ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವ ವೈದ್ಯ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ಟಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿಶಾದ್ (27) ಮೃತನು.
ಆಡುಗೋಡಿ ನಿವಾಸಿ ನಿಶಾದ್, ಸ್ನೇಹಿತರ ಜತೆ ಬೈಕ್‌ಗಳಲ್ಲಿ ಭಾನುವಾರ ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ನಿಶಾದ್, ಕೊಡಿಗೆಹಳ್ಳಿ ಮೇಲ್ಸೇತುವೆ ಬಳಿ ಆಯ ತಪ್ಪಿ ರಸ್ತೆವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಎಂಬಿಬಿಎಸ್ ಪೂರ್ಣಗೊಳಿಸಿದ್ದ ನಿಶಾದ್, ಸದ್ಯದಲ್ಲಿಯೇ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕಿತ್ತು. ಬಾಲ್ಯದಿಂದಲೇ ಆತನಿಗೆ ವೈದ್ಯನಾಗುವ ಕನಸಿತ್ತು. ಆದರೆ, ಆತನ ಕನಸು ಕೈಗೂಡಲಿಲ್ಲ ಎಂದು ನಿಶಾದ್ ಪೋಷಕರು ಕಣ್ಣೀರಿಟ್ಟರು ಎಂದು ಪೊಲೀಸರು ತಿಳಿಸಿದರು.
ಟೆಕ್ಕಿ ಸಾವು: ಮತ್ತೂಂದು ಪ್ರಕರಣದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಮಹದೇವಪುರದ ಎಐಸಿ ಸ್ಕೇರ್ ಬಳಿ ಶನಿವಾರ ತಡರಾತ್ರಿ ನಡೆದಿದೆ. ಪ್ರತಿಷ್ಠಿತ ಕಂಪನಿಯೊಂದರ ಸಾಫ್ಟ್ವೇರ್ ಇಂಜಿನಿಯರ್ ಹರೀಶ್ (26) ಮೃತರು.
ಕೆ.ಆರ್.ಪುರದ ಪುಷ್ಪಾಂಜಲಿ ಚಿತ್ರ ಮಂದಿರಲ್ಲಿ ಸಿನಿಮಾ ವೀಕ್ಷಿಸಿ ತಡರಾತ್ರಿ 12:30ರ ಸುಮಾರಿಗೆ ಬೈಕ್‌ನಲ್ಲಿ ತನ್ನ ಸ್ನೇಹಿತ ಪ್ರಗತೀಶ್ ಜತೆ ಮಾರತ್‌ಹಳ್ಳಿಗೆ ವಾಪಾಸ್ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಹರೀಶ್ ಮೃತಪಟ್ಟಿದ್ದು, ಆತನ ಸ್ನೇಹಿತ ಪ್ರಗತೀಶ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್. ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.