ನವದೆಹಲಿ: ಒಂದು ಕುಟುಂಬದ ವಿರುದ್ಧದ ಧ್ವನಿಯನ್ನು ದಮನಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ
ಗೃಹ ಸಚಿವ ಅಮಿತ್ ಶಾ ತುರ್ತು ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ನಂತರ ಮೋದಿ ಈ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ. ಪ್ರಧಾನಿ ಇಂದಿರಾಗಾಂಧಿ 1975ರಿಂದ 1977ರವರೆಗೆ 21 ತಿಂಗಳ ಅವಧಿ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆಂತರಿಕ ಸಮಸ್ಯೆಯನ್ನು ನಿಯಂತ್ರಣದಲ್ಲಿಡುವ ನಿಟ್ಟಿನಲ್ಲಿ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು
ಸಂವಿಧಾನದ 352ನೇ ವಿಧಿ ಅನ್ವಯ ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದು, 1975ರ ಜೂನ್ 25ರಿಂದ 1977ರ ಮಾರ್ಚ್ 21ರಂದು ಆದೇಶ ಹಿಂಪಡೆಯುವವರೆಗೂ ಜಾರಿಯಲ್ಲಿತ್ತು ಎಂದು ವರದಿ ವಿವರಿಸಿದೆ.
ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ದಿನವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
1975ರಿಂದ 1977ರವರೆಗೆ ಅವಧಿಯಲ್ಲಿ ಸಂಸ್ಥೆಗಳು ವ್ಯವಸ್ಥಿತವಾಗಿ ನಾಶವಾಗಿದ್ದಕ್ಕೆ ಸಾಕ್ಷಿಯಾಯಿತು. ಇದೀಗ ನಾವು ಭಾರತದ
ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ತಕ್ಕಂತೆ ಬದುಕಲು ಸಾಧ್ಯವಿರುವ ಎಲ್ಲವನ್ನೂ ಸಾಧ್ಯವಾಗಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಪ್ರಧಾನಿ ಹೇಳಿದರು.