ಮಹದೇವಪುರ: ದೊಡ್ಡನೆಕ್ಕುಂದಿಯ ಇಸ್ರೋ ಕಟ್ಟಡದ ನಾಲ್ಕನೆ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟಣೆ ಬುಧವಾರ ನಡೆದಿದೆ. ನಗರದ ಹೆಸರಘಟ್ಟ ಸಮೀಪದ ಕುರುಬರಹಳ್ಳಿ ನಿವಾಸಿಯಾದ ಮುನಿಯಲ್ಲಪ (38) ಮೃತ ಕಾರ್ಮಿಕ.
ದೊಡ್ಡನಕ್ಕುಂದಿಯ ಇಸ್ರೋ ಕಂಪೆನಿಯಲ್ಲಿ ಜಯಚಿತ್ರ ಕಂಪನಿಗೆ ಸಂಬಂಧಿಸಿದ ಆರ್‌ವಿಆರ್ ಪ್ರಾಜೆಕ್ಟ್ ಪ್ರ„ವೇಟ್ ಲಿಮಿಟೆಡ್ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಬುಧವಾರ ಮದ್ಯಾಹ್ನ ಸುಮಾರು 12.30ರಲ್ಲಿ 4ನೇ ಮಹಡಿಯಲ್ಲಿ ಸೀಟ್ ಪಿಕ್ಸ್ ಮಾಡುವಂತೆ ಇಂಜಿನಿಯರ್‌ಗಳು ಮುನಿಯಲ್ಲಪ್ಪಗೆ ತಿಳಿಸಿದ್ದಾರೆ.
ಸೀಟ್ ಅಳವಡಿಕೆ ಮಾಡುತ್ತಿದ್ದ ವೇಳೆ ಮುನಿಯಲ್ಲಪ್ಪ ನಿಂತುಕೊಂಡಿದ್ದ ಪೈಪ್ ಮುರಿದಿದೆ. ಹೀಗಾಗಿ ಮುನಿಯಲ್ಲಪ್ಪ 80 ಅಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೆ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಚ್.ಎ.ಎಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪರಿಹಾರಕ್ಕೆ ಅಗ್ರಹಿಸಿ ಪ್ರತಿಭಟನೆ: ದಲಿತ ಬಹುಜನ ಸಂಘರ್ಷ ಸಮಿತಿ ಕೆಂಪುಸೇನೆ ಹಾಗೂ ಮಾದಿಗ ದಂಡೋರ ಸಂಘಟನೆಗಳು ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಗುರುವಾರ ಇಸ್ರೋ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದವು.
ಭದ್ರತೆ ಕವಚಗಳು ನೀಡದಿರುವುದರಿಂದ ಕಾರ್ಮಿಕ ಸಾವಿಗೀಡಾಗಿದ್ದಾನೆ. ನಿರ್ಮಾಣ ಗುತ್ತಿಗೆ ಪಡೆದಿರುವ ಕಂಪನಿ ನಿರ್ಲಕ್ಷ್ಯವಹಿಸಿರುವ ಹಿನ್ನೆಲೆ ಈ ರೀತಿಯ ದುರ್ಘಟನೆ ನಡೆದಿದೆ. ತಪ್ಪಿತಸ್ಥರ ವಿರುದ್ದ ಕಾನೂನಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.