ತೆಕ್ಕಟ್ಟೆ: ಇಲ್ಲಿನ ಪಠೇಲರ ಬೆಟ್ಟು ವಿನಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿ ಕರುವೊಂದು ಅಸುನೀಗಿದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ .
ಘಟನೆಯ ವಿವರ: ಇಲ್ಲಿನ ಪಠೇಲರ ಬೆಟ್ಟು ಕೃಷ್ಣ ಮೊಗವೀರ ಅವರ ಮನೆಯ ಮುಂಭಾಗದಲ್ಲಿ ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಮನೆಯ ಎದುರಿನಲ್ಲಿ ಹಾದುಹೋದ ವಿದ್ಯುತ್ ತಂತಿ ಮೇಲೆ ಸಮೀಪದಲ್ಲಿರುವ ತಾಳೆಮರದ ಗರಿಯು ಬಿದ್ದ ಪರಿಣಾಮವಾಗಿ ಒಮ್ಮೆಲೆ ಬೆಂಕಿ ಕಾಣಿಸಿಕೊಂಡಿತು. ಮನೆಯಲ್ಲಿದ್ದ ಗಿರಿಜಾ ಮೊಗವೀರ ಅವರು ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಸಿಬಂದಿಗೆ ಮಾಹಿತಿ ನೀಡಲು ಪ್ರಯತ್ನಿಸಿದರು. ಯಾರೂ ಸಂಪರ್ಕಕ್ಕೆ ಸಿಗದ ಕಾರಣ ಬಳಿಕ ಸುಮ್ಮನಾದರು. ಆದರೆ ಅವರ ಸಹಿತ ಈ ಮನೆಯವರಿಗೆ ವಿದ್ಯುತ್‌ತಂತಿ ತುಂಡಾಗಿ ಬಿದ್ದಿರುವ ವಿಷಯ ಗಮನಕ್ಕೆ ಬಂದಿರಲಿಲ್ಲ. ಮನೆಮಂದಿ ಶುಕ್ರವಾರ ಮುಂಜಾನೆ ಎಂದಿನಂತೆ ಎದ್ದು ತಮ್ಮ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದರು.
ಇಲ್ಲಿಗೆ ಸಮೀಪದಲ್ಲಿರುವ ಕೃಷಿಕ ಗೋವಿಂದ ಪೂಜಾರಿಯವರು ಎಂದಿನಂತೆ ಹಾಲು ಕರೆದು ಕರುವನ್ನು ಕೊಟ್ಟಿಗೆಯಿಂದ ಹೊರಗಡೆ ಬಿಟ್ಟಾಗ ಕರು ಮೇಯಲು ಎಂದು ಓಡಿ ಹೋಗಿ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಅಸುನೀಗಿತು.
ತಪ್ಪಿದ ಸಂಭವನೀಯ ಅನಾಹುತ : ಕರು ಓಡಿದ ಬೆನ್ನಲ್ಲಿಯೇ ಕೃಷಿಕ ಗೋವಿಂದ ಪೂಜಾರಿಯವರು ಅದನ್ನು ಹಿಡಿಯಲು ಬರುತ್ತಿದ್ದಂತೆ ಅಲ್ಲಿಯೇ ಇದ್ದ ಗಿರಿಜಾ ಮೊಗವೀರ ಅವರು ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಅನುಮಾನಗೊಂಡರು. ತತ್‌ಕ್ಷಣವೇ ಅವರು ಗೋವಿಂದ ಪೂಜಾರಿ ಅವರು ಮುಂದೆ ಹೋಗದಂತೆ ತಡೆದುದರಿಂದ ಸಂಭವನೀಯ ದುರಂತದಿಂದ ಪಾರಾದರು.
ಘಟನೆ ತಿಳಿಯುತ್ತಿದ್ದಂತೆ ಗೋಪಾಡಿ ಮೆಸ್ಕಾಂ ಇಲಾಖೆಯ ಶಾಖಾಧಿಕಾರಿ ಸುರೇಶ್ ಬಾಬು, ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಕಾಂಚನ್ ಕೊಮೆ, ತೆಕ್ಕಟ್ಟೆ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ತೆಕ್ಕಟ್ಟೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.