ಬೆಂಗಳೂರು: ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಡಿಕ್ಕಿ ಹೊಡೆದ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟ ಘಟನೆ ತಲಘಟ್ಟಪುರ ಬಳಿ ನಡೆದಿದೆ. ಹೆಮ್ಮಿಗೆಪುರ ವಾರ್ಡ್‌ನ ಗಾಣಿಗರಪಾಳ್ಯದ ರವಿ ಮತ್ತು ಮಂಜುಳಾ ದಂಪತಿ ಪುತ್ರ ಮನು (11) ಮೃತ ಬಾಲಕ.
ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನು, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸೈಕಲ್‌ನಲ್ಲಿ ಸ್ನೇಹಿತರ ಜತೆ ಆಟವಾಡುತ್ತಿದ್ದ. ಈ ವೇಳೆ ತಲಘಟ್ಟಪುರ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿತ್ತು. ಇದನ್ನು ಗಮನಿಸದ ಮನು, ರಸ್ತೆ ಬದಿಯಲ್ಲಿ ಸೈಕಲ್ ಜತೆ ನಿಂತಿದ್ದ.
ಇದೇ ವೇಳೆ ರೋಡ್ ರೋಲರ್ ಚಾಲಕ ವಾಹನ ಹಿಂದಕ್ಕೆ ತೆಗೆಯುವಾಗ, ರೋಡ್ ರೋಲರ್ ಮನುಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತನ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರವಾಗಿ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಲಕ ರೋಡ್ ರೋಲರ್ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದರು. ಕೂಲಿ ಕಾರ್ಮಿಕರಾಗಿರುವ ಮನು ಪೋಷಕರು ಗಾಣಿಗರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮನು ಮನೆ ಹತ್ತಿರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಬಾಲಕ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ: ರೋಡ್ ರೋಲರ್‌ಗೆ ಸಿಲುಕಿ ಮೃತಪಟ್ಟ ಬಾಲಕ ಮನು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನಾಹುತ ಸಂಭವಿಸಿದ್ದು,
ಪುತ್ರನ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ನೀಡಲಿ ಎಂದು ಕೋರಿರುವ ಮೇಯರ್, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.