ಜೇಮ್ಸ್ ವೆಸ್ಲರ್, 19ನೇ ಶತಮಾನದ ಖ್ಯಾತ ಚಿತ್ರಕಲಾವಿದರಲ್ಲಿ ಒಬ್ಬ. ಹುಟ್ಟಿದ್ದು ಅಮೆರಿಕದ ಮೆಸಾಚುಸೆಟ್ಸ್ನಲ್ಲಾದರೂ, ಬದುಕಿನ ಉತ್ತರಾರ್ಧವನ್ನು ಈತ ಕಳೆದದ್ದು, ಇಂಗ್ಲೆಂಡಿನ ಲಂಡನ್ ನಗರದಲ್ಲಿ. ಅವನ ಪೀಕಾಕ್ ರೂಮ್, ಫೈಟಿಂಗ್ ಪೀಕಾಕ್ಸ್, ಸಿಂಪನಿ ಇನ್ ವೈಟ್, ಎಟ್ ದ ಪಿಯಾನೋ ಮುಂತಾದ ಕಲಾಕೃತಿಗಳು, ಜಗತ್ತಿನ ಪ್ರಮುಖ ವಸ್ತು ಸಂಗ್ರಹಾಲಯ ಗಳಲ್ಲಿ, ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶನಕ್ಕಿವೆ.
ವೆಸ್ಲರ್‌ನ ಕಲಾಕೃತಿಗಳು, ಈಗ ಹಲವು ಸಾವಿರ ಡಾಲರು ಗಳಷ್ಟು ಬೆಲೆಬಾಳುತ್ತ ವಾದರೂ, ಆತ ಬದುಕಿದ್ದ ಕಾಲದಲ್ಲಿ, ಅವೇನೂ ಅಂಥ ದೊಡ್ಡ ಶ್ರೀಮಂತಿಕೆಯನ್ನು ತಂದುಕೊಡಲಿಲ್ಲ. ವೆಸ್ಲರ್ ಕಲಾವಿದನಷ್ಟೇ ಅಲ್ಲ, ಮಾತುಗಾರಿಕೆಯ ಕಲೆ ಅರಿತವನು ಕೂಡ. ಒಮ್ಮೆ, ಪಾರ್ಟಿಯೊಂದರಲ್ಲಿ ಒಬ್ಟಾಕೆ, “ನೀವು ಹುಟ್ಟಿದ್ದೆಲ್ಲಿ?’ ಎಂದು ಕೇಳಿದಳಂತೆ. ವೆಸ್ಲರ್ “ಲಾವೆಲ…’ ಎಂದು ಉತ್ತರಿಸಿದ.
ಅದು, ಮೆಸಾಚುಸೆಟ್ಸ್ ಪಟ್ಟಣದಲ್ಲಿದ್ದ ಸಣ್ಣ ಪ್ರಾಂತ್ಯ. ಆಗ ಅದು ಆರ್ಥಿಕವಾಗಿ ಹಿಂದುಳಿದ್ದವರ ನೆಲೆಯಾಗಿತ್ತು. ಅಲ್ಲಿನ ಜನರಿಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಅಮೆರಿಕನ್ನರೇ ಭಾವಿಸಿದ್ದ ಕಾಲ ಅದು. ಅಂದಮೇಲೆ, ಲಂಡನ್ನಿನ ಆ ಕುಲೀನ ಮಹಿಳೆಗೆ, ಈತನ ಮೇಲೆ ಅದೆಷ್ಟು ಕುತ್ಸಿತ ಭಾವ ಬಂದಿರಬಹುದು ಎಂದು ಊಹಿಸಬಹುದು. “ಓಹ್! ಆ ಜಾಗದಲ್ಲೇ? ಹೋಗಿ ಹೋಗಿ ಅಂಥ ಜಾಗದಲ್ಲೇಕೆ ಹುಟ್ಟಿದಿರಿ?’ ಎಂದು ಕೇಳಿದಳು ಆಕೆ.
“ಏನು ಮಾಡಲಿ ಮೇಡಮ…? ಹುಟ್ಟುವ ಸಮಯದಲ್ಲಿ, ತಾಯಿಯ ಬಳಿ ಇರಬೇಕೆಂಬುದು ನನ್ನ ಬಯಕೆಯಾಗಿತ್ತು’ ಎಂದು ಉತ್ತರಿಸಿದ ವೆಸ್ಲರ್. ಜಾಣ ಮಾತಿಗೆ ಮಾತ್ರವಲ್ಲ, ಕಟುವಾಗಿ ಟೀಕೆ ಮಾಡುವುದಕ್ಕೂ ಆತ ಹೆಸರಾಗಿದ್ದ. ವೆಸ್ಲರ್‌ನ ದೌರ್ಬಲ್ಯವಿದ್ದುದು ದುಂದುವೆಚ್ಚದಲ್ಲಿ. ಅವನ ಕೈಯಲ್ಲಿ ಕಾಸು ನಿಲ್ಲುತ್ತಿರಲಿಲ್ಲ. ಅವರಿವರಿಂದ ಕಡ ಕೇಳುವುದು ಮಾಮೂಲಿಯಾಯಿತು. ಸಾಲದ ಬೆಟ್ಟ ಬೆಳೆಯಿತು.
ಕಡೆಗೊಮ್ಮೆ, ಸಾಲಗಾರರು ಮನೆಗೆ ಎಡತಾಕಿದರು. ಮಾತಿನ ಮಲ್ಲನಾದ್ದರಿಂದ, ವೆಸ್ಲರ್ ಹಾಗೆ ಬಂದವರನ್ನೆಲ್ಲ ಒಂದಿಲ್ಲೊಂದು ನೆಪ, ಕತೆ ಹೇಳಿ ಸಾಗಹಾಕುತ್ತಿದ್ದ. ಆದರೆ ಅದೊಂದು ದಿನ ಬಂದ ವ್ಯಕ್ತಿ ಮಾತ್ರ, ಸಾಲ ವಸೂಲು ಮಾಡದೆ ವಾಪಸಾಗುವುದಿಲ್ಲ ಎಂದು ಹಠ ಹಿಡಿದು ಕೂತ. ವೆಸ್ಲರ್‌ನ ಮಾತಿನ ಬತ್ತಳಿಕೆಯಲ್ಲಿದ್ದ ಬಾಣಗಳೆಲ್ಲ ಖರ್ಚಾದವು. ಕೊನೆಯ ಅಸOಉ ಎಂಬಂತೆ, ಒಂದೊಳ್ಳೆಯ ಶಾಂಪೇನ್ ಬಾಟಲಿ ತಂದು, ಅವನು ಆ ವ್ಯಕ್ತಿಯ ಮುಂದಿಟ್ಟ.
ಕುಡಿಸಿ ಅವನನ್ನು ಸಮಾಧಾನಪಡಿಸೋಣ ಎಂಬುದು ವೆಸ್ಲರನ ಹಂಚಿಕೆ! ಅದು ತುಂಬಾ ದುಬಾರಿಯಾದ ಶಾಂಪೇನ್. ಸಾಲ ಕೊಟ್ಟವನಿಗೆ ಆ ಬಾಟಲನ್ನು ನೋಡುತ್ತಲೇ ಮತ್ತಷ್ಟು ಉರಿಯಿತು. “ವೆಸ್ಲರ್ ಅವರೇ, ಕೈಯಲ್ಲಿ ಕಾಸಿಲ್ಲ ಎನ್ನುತ್ತೀರಿ. ಇಷ್ಟೊಂದು ಬೆಲೆಯ ಮದ್ಯದ ಬಾಟಲಿಗೆ ಹಣ ಹೇಗೆ ಹೊಂದಿಸಿದಿರಿ?’ ಎಂಬುದನ್ನು ಹೇಳಿಬಿಡಿ ಎಂದನಾತ. ಬಾಟಲಿಯ ಮುಚ್ಚಳ ತೆಗೆದು, ಒಂದಷ್ಟು ಮದ್ಯವನ್ನು ಗ್ಲಾಸಿಗೆ ಸುರಿಯುತ್ತಾ ವೆಸ್ಲರ್ ಹೇಳಿದ: “ಇದಕ್ಕಿನ್ನೂ ನಾನು ದುಡ್ಡು ಕೊಟ್ಟಿಲ್ಲ ಸ್ವಾಮಿ!’
* ರೋಹಿತ್ ಚಕ್ರತೀರ್ಥ