ನವದೆಹಲಿ: ಪಶ್ಚಿಮಬಂಗಾಳ ಹಾಗೂ ಒಡಿಶಾ ಕರಾವಳಿ ಪ್ರದೇಶಕ್ಕೆ ಬುಧವಾರ ಸಂಜೆ 4ರಿಂದ 6ಗಂಟೆಯೊಳಗೆ ಆಂಫಾನ್ ಚಂಡಮಾರುತ 185ಕಿಲೋ ಮೀಟರ್ ವೇಗದಲ್ಲಿ ಬಡಿದಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೇ ಸಮುದ್ರದ ಅಲೆಗಳ ಮಟ್ಟ 5 ಮೀಟರ್ ಗಳಷ್ಟು ಮೇಲಕ್ಕೇಳುವ ಸಾಧ್ಯತೆ ಇದೆ ಎಂದು ಹೇಳಿದೆ.
ಚಂಡಮಾರುತದ ಇತಿಹಾಸದಲ್ಲಿ ಅತೀ ಹೆಚ್ಚು ಜೀವಹಾನಿಗೆ ಕಾರಣವಾಗಿದ್ದು ಭೋಲಾ ಸೈಕ್ಲೋನ್. 1970ರಲ್ಲಿ ಬಾಂಗ್ಲಾದೇಶ ಮತ್ತು ಭಾರತದ ಕರಾವಳಿಗೆ ಬಡಿದಪ್ಪಳಿಸಿದ ಭೋಲಾ ಚಂಡಮಾರುತದಲ್ಲಿ 3ರಿಂದ 5 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ!
1970ರ ನವೆಂಬರ್ 08ರಂದು ಪೂರ್ವ ಪಾಕಿಸ್ತಾನ(ಈಗ ಬಾಂಗ್ಲಾದೇಶವಾಗಿದೆ) ಹಾಗೂ ಭಾರತದ ಪಶ್ಚಿಮ ಬಂಗಾಳ ಕರಾವಳಿ ಪ್ರದೇಶಕ್ಕೆ ಭೋಲಾ ಸೈಕ್ಲೋನ್ ಬಡಿದಪ್ಪಳಿಸಿತ್ತು. ಇದೊಂದು ಅತೀ ದೊಡ್ಡ ಪ್ರಾಕೃತಿಕ ವಿಕೋಪ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ನವೆಂಬರ್ 11ರಂದು 185 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಅಪ್ಪಳಿಸಿದ ಹೊಡೆತಕ್ಕೆ ಸಣ್ಣಪುಟ್ಟ ದ್ವೀಪಪ್ರದೇಶ, ಹಳ್ಳಿಗಳು ಸಂಪೂರ್ಣ ನಾಶವಾಗಿ ಹೋಗಿದ್ದವು!
ಬಾಂಗ್ಲಾದ ಉಪಾಝಿಲಾ, ಟಾಝುಮುದ್ದೀನ್ ಎಂಬ ಪ್ರದೇಶದಲ್ಲಿದ್ದ ಶೇ.45ರಷ್ಟು(1,67,000) ಜನರು ಚಂಡಮಾರುತದ ಹೊಡೆತಕ್ಕೆ ದಾರುಣವಾಗಿ ಸಾವನ್ನಪ್ಪಿದ್ದರು. ಚಂಡಮಾರುತದಿಂದ ಸಂಭವಿಸಿದ ಅನಾಹುತ ಪರಿಸ್ಥಿತಿ ಸಾವು, ನೋವು ತಡೆಯುವ ಮತ್ತು ಪರಿಹಾರ ಕಾರ್ಯ ವಿಳಂಬಕ್ಕಾಗಿ ಪಾಕಿಸ್ತಾನ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳು ಕಟುವಾಗಿ ಟೀಕಿಸಿದ್ದವು.
ಭೋಲಾ ಮಹಾಚಂಡಮಾರುತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದರು ಎಂಬ ನಿಖರ ಮಾಹಿತಿ ಇಂದಿಗೂ ಲಭ್ಯವಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ 3ರಿಂದ 5 ಲಕ್ಷ ಮಂದಿ ಸಾವನ್ನಪ್ಪಿರಬಹುದು ಎಂದು ತಿಳಿಸಿದೆ. ಸುಮಾರು 33 ಅಡಿಗಳಷ್ಟು ಎತ್ತರಕ್ಕೆ ಎದ್ದ ರಕ್ಕಸ ಗಾತ್ರದ ಅಲೆಗಳ ಹೊಡೆತಕ್ಕೆ ಚಿತ್ತಾಗಾಂಗ್ ನಲ್ಲಿದ್ದ 13 ದ್ವೀಪಗಳಲ್ಲಿ ಒಬ್ಬರೇ ಒಬ್ಬರು ಬದುಕಿ ಉಳಿದಿಲ್ಲ ಎಂದು ಪಾಕ್ ರೇಡಿಯೋ ಅಂದು ಸುದ್ದಿ ಬಿತ್ತರಿಸಿತ್ತು! ಭೋಲಾ ದ್ವೀಪ ಪ್ರದೇಶ, ಹಾಟಿಯಾ ದ್ವೀಪ ಪ್ರದೇಶ ಮತ್ತು ಸಮೀಪದ ಕರಾವಳಿ ಪ್ರದೇಶ ಸಂಪೂರ್ಣ ಕೊಚ್ಚಿ ಹೋಗಿತ್ತು. ಹಲವು ಹಡಗುಗಳನ್ನು ಜಖಂಗೊಂಡಿದ್ದವು. ಭೋಲಾ ಚಂಡಮಾರತದಿಂದ 3.6ಲಕ್ಷಕ್ಕೂ ಅಧಿಕ ಮಂದಿ ನೇರವಾಗಿ ತೊಂದರೆಗೊಳಗಾಗಿದ್ದರು.
1970ನೇ ಇಸವಿಯಲ್ಲಿ ಭೋಲಾ ಚಂಡಮಾರುತದಿಂದ ಸಂಭವಿಸಿದ ನಷ್ಟ 86.4ಮಿಲಿಯನ್ ಡಾಲರ್. ಈ ಸಂದರ್ಭದಲ್ಲಿ ಬದುಕುಳಿದಿದ್ದವರು ನೀಡಿದ್ದ ಹೇಳಿಕೆ ಪ್ರಕಾರ, ಶೇ.85ರಷ್ಟು ಮನೆಗಳು ನಾಶವಾಗಿ ಹೋಗಿದ್ದವಂತೆ. ಶೇ.90ರಷ್ಟು ಮೀನುಗಾರರು ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದರು. 9 ಸಾವಿರಕ್ಕೂ ಅಧಿಕ ಬೋಟುಗಳು ಹಾನಿಯಾಗಿದ್ದವು. 46 ಸಾವಿರ ಮೀನುಗಾರರು ಚಂಡಮಾರುತಕ್ಕೆ ಬಲಿಯಾಗಿದ್ದರು ಎಂದು ವರದಿ ವಿವರಿಸಿದೆ.