Advertisement

13ಕ್ಕೇರಿದ ಸಾವು, 8 ಮಂದಿ ಚಿಂತಾಜನಕ

11:33 AM Dec 17, 2018 | Team Udayavani |

ಮೈಸೂರು: ಚಾಮರಾಜನಗರ ಜಿಲ್ಲೆಯ ಸುಳವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆ ಪ್ರಕರಣದ ಸಾವಿನ ಸರಣಿ ಮುಂದುವರಿದಿದೆ. ಘಟನೆಯಲ್ಲಿ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 

Advertisement

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಎಂ.ಜಿ.ದೊಡ್ಡಿಯ ಮಹೇಶ್ವರಿ(30) ಹಾಗೂ ಬಿದರಹಳ್ಳಿಯ ಸಾಲಮ್ಮ (35) ಮೃತರು. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಇಬ್ಬರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಇಬ್ಬರು ಮಹಿಳೆಯರು ಭಾನುವಾರ ಸಾವನಪ್ಪಿದ್ದಾರೆ.

ಉಳಿದಂತೆ ನಗರದ ಕೆ.ಆರ್‌. ಆಸ್ಪತ್ರೆ ಸೇರಿದಂತೆ ಇನ್ನಿತರ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಆರೋಗ್ಯ ಶಿಕ್ಷಣ ಸಚಿವ ಶಿವಾನಂದ ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಇನ್ನಿತರ ಜನಪ್ರತಿನಿಧಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದರು. 

8 ಮಂದಿ ಚಿಂತಾಜನಕ: ಈ ನಡುವೆ ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶಿವಾನಂದ್‌ ಪಾಟೀಲ್‌, ಪ್ರಕರಣದಲ್ಲಿ ಈಗಾಗಲೇ 11 ಮಂದಿ ಮೃತಪಟ್ಟಿದ್ದರು. ಇದೀಗ ಮತ್ತಿಬ್ಬರು ಮೃತಪಟ್ಟಿದ್ದು, ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ.

ಜತೆಗೆ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಇಬ್ಬರು, ಅಪೋಲೋ ಆಸ್ಪತ್ರೆಯ ಮೂವರು ಹಾಗೂ ಕೆ.ಆರ್‌.ಆಸ್ಪತ್ರೆಯ ಒಬ್ಬ ರೋಗಿಯ ಸ್ಥಿತಿ ಗಂಭೀರವಾಗಿದ್ದು, ಒಟ್ಟಾರೆ 8 ಮಂದಿಯ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇವರಿಗೆ ಇನ್ನೂ 15 ದಿನಗಳು ಚಿಕಿತ್ಸೆ ನೀಡಲಾಗುವುದು ಎಂದರು.

Advertisement

ತನಿಖೆ ನಡೆಯುತ್ತಿದೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್‌ ತನಿಖೆ ನಡೆಯುತ್ತಿದ್ದು, ಸಂಪೂರ್ಣ ಮಾಹಿತಿಯನ್ನು ಅಧಿವೇಶನದಲ್ಲಿ ನೀಡಲಾಗುವುದು. ಈಗಾಗಲೇ ಕೆಲವರನ್ನು ಬಂಧಿಸಿದ್ದು, ತನಿಖೆ ನಂತರವಷ್ಟೇ ವಿಷ ಹಾಕಿದ್ದು ಯಾರೆಂಬುದು ತಿಳಿಯಲಿದೆ. ಅಲ್ಲದೇ ಘಟನೆಗೆ ಕಾರಣವೇನೆಂಬ ಬಗ್ಗೆ ಗೃಹ ಸಚಿವರು ಅಧಿವೇಶನದಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ.

ಈಗಾಗಲೇ ಎಲ್ಲಾ ಸ್ಯಾಂಪಲ್‌ಗ‌ಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿದ್ದು, ಪ್ರಯೋಗಾಲಯದ ವರದಿ ಬರಲು 4 ದಿನಗಳು ಅಗತ್ಯವಿದೆ. ಈ ವರದಿ ಬಂದ ನಂತರವೇ ಪ್ರಸಾದಲ್ಲಿನ ವಿಷದ ಪ್ರಮಾಣ ಹಾಗೂ ಘಟನೆಗೆ ಸೂಕ್ತ ಕಾರಣವೇನೆಂಬುದು ತಿಳಿಯಲಿದೆ ಎಂದು ಹೇಳಿದರು.

ಆರೋಗ್ಯ ವಿಚಾರಣೆ: ಈ ನಡುವೆ ಸಚಿವರು ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಘಟನೆಯಲ್ಲಿ ಅಸ್ವಸ್ಥಗೊಂಡಿರುವ ರೋಗಿಗಳಿಗೆ ಕೆ.ಆರ್‌.ಆಸ್ಪತ್ರೆ, ಜೆಎಸ್‌ಎಸ್‌, ಅಪೋಲೋ, ಸುಯೋಗ್‌ ಸೇರಿದಂತೆ ಇನ್ನಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವರು, ರೋಗಿಗಳ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸ್ಥಳೀಯ ವೈದ್ಯರಿಂದ ಮಾಹಿತಿ ಪಡೆದರು. ಪ್ರಮುಖವಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್‌.ಧ್ರುವನಾರಾಯಣ್‌, ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡ ಕೆ.ಶಿವರಾಂ, ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಮತ್ತಿತರರು ರೋಗಿಗಳ ಯೋಗಕ್ಷೇಮ ವಿಚಾರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next