೂರು ನಗರಾಭಿವೃದಿ ಸಚಿವ ಜಾರ್ಜ್‌ ಅವರು ಭಾವೋ ದ್ವೇಗಕ್ಕೆ ಒಳಗಾಗಿ ಆರೋಪವನ್ನು ಸಹಿಸಲಾರದೇ, ಸ್ಟೀಲ್‌ ಬ್ರಿಡ್ಜ್ ಯೋಜನೆ ರದ್ದು ಪಡಿಸಿದ್ದಾಗಿ ಪ್ರಕಟಿಸಿರುವುದು ಸಮಂಜಸವಲ್ಲ ಎದು ಮಂತ್ರಿ ಪರಿಷತ್‌ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಹಿರಿಯ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಗಳು ಸಚಿವ ಜಾರ್ಜ್‌ ನೆರವಿಗೆ ಧಾವಿಸಿ ಸ್ಟೀಲ್‌ ಬ್ರಿಡ್ಜ್ ಯೋಜನೆ ರದ್ದುಪಡಿಸುವ ಘೋಷಣೆ ಮಾಡುವ ಮುನ್ನ ಜಾರ್ಜ್‌ ಅವರು, ತಮ್ಮೊಂದಿಗೆ ಚರ್ಚಿಸಿ ಅನುಮತಿ ಪಡೆದಿದ್ದರು ಎಂದು ಸಿದ್ದರಾಮಯ್ಯ ಸಮಜಾಯಿಸಿ ನೀಡಿದರು ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿ ರುವ ತೋಟಗಾರಿಕೆ, ನೀರಾವರಿ, ಸಕ್ಕರೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ನೇರವಾಗಿ ಸಂಬಂಧ ಪಡುವ ಸುಮಾರು ಹತ್ತು ಇಲಾಖೆಗಳನ್ನು ಎರಡನೇ ರಾಜಧಾನಿ ಎಂದು ಪ್ರತಿಬಿಂಬಿಸಲಾಗುತ್ತಿರುವ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಗೊಳಿಸಿ ಉತ್ತರ ಕರ್ನಾಟಕ ಭಾಗದ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ಸಲಹೆ ನೀಡಿದರು.

ಇಲಾಖೆಗಳ ಸ್ಥಳಾಂತರದಿಂದ ಸುವರ್ಣ ಸೌಧವನ್ನೂ ಸಹ ಸಂಪೂರ್ಣವಾಗಿ ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಪ್ರಸ್ತುತ ಅಧಿವೇಶನ ಸಂದರ್ಭದಲ್ಲಿ ಮಾತ್ರ ಸುವರ್ಣ ಸೌಧ ಚಟುವಟಿಕೆಯಿಂದ ಇರುತ್ತದೆ. ಉಳಿದ ಅವಧಿಯಲ್ಲಿ ಬಿಕೊ ಎನ್ನುತ್ತಿರುವ ಸುವರ್ಣ ಸೌಧದ ಮೆರಗು ಹೆಚ್ಚಿಸಲು ಪ್ರಮುಖ ಇಲಾಖೆಗಳ ಸ್ಥಳಾಂತರ ಅತ್ಯಗತ್ಯ ಎಂದು ಮಂತ್ರಿ ಪರಿಷತ್‌ ಸಭೆಯಲ್ಲಿ ಸಚಿವರು ಪ್ರತಿಪಾದಿಸಿದ್ದಾರೆ. ಮಂತ್ರಿ ಪರಿಷತ್‌ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್‌ ಹೊರತುಪಡಿಸಿ ಬಹುತೇಕ ಎಲ್ಲ ಸಂಪುಟ ಮತ್ತು ರಾಜ್ಯ ಸಚಿವರು ಭಾಗವಹಿಸಿದ್ದರು. ಉಳಿದಂತೆ ಸಚಿವ ಸಂಪುಟ ಸಭೆಯಂತೆ ಯಾವುದೇ ನಿರ್ಧಿಷ್ಠ ಅಜೆಂಡಾ ಇದ್ದಿಲ್ಲವಾದರೂ ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘ‌ವಾಗಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸನ್ನು ಚುನಾವಣಾ ದೃಷ್ಠಿಯಿಂದ ಹೆಚ್ಚಿಸುವ ಬಗ್ಗೆಯೇ ಚರ್ಚಿಸಲಾಗಿದೆ.

Advertisement

ಜೊತೆಗೆ ನೋಟು ಅಮಾನ್ಯದಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾದ ಆದಾಯ ಕಡಿತ ಕುರಿತು ಚರ್ಚಿಸಿ ಕೇಂದ್ರ ಸರ್ಕಾರದ ಬಳಿ ಇದಕ್ಕೆ ಪರಿಹಾರ ಕೋರಲು ಪ್ರಸ್ತಾಪವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next