Advertisement
ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಿರಿಜನ ಉತ್ಸವದ ಪ್ರಯುಕ್ತ ಗಂಗಾಧರೇಶ್ವರ ದೇಗುಲದ ಆವರಣದಲ್ಲಿ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದ ಅವರು ಮಾತನಾಡಿ, ನಮ್ಮ ಮೂಲ ಕಾಡಿನಿಂದಲೇ ಆರಂಭವಾಗುತ್ತದೆ. ಗಿರಿಜನರು ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ.
Related Articles
Advertisement
ಗೊರುಕನದ ಹಣ ಗಿರಿಜನರಿಗೆ ಮೀಸಲು: ವಿಜಿಕೆಕೆಯ ಗೌರವ ಕಾರ್ಯದರ್ಶಿ ಡಾ.ಎಚ್.ಸುದರ್ಶನ್ ಮಾತನಾಡಿ, ನಾವು ಬೆಟ್ಟದಲ್ಲಿ ಸಂಸ್ಥೆ ಕಟ್ಟಿ 40 ವರ್ಷಗಳು ಸಂದಿವೆ. ನಮ್ಮ ಗೊರುಕನ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಬಂದ ಹಣವನ್ನು ಇವರ ಕಲ್ಯಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಸರ್ಕಾರದಿಂದ ನಮಗೆ ಯಾವುದೇ ಅನುದಾನ ಬರುತ್ತಿಲ್ಲ. ಗೊರುಕನವನ್ನು ಕೆಲವರು ರೆಸಾರ್ಟ್ ಎಂದು ಬಿಂಬಿಸುತ್ತಿರುವುದು ನೋವಿನ ಸಂಗತಿಯಾಗಿದೆ.
60 ಲಕ್ಷ ರೂ.ಗಳನ್ನು ಶಾಲೆಯ ನವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಿಳಿಗಿರಿ ರಂಗನಬೆಟ್ಟ 6000 ವರ್ಷಗಳ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ 3000ದಿಂದ 4000 ವರ್ಷಗಳ ಹಳೆಯ ಶಿಲಾ ಸಮಾಧಿಗಳು ಇಲ್ಲಿ ಇನ್ನೂ ಇವೆ. ಈ ಸಂಸ್ಕೃತಿ ವಿಶಿಷ್ಟವಾಗಿದೆ. ಸೋಲಿಗರ ಬಡತನ, ನಿರುದ್ಯೋಗ, ಶಿಕ್ಷಣ ಕ್ರಮೇಣ ಸುಧಾರಿಸುತ್ತಿದೆ. ಈಗ ಇವರ ಸಂಸ್ಕೃತಿಯನ್ನು ಪೋಷಿಸುವ ಕೆಲಸವನ್ನು ಮಾಡಬೇಕಿದೆ ಎಂದು ಆಭಿಪ್ರಾಯಪಟ್ಟರು.
ಜನಪ್ರತಿನಿಧಿಗಳು, ಅಧಿಕಾರಿಗಳು ಗೈರು: ಗಿರಿಜನಉತ್ಸವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು. ಶಾಸಕ ಎನ್. ಮಹೇಶ್ ಕೇವಲ ಮೆರಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೊರಟು ಹೋದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಪಂ, ತಾಪಂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮತಿ ಸುರೇಶ್ ಹಾಗೂ ಸದಸ್ಯರಾದ ಕೃಷ್ಣವೇಣಿ, ಶ್ರೀನಿವಾಸ್ ಮಾತ್ರ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಅನುಪಸ್ಥಿತಿಯೂ ಎದ್ದು ಕಾಣುತ್ತಿತ್ತು. ಇಂತಹ ಉತ್ಸವದಿಂದ ಗಿರಿಜನ ಸಂಸ್ಕೃತಿ ಲೋಕಕ್ಕೆ ಪರಿಚಯಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಆದರೆ, ಇವರೇ ಗೈರಾಗಿರುವುದು ನಮಗೆ ನೋವು ತಂದಿದೆ ಎಂದು ಸೋಲಿಗರು ತಮ್ಮ ಅಳಲನ್ನು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಮತಿ ಸುರೇಶ್, ಸದಸ್ಯರಾದ ಕೃಷ್ಣವೇಣಿ, ಶ್ರೀನಿವಾಸ್, ಪಿಡಿಒ ಸ್ವಾಮಿ, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಮಹದೇವ, ಸಂಯೋಜಕ ಸಿ.ಮಾದಪ್ಪ, ತಾಲೂಕು ಸೋಲಿಗರ ಸಂಘದ ಅಧ್ಯಕ್ಷ ರಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ವಿಜಿಕೆಕೆ ಸಂಯೋಜಕ ಡಾ.ಅರುಣ್‌ಕುಮಾರ್, ರಂಗದೇಗುಲದ ಶಾಂತರಾಜು, ಉಮ್ಮತ್ತೂರು ಬಸವರಾಜು, ಪಿಎಸ್‌ಐ ರವಿಕುಮಾರ್, ನಾಗೇಂದ್ರ, ಮಂಜುಳಾ ಸೇರಿದಂತೆ ಅನೇಕರು ಹಾಜರಿದ್ದರು.
ಜನರ ಗಮನಸೆಳೆದ ಕಾಡಿನ ನೃತ್ಯ: ಯಕನಗದ್ದೆ ಕಾಲೋನಿಯ ಗುಬ್ಬಿ ಅಲೆ ನೃತ್ಯ, ಕಾಣ್‌ಮೇಳದೊಡ್ಡಯ ಪಿನಾಸಿ ನೃತ್ಯ, ವಿಜಿಕೆಕೆ ವಿದ್ಯಾರ್ಥಿಗಳ ಗೊಜಲಕ್ಕಿ ನೃತ್ಯ, ಜಡೇಸ್ವಾಮಿ ದೊಡ್ಡಿಯ ಗೊರುಕಾನ ನೃತ್ಯ, ನಾದಸ್ವರ, ಹೊಸ ಪೋಡಿನ ಅಡುಕೆ ನೃತ್ಯ, ಬೀಸು ಕಂಸಾಳೆ, ಜಾನಪದ ನೃತ್ಯ, ಜೇನುಕುರುಬರ ಪದಗಳು, ಒಲಗ ನೃತ್ಯ ಮಾರಿ ಕುಣಿತಗಳು ಸಾರ್ವಜನಿಕರ ಗಮನವನ್ನು ಸೆಳೆದವು.
ಕುಣಿದು ಕುಪ್ಪಳಿಸಿದ ವಿದೇಶಿಯರು: ಗಿರಿಜನ ಉತ್ಸವದ ಮೆರವಣಿಗೆಯಲ್ಲಿ ಆಸ್ಟ್ರೇಲಿಯಾ ದೇಶದಿಂದ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದೇಶಿಯರೂ ಭಾಗವಹಿಸಿದ್ದರು. ಗೊರುಕನ ನೃತ್ಯ, ಕಂಸಾಳೆಗಳ ಡೊಳ್ಳು, ನಾದಸ್ವರ, ತಮಟೆ ಸದ್ದಿಗೆ ವಿದೇಶಿಯರು ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ವೇದಿಕೆಯವರೆಗೂ ಇವರು ಮೆರವಣಿಗೆಯಲ್ಲಿ ಸಾಗಿದರು. ಶಾಸಕ ಎನ್. ಮಹೇಶ್ ಕೂಡ ಕುಣಿದಿದ್ದು ವಿಶೇಷವಾಗಿತ್ತು.