Advertisement

ಬರಗು ಕೃಷಿಯ ಬೆರಗು

05:41 PM Apr 02, 2018 | |

ಹತ್ತು ವರ್ಷಗಳ ಹಿಂದೆ ಕಿತ್ತೂರು ತಾಲೂಕಿಗೆ ಬರಗು ಅಪರಿಚಿತ ಬೆಳೆ. ದೂರದ ಬೆಳಗಾವಿಯಲ್ಲಿ ಇದನ್ನು ಬೆಳೆಯುತ್ತಿದ್ದ ಬಗ್ಗೆ ಮಾಹಿತಿಗಳಿದ್ದರೂ ಕಿತ್ತೂರಿನಲ್ಲಿ  ಬೆಳೆಯಲು ಯಾರೂ ಮುಂದಾಗಿರಲಿಲ್ಲ.  ಹೊನ್ನೆದಿಬ್ಬದ ರಾಜನಾರಾಯಣರವರು, ತಮ್ಮ ಖಾಲಿ ಬಿಟ್ಟಿದ್ದ ಎರಡು ಎಕರೆಯಲ್ಲಿ ಯಾವುದಾದರೂ ಹೊಸ ಬೆಳೆ ಬೆಳೆವ ಯೋಚನೆಯಲ್ಲಿ ಇದ್ದಾಗ ಅವರಿಗೆ ಬರಗು ಬೆಳೆಯ ಪರಿಚಯವಾಯಿತು. ಕಡಿಮೆ ನೀರಾವರಿಯಲ್ಲಿ ಬೆಳೆಯುವ ಬರಗನ್ನು ಬೆಳೆಯುವ ನಿರ್ಧಾರಕ್ಕೆ ಬಂದರು. ಇದನ್ನು ಕಂಡ ಊರ ಮಂದಿ ತಮಾಷೆ ಮಾಡಿದ್ದು ಇದೆ.

Advertisement

ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ರಾಜನಾರಾಯಣ ಬಿತ್ತನೆಗೆ ಬೇಕಾದ ಬರಗು ಬೀಜವನ್ನು ಕೆ.ಜಿ.ಗೆ ರೂ. 100.00ರಂತೆ ನೀಡಿ ಬೆಳಗಾವಿಯ ಬೆಳೆಗಾರರೋರ್ವರಿಂದ ಖರೀದಿಸಿ, ಜೂನ್‌ ಆರಂಭದಲ್ಲಿ ಬಿತ್ತನೆ ಮಾಡಿದರು. ಕೊಟ್ಟಿಗೆಯಲ್ಲಿರುವ ಗೊಬ್ಬರವನ್ನೆಲ್ಲಾ ಗದ್ದೆಗೆ ಸುರಿದು ಚೆನ್ನಾಗಿ ಉಳುಮೆ ಮಾಡಿದರು. ಒಂದು ವಾರ ಉಳುಮೆಯಾಗುವಷ್ಟರಲ್ಲಿ ಭೂಮಿ ಹದಗೊಂಡಿತು. ಜೂನ್‌ ಆರಂಭದಲ್ಲಿ ಎರಡು ಕೆ.ಜಿ. ಬೀಜವನ್ನು ಮನೆ ಮಂದಿ ಸೇರಿ ಬಿತ್ತಿದರು. ಮೊದಲ ವಾರದಲ್ಲಿ ಮಳೆಯೂ ಬಂತು. ಎಂಟೇ ದಿನಗಳಲ್ಲಿ ಬರಗು ಚಿಗುರೊಡೆಯಿತು.

ಇಪ್ಪತ್ತು ದಿನಗಳಾಗುತ್ತಿದ್ದಂತೆ ಒಂದು ಬಾರಿ ಎಡೆಯೊಡೆದರು. ನಂತರ ಯಾವುದೇ ರೀತಿಯ ಗೊಬ್ಬರ, ನೀರಾವರಿ, ಕೀಟನಾಶಕವನ್ನು ಸಿಂಪಡಿಸಲಿಲ್ಲ. ಮೂರು ತಿಂಗಳಾಗುವಷ್ಟರಲ್ಲಿ ತೆನೆ ಬಿಟ್ಟಿತು. ನಾಲ್ಕೂವರೆ ತಿಂಗಳಲ್ಲಿ ಒಣಗಿದ ತೆನೆಗಳನ್ನು ಮನೆ ಮಂದಿಯೇ ಸೇರಿ ಕಟಾವು ಮಾಡಿ, ನಂತರ ಒಣಗಿಸಿ ಬರಗನ್ನು ತೆನೆಯಿಂದ ಬೇರ್ಪಡಿಸಿದರು. ಮೊದಲ ಬೆಳೆಯಾದ್ದರಿಂದ ಯಾರಿಗೆ ಮಾರಾಟ ಮಾಡುವುದು ಎಂಬ ಚಿಂತೆ ಕಾಡುತ್ತಿತ್ತು.

ಅಷ್ಟರಲ್ಲಿ ಬೆಳಗಾವಿಯಿಂದ ಖರೀದಿದಾರರು ಮನೆಗೇ ಬಂದು ಎಂಟು ಕ್ವಿಂಟಾಲ್‌ ಬರಗು ಖರೀದಿಗೆ ಮುಂದಾದರು. ಎರಡು ಕ್ವಿಂಟಾಲ್‌ನ್ನು ಮನೆಗೆ ಉಳಿಸಿಕೊಂಡು ಉಳಿದಿದ್ದನ್ನು ಕ್ವಿಂಟಾಲ್‌ಗೆ ರೂ. 3000.00ದಂತೆ ಮಾರಾಟ ಮಾಡಿದರು. ಅಕ್ಕಿಯಂತೆ ಹಿಟ್ಟು ತಯಾರಿಸಿ ಬರಗಿನಿಂದ ದೋಸೆ ತಯಾರಿಸಿದರು. ಎಲ್ಲರ ಮನ ಗೆದ್ದಿತು. ನಂತರ ದಿನದ ಒಂದು ಹೊತ್ತು ಇದನ್ನೆ ಸೇವಿಸುವ ನಿರ್ಧಾರಕ್ಕೆ ಬಂದರು. ಅತ್ಯಧಿಕ ಪೋಷಕಾಂಶಗಳಿರುವ ಬರಗು ಬಡತನವನ್ನು ನೀಗಿಸಿತು ಎನ್ನುವುದು ಇವರ ಅನುಭವದ ಮಾತು.

ಇದೀಗ ಪ್ರತಿವರ್ಷ ಬರಗು ಬೆಳೆದು ಅವುಗಳಿಂದ ಕೈ ತುಂಬಾ ಆದಾಯ ಗಳಿಸುತ್ತಿರುವ ರಾಜನಾರಾಯಣರನ್ನು ನೋಡಿ ಇಲ್ಲಿನ ಸಾಕಷ್ಟು ಮಂದಿ ಅವರನ್ನೇ ಅನುಸರಿಸುತ್ತಿದ್ದಾರೆ. ಪರಿಣಾಮವಾಗಿ ಇಲ್ಲಿನ ಎಕರೆಗಟ್ಟಲೆ ಒಣಭೂಮಿ ಇಂದು ಹಸಿರಿನಿಂದ ಕಂಗೊಳಿಸುತ್ತಿದೆ. ಅತಿ ಕಡಿಮೆ ಮಳೆಯಾಗುವ ನಾಡಿಗೆ ಬರಗು ಬೆಳೆ ವರದಾನ. ಈ ಬೆಳೆಗೆ ಒಂದೆರಡು ಮಳೆ ಬಂದರೆ ಸಾಕಾಗುತ್ತದೆ. ನಿರ್ವಹಣಾ ವೆಚ್ಚ ಇಲ್ಲವೇ ಇಲ್ಲ ಎನ್ನುತ್ತಾರೆ ರಾಜನಾರಾಯಣ.  

Advertisement

ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಬರಗನ್ನು ಬೆಳೆಯುವ ಬಗ್ಗೆ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಹಿತಿ, ಮಾರ್ಗದರ್ಶನವನ್ನು ನೀಡುವ ಬೃಹತ್‌ ಅಭಿಯಾನವನ್ನು ಕೈಗೊಂಡಿದೆ. ಪರಿಣಾಮವಾಗಿ, ಸಾವಿರಾರು ಎಕರೆಯಲ್ಲಿ ಈಗಾಗಲೇ ಸಿರಿಧಾನ್ಯಗಳು ಬೆಳೆದು ನಿಂತಿವೆ. ಬೆಳೆಗಾರನಿಗೆ ಬಿತ್ತನೆಗೆ ಬೇಕಾದ ಬೀಜವನ್ನು ನೀಡುವುದಷ್ಟೇ ಅಲ್ಲದೆ ಬೆಳೆದ ಬೆಳೆಯನ್ನು ಖರೀದಿಸುವ ವ್ಯವಸ್ಥೆಯು ಇಲ್ಲಿದೆ. ಸಿರಿಧಾನ್ಯಗಳಿಂದ ತಿಂಡಿ, ತಿನಸುಗಳ ತಯಾರಿಯೊಂದಿಗೆ, ಧಾನ್ಯಗಳನ್ನು ಮೌಲ್ಯವರ್ಧನೆಗೊಳಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಸಂಸ್ಥೆ ಕೈಗೊಂಡಿದೆ.

* ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next