Advertisement

7ನೇ ಮಹಡಿಯಿಂದ ಜಿಗಿದು ತಾಯಿ –ಮಗು ದುರ್ಮರಣ

01:16 AM Jul 03, 2019 | Lakshmi GovindaRaj |

ಬೆಂಗಳೂರು: ಮಹಿಳಾ ಚಾರ್ಟೆಟೆಡ್‌ ಅಕೌಂಟೆಟ್‌ವೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌.ಟಿ.ನಗರದಪೊಲೀಸ್‌ ಠಾಣಾ ವಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

ಆರ್‌.ಟಿ.ನಗರದ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಭಾವನಾ (29) ಹಾಗೂ ಆಕೆಯ ಎರಡು ವರ್ಷದ ಪುತ್ರ ದೇವಂತ್‌ ಮೃತರು. ಭಾವನಾಗೆ ಪತಿ ಹರಿಹಂಥ್‌ ಕಿರುಕುಳ ನೀಡುತ್ತಿದ್ದ. ಅದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಹರಿಹಂಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಐದು ವರ್ಷಗಳ ಹಿಂದೆ ಗುರುಹಿರಿಯರ ನಿಶ್ಚಯದಂತೆ ಭಾವನಾ ಹಾಗೂ ಹರಿಹಂಥ್‌ ಮದುವೆಯಾಗಿದ್ದು, ದಂಪತಿಗೆ ಎರಡು ವರ್ಷದ ದೇವಂತ್‌ ಎಂಬ ಮಗನಿದ್ದ. ಹರಿಹಂಥ್‌ ಕುಟುಂಬ ಆರ್‌.ಟಿ.ನಗರದಲ್ಲಿರುವ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ಏಳನೇ ಮಹಡಿಯಲ್ಲಿ ವಾಸವಾಗಿದ್ದು, ಜತೆಗೆ ಹರಿಹಂಥ್‌ ಪೋಷಕರು ಹಾಗೂ ಇಬ್ಬರು ತಮ್ಮಂದಿರು ಅದೇ ಮನೆಯಲ್ಲಿಯೇ ನೆಲೆಸಿದ್ದರು. ಹರಿಹಂಥ್‌ ಖಾಸಗಿ ಜಾಹೀರಾತು ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಭಾವನಾ ಚಾರ್ಟೆಟೆಡ್‌ ಅಕೌಂಟೆಟ್‌ (ಸಿಎ) ಓದುತ್ತಿದ್ದು, ಅರ್ಧಕ್ಕೆ ಸ್ಥಗಿತಗೊಳಿಸಿ ಮನೆಯಲ್ಲೇ ಇದ್ದರು.

ಕ್ಷುಲ್ಲಕ ಕಾರಣಕ್ಕೆ ಜಗಳ: ಈ ಮಧ್ಯೆ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕೆ ನಿತ್ಯ ವಾಗ್ವಾದ ನಡೆಯುತ್ತಿತ್ತು. ಅಲ್ಲದೆ, ಹರಿಹಂಥ್‌ ವಿನಾಃ ಕಾರಣ ಕಿರುಕುಳ ನೀಡುತ್ತಿದ್ದ. ಆಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾನಸಿಕವಾಗಿ ತೊಂದರೆ ನೀಡುತ್ತಿದ್ದು, ಹಲ್ಲೆ ಕೂಡ ಮಾಡಿದ್ದ. ಅದೇ ವಿಚಾರಕ್ಕೆ ನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು.

ಮಂಗಳವಾರ ಆತ್ಮಹತ್ಯೆಗೂ ಮುನ್ನ ದಂಪತಿ ನಡುವೆ ಜಗಳ ನಡೆದಿದೆ. ಈ ವೇಳೆ ಹರಿಹಂಥ್‌ ಪತ್ನಿಯನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ಇದಕ್ಕೆ ನೊಂದ ಭಾವನಾ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

Advertisement

ಆದರೆ, ತಾನೂ ಸತ್ತ ಬಳಿಕ ತನ್ನ ಪುತ್ರ ಅನಾಥನಾಗುತ್ತಾನೆ ಎಂಬ ಭಾವನೆಯಿಂದ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೊಠಡಿಯ ಹಿಂಬದಿ ಬಾಗಿಲಿನಿಂದ ಎರಡು ವರ್ಷದ ಪುತ್ರನೊಂದಿಗೆ ಜಿಗಿದಿದ್ದಾರೆ. ಬಿದ್ದ ರಭಸಕ್ಕೆ ಮಗು ದೇವಂತ್‌ ಸ್ಥಳದಲ್ಲೇ ಮೃತಪಟ್ಟಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಭಾವನಾರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಿಸದೆ ಆಸ್ಪತ್ರೆಯಲ್ಲಿ ಆಕೆ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಮಗಳಿಗೆ ನಿತ್ಯ ನಿಂದನೆ, ಕಿರುಕುಳ: ಹರಿಹಂತ್‌ ಪುತ್ರಿಗೆ ಪದೇ ಪದೆ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದ. ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ. ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಭಾವನಾ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಆರ್‌.ಟಿ.ನಗರ ಪೊಲೀರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next