Advertisement

ಭಾರತ ನಂ.1 ಆಗುವ ದಿನ ದೂರವಿಲ್ಲ: ಶಾಮನೂರು

06:05 AM Jan 21, 2019 | Team Udayavani |

ದಾವಣಗೆರೆ: ಭಾರತಕ್ಕಿರುವ ಅನೇಕ ಸವಾಲುಗಳ ನಡುವೆಯೂ ಪಾಶ್ಚಾತ್ಯ ದೇಶಗಳ ಮಟ್ಟಕ್ಕೆ ನಿಲ್ಲುವ ದಿನಗಳು ದೂರ ಇಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಅಂತಿಮ ದಿನ ಭಾನುವಾರದ ಬಹುತ್ವದ ಭಾರತ: ಆತಂಕಗಳು ಮತ್ತು ಸವಾಲುಗಳು…ವಿಷಯ ಕುರಿತ ಸರ್ವ ಧರ್ಮ ಸಮಾವೇಶದಲ್ಲಿ ಮಾತನಾಡಿದರು.

ಇಂದಿನ ವಾತಾವರಣದಲ್ಲಿ ಭಾರತಕ್ಕೆ ಅನೇಕ ಸವಾಲುಗಳಿವೆ. ಅಮೆರಿಕಾದ ಯಜಮಾನಿಕೆ, ಚೀನಾದಂತಹ ರಾಷ್ಟ್ರಗಳು ತಾ ಮುಂದು ನಾ ಮುಂದು ಎಂದು ಮುಂದೆ ಹೋಗುತ್ತಿವೆ. ಈ ನಡುವೆಯೂ ಭಾರತ ಜಗತ್ತಿನ ನಂಬರ್‌ ಒನ್‌ ಸ್ಥಾನವನ್ನ ಆಕ್ರಮಿಸಿಕೊಳ್ಳಲೇಬೇಕಿದೆ. ಇನ್ನು 10 ವರ್ಷದಲ್ಲಿ ಪಾಶ್ಚಾತ್ಯ ದೇಶಗಳ ಮಟ್ಟಕ್ಕೆ ನಿಲ್ಲುವ ದಿನಗಳು ದೂರ ಇಲ್ಲ. ನಮ್ಮಲ್ಲಿ ಒಗ್ಗಟ್ಟು ಇರುವುದರಿಂದ ಜಾತಿಯ ಕಿತ್ತಾಟ ಎಲ್ಲೂ ಕಣ್ಣಿಗೆ ಕಾಣುತ್ತಿಲ್ಲ. ಆದರೂ, ಜಾತಿಯತೆ ದೂರ ಮಾಡಬೇಕಿದೆ ಎಂದು ತಿಳಿಸಿದರು.

ನನಗೆ ಮುರುಘಾ ಮಠದ ನಾಲ್ವರು ಜಗದ್ಗುರುಗಳನ್ನ ನೋಡುವ, ಅಶೀರ್ವಾದ ಪಡೆಯುವ ಭಾಗ್ಯ ದೊರೆತಿದ್ದು ನನ್ನ ತಂದೆ-ತಾಯಿಯವರು ಮಾಡಿದ್ದ ಪುಣ್ಯದಿಂದ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಜಯದೇವ ಶ್ರೀಗಳು ನಾಡಿಗೆ ದೊಡ್ಡ ಸ್ವಾಮಿಗಳಾಗಿದ್ದರು. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅನ್ನ ಮತ್ತು ಜ್ಞಾನ ದಾಸೋಹ ಮಾಡಿದವರು. ಬೆಂಗಳೂರಿನಲ್ಲಿ ಹಾಸ್ಟೆಲ್‌ ಕಟ್ಟಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿಕೊಟ್ಟವರು. ಶಿವಮೂರ್ತಿ ಮುರುಘಾ ಶರಣರು ಸಹ ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ಜಾತಿಯವರನ್ನ ಅತ್ಯಂತ ಪ್ರೀತಿಯಿಂದ, ವಿಶ್ವಾಸದಿಂದ ಕಾಣುತ್ತಿರುವ ಅವರನ್ನ ಆಧುನಿಕ ಬಸವಣ್ಣ… ಎಂದರೆ ತಪ್ಪಾಗಲಾರದು ಎಂದರು. ಸಾಹಿತಿ ರಂಜಾನ್‌ ದರ್ಗಾ ಮಾತನಾಡಿ, ಮನುಷ್ಯ ಜಾತಿಯೇ ಸತ್ಯ. ನಾವು ಮಾಡಿಕೊಂಡಿರುವಂತಹ ಜಾತಿ ಎನ್ನುವುದೇ ಸುಳ್ಳು. ಜಾತಿ ಎನ್ನುವುದೇ ಸುಳ್ಳು ಎನ್ನುವುದನ್ನ ನಮ್ಮ ಕನ್ನಡ ಪರಂಪರೆ ತೋರಿಸಿ ಕೊಟ್ಟಿದೆ. ಕನ್ನಡದಂತಹ ಬಹುತ್ವದ ಪರಂಪರೆ, ಸಂಸ್ಕೃತಿ ಯಾವುದೇ ಭಾಷೆಗೆ ಇಲ್ಲವೇ ಇಲ್ಲ. ಬಸವಣ್ಣನವರು ಧರ್ಮದ ವಿಚಾರ ಬಂದಾಗ ದಯವೇ ಧರ್ಮದ ಮೂಲವಯ್ಯ… ಎಂದರೇ ಹೊರತು ಜಾತಿಯನ್ನ ಹೇಳಲೇ ಇಲ್ಲ. ಮನುಷ್ಯತ್ವದ ಪ್ರೀತಿ ತೋರಿದವರು ಎಂದು ತಿಳಿಸಿದರು.

Advertisement

ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್‌ ಮಾತನಾಡಿ, ಧರ್ಮದ ಹೆಸರಲ್ಲಿ ದೇಶವನ್ನ ಪಡೆಯುವರೇ ನಿಜವಾದ ದೇಶದ್ರೋಹಿಗಳು. ಜಾತಿಯ ಗೋಡೆಯ ಕಿತ್ತು ಹಾಕಿ ದೇಶ ಒಗ್ಗೂಡಿಸುವರೇ ನಿಜವಾದ ದೇಶಪ್ರೇಮಿಗಳು. ನಾವೆಲ್ಲರೂ ಬಸವಣ್ಣನವರನ್ನು ಇಡೀ ಜಗತ್ತಿಗೆ ತಿಳಿಸಬೇಕಾಗಿದೆ.

ಏಕಸೂತ್ರದಲ್ಲಿ ಭಾರತವನ್ನ ಜೋಡಿಸಲು ಬಸವಣ್ಣನವರ ವಿಚಾರಧಾರೆ ಅಗತ್ಯ. ಅವರ ವಿಚಾರಧಾರೆಯಂತೆ ಬಾಳಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಜಯದೇವ ಸ್ವಾಮೀಜಿಯವರಂತೆ ಶಿವಮೂರ್ತಿ ಮುರುಘಾ ಶರಣರು ವಚನಗಳನ್ನ ವಿದೇಶದಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಮೂಢನಂಬಿಕೆಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಅವರೊಟ್ಟಿಗೆ ಇರಬೇಕು ಎಂದು ಶಾಮನೂರು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next