ಬೆಳಗಾವಿ: ಜ್ವರ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ ಎಂದು ತಿಳಿದು ಮನೆಗೆ ತಂದು ಸಂಬಂಧಿಕರಿಗೆಲ್ಲ ಹೇಳಿ ಅಂತ್ಯಕ್ರಿಯೆಯ ತಯಾರಿ ನಡೆಸುತ್ತಿರುವಾಗಲೇ ಮಹಿಳೆ ಜೀವಂತವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ತಾಲೂಕಿನ ಮುಚ್ಚಂಡಿ ಗ್ರಾಮದ ಮಾಲು ಯಲ್ಲಪ್ಪ ಚೌಗಲೆ(55) ಎಂಬ ಮಹಿಳೆ ಮತ್ತೆ ಜೀವಂತ ಆಗಿದ್ದು, ಸದ್ಯ ಮಹಿಳೆ ಊಟ ಮಾಡಿ ಆರೋಗ್ಯವಾಗಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಈ ಮಹಿಳೆಯ ರಸ್ತೆ ಅಪಘಾತವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆಗಾಗ ತಲೆ ನೋವು ಬರುತ್ತಿತ್ತು. ತಲೆಗೆ ಜ್ವರ ಬಂದು ಅಸ್ವಸ್ಥಳಾಗುತ್ತಿದ್ದಳು. ಕಳೆದ ಒಂದು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನೀಡಲಾಗಿತ್ತು. ಮಂಗಳವಾರ ರಾತ್ರಿ ವಿಪರೀತ ಜ್ವರ ಬಂದಾಗ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಕೃತಕ ಉಸಿರಾಟದಲ್ಲಿ ಇಡಲಾಗಿತ್ತು. ಆಕ್ಸಿಜನ್ ತೆಗೆದರೆ ಮಹಿಳೆ ಬದುಕುಳಿಯುವುದಿಲ್ಲ ಎಂಬ ವೈದ್ಯರ ಸಲಹೆಯಂತೆ ಸ್ವಲ್ಪ ಹೊತ್ತಿನ ಬಳಿಕ ಮಹಿಳೆಯ ಹೃದಯ ಬಡಿತ ನಿಂತು ಹೋಗಿದೆ. ಆಗ ವೈದ್ಯರು ತಪಾಸಣೆ ನಡೆಸಿದಾಗ ನೋ ಗ್ಯಾರಂಟಿ ಎಂದು ಹೇಳಿ ವಾಪಸ್ಸು ಕಳುಹಿಸಿ ಕೊಟ್ಟಿದ್ದರು ಎಂದು ಮಾಲು ಅವರ ಪುತ್ರ ತಿಳಿಸಿದ್ದಾರೆ.
ಮಹಿಳೆಯ ಈ ಸುದ್ದಿಯಿಂದ ಆಘಾತಗೊಂಡ ಪತಿ ಹಾಗೂ ಕುಟುಂಬಸ್ಥರು ದಿಕ್ಕು ತೋಚದೇ ಬುಧವಾರ ಮನೆಗೆ ತಂದಿದ್ದಾರೆ. ನಂತರ ಮಹಿಳೆಯ ತವರು ಮನೆ ತಾಲೂಕಿನ ಹಲಗಾ ಗ್ರಾಮಕ್ಕೆ ವಿಷಯ ತಿಳಿಸಿದಾಗ ಅಲ್ಲಿಂದ ಟೆಂಪೋ ತುಂಬಿಕೊಡು ಜನ ಬಂದಿದ್ದಾರೆ. ಸವದತ್ತಿ ಶ್ರೀ ಯಲ್ಲಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮುಚ್ಚಂಡಿ ಗ್ರಾಮಸ್ಥರು ಜಾತ್ರೆಗೆ ಹೋಗಿದ್ದರು. ಇವರ ಕುಟುಂಬಸ್ಥರೂ ವಿಷಯ ತಿಳಿದು ಜಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ಸು ಮರಳಿದ್ದಾರೆ. ಇನ್ನೇನು ಅಂತ್ಯಕ್ರಿಯೆಯ ತಯಾರಿ ನಡೆಸಬೇಕು ಎನ್ನುವಷ್ಟರಲ್ಲಿ ಮಹಿಳೆ ಜೀವಂತವಾಗಿ ಎದ್ದು ಕುಳಿತಿದ್ದಾಳೆ. ಇದನ್ನು ಕಂಡು ಜನ ಮೂಕವಿಸ್ಮಯರಾಗಿದ್ದಾರೆ.