ಕರ್ನಾಟಕ ಶಾಸ್ತ್ರೀಯ ಸಂಗೀತಲೋಕಕ್ಕೆ ಮಹಾನ್ ಕೊಡುಗೆ ನೀಡಿರುವ ಸಂಗೀತ ತ್ರಿಮೂರ್ತಿಗಳಾದ ಶ್ಯಾಮಾಶಾಸ್ತ್ರಿ, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರ ಹೃದಯಸ್ಪರ್ಶಿ ರಚನೆಗಳಿಗೆ ಮೂರ್ತರೂಪ ನೀಡುವ ಸಾರ್ಥಕ ಪ್ರಯೋಗವೊಂದು ಇತ್ತೀಚೆಗೆ ಎಡಿಎ ರಂಗಮಂದಿರದಲ್ಲಿ ನಡೆಯಿತು. ನಟನಂ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್‌ನ ಸಂಸ್ಥೆಯ ನಿರ್ದೇಶಕಿ, ನಾಟ್ಯಗುರು ಡಾ. ರಕ್ಷಾ ಕಾರ್ತಿಕ್ “ಸಂಗೀತ ತ್ರಿವಳಿ’ಗಳ ಕೃತಿಗಳನ್ನು ನೃತ್ಯಕ್ಕೆ ಅಳವಡಿಸಿ, ಯಶಸ್ವಿ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದರು.
ಡಾ. ರಕ್ಷಾ ಶಿಷ್ಯೆಯರಾದ ಅನಘಾ ಲಕ್ಷ್ಮೀ ಸಂಪತ್‌ಕುಮಾರ್, ದಿವ್ಯಾ ವಿಜಯಲಕ್ಷ್ಮೀ ಧರ್ಮರಾಜನ್, ಸಂಪದಾ ಹೊಸೂರ್ ಮತ್ತು ಸ್ಮತಿ ಶ್ರೀಧರ್ ಭಾವಪೂರ್ಣವಾಗಿ ನರ್ತಿಸಿ ಭಕ್ತಿಯ ವಾತಾವರಣ ರೂಪಿಸಿದರು. ಮೊದಲಿಗೆ ಸಂಪದಾ, ದೀಕ್ಷಿತರ ಸುಮೇರುಕೃತಿ “ಶ್ರೀ ಮಹಾಗಣಪತಿ’ ಯನ್ನು ತಮ್ಮ ಅಂಗಶುದ್ಧ ಅಂಗಿಕಾಭಿನಯದಿಂದ ವಿನಾಯಕನ ವಿವಿಧ ಭಂಗಿಗಳನ್ನು ಸುಂದರವಾಗಿ ಚಿತ್ರಿಸಿದರು.
ದಿವ್ಯಾ, ತ್ಯಾಗರಾಜರ ಕೃತಿಯ ಮೂಲಕ “ಮರುಗೇಲರಾ, ಓ ರಾಘವಾ’ ಎಂದು ಧೀಮಂತ ನಿಲುವಿನ ಮರ್ಯಾದಾ ಪುರುಷೋತ್ತಮನ ದಿವ್ಯ ವರ್ಣನೆ- ಮಹಿಮೆಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದಳು. ಅನಘಾ ಲಕ್ಷ್ಮೀ, “ನಾದ ತನುಮನಿಷಂ’ ಎಂದು ತನ್ನ ಅನುಪಮ ಕಲಾನೈಪುಣ್ಯದ ಮೂಲಕ ಪರಮೇಶ್ವರನ ಭಕ್ತ ಪರಾಧೀನತೆಯನ್ನು ರಾವಣನ ಭಕ್ತಿಯ ಪರಾಕಾಷ್ಠೆಯನ್ನು ಸಂಚಾರಿ ಕಥಾನಕದಲ್ಲಿ ಎರಕ ಹೊಯ್ದಳು. ಡಾ. ರಕ್ಷಾ ಅವರ ಶಕ್ತಿಶಾಲಿ ನಟುವಾಂಗ, ಕಲಾವಿದೆಯರ ಅನುಪಮ ನರ್ತನಕ್ಕೆ ಸ್ಫೂರ್ತಿ ನೀಡಿತು. ಮುಂದೆ, ಚತುರ್ಕನ್ಯೆಯರ ಸುಮನೋಹರ
“ಶ್ರೀವಿಶ್ವನಾಥಂಭಜೆ’, “ಕಂಜದಳಾಯತಾಕ್ಷಿ’, “ಸಾಮಜವರಗಮನ’ ಮತ್ತು “ಎಂದರೋ ಮಹಾನುಭಾವಲು’ ಹೃದಯ ತುಂಬಿತು. ಬಾಲಸುಬ್ರಮಣ್ಯ ಶರ್ಮರ ಸುಶ್ರಾವ್ಯ ಗಾಯನ, ಜಯರಾಂ ವೇಣುನಾದ, ಶಂಕರರಾಮನ್ ವೀಣೆ, ಶ್ರೀಹರಿ ರಂಗಸ್ವಾಮಿ ಮೃದಂಗವಾದನ, ಕಾರ್ತೀಕ್ ದಾತಾರ್‌ರ ರಿದಂಪ್ಯಾಡ್, ನೃತ್ಯ ಪ್ರಸ್ತುತಿಗೆ ಜೀವ ತುಂಬಿತು.
* ವೈ.ಕೆ.ಸಂಧ್ಯಾ ಶರ್ಮ