Advertisement

ಸಿದ್ದರಾಮಯ್ಯ ರಿಂದ ದಲಿತರಿಗೆ ಅನ್ಯಾಯ

02:42 PM Apr 17, 2018 | Team Udayavani |

ಚಿತ್ರದುರ್ಗ: ರಾಜ್ಯ ಸರ್ಕಾರಕ್ಕೆ ಎ.ಜೆ. ಸದಾಶಿವ ಆಯೋಗ ವರದಿ ನೀಡಿ ಆರು ವರ್ಷಗಳಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನೇ ನೋಡದೆ ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡುವ ಮೂಲಕ ದಲಿತರಿಗೆ ಘನ ಘೋರ ಅನ್ಯಾಯ ಮಾಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ| ಎನ್‌. ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇಲ್ಲಿನ ಐಎಂಎ ಹಾಲ್‌ನಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಹಾಗೂ ಬಾಬುಜಗಜೀವನರಾಮ್‌ ಜಯಂತಿ ಮತ್ತು ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಆಧಾರದ ಮೇಲೆ ಅಧ್ಯಯನ ನಡೆಸಿ ಎ.ಜೆ. ಸದಾಶಿವ ಆಯೋಗ ವೈಜ್ಞಾನಿಕವಾಗಿ ಸರ್ಕಾರಕ್ಕೆ ವರದಿ ಮಂಡಿಸಿದೆ.

ಆದರೆ ಸಿದ್ದರಾಮಯ್ಯನವರಿಗೆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಮನಸ್ಸಿಲ್ಲ. ವರದಿ ಜಾರಿಗಾಗಿ 26 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಇದುವರೆಗೂ ಫಲ ಸಿಕ್ಕಿಲ್ಲ. ಲೀಗಲ್‌ ಒಪಿನಿಯನ್‌ಗೆ ಕಳಿಸಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ಆಯೋಗಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೋರಾಟದಲ್ಲಿ ಎಂಟು ಜನ ಮಾದಿಗರು ಸತ್ತಿದ್ದಾರೆ. ಸರ್ಕಾರಗಳು ನಯಾಪೈಸೆ ಪರಿಹಾರ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ದಲಿತರ ಉದ್ಧಾರ ಸಾಧ್ಯವಿಲ್ಲ. ಹೊಳಲ್ಕೆರೆ ತಾಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗೆ ಅಳವಡಿಸಿರುವ ಮೋಟಾರ್‌ ಒಂದು ತಿಂಗಳು ಓಡಲ್ಲ. ಎರಡು ಸಾವಿರದಿಂದ ಹನ್ನೆರಡು ಸಾವಿರದವರೆಗೆ ವಿವಿಧ ಕಂಪನಿಗಳಿಂದ ಕಮಿಷನ್‌ ಪಡೆದಿರುವ ಸಚಿವ ಎಚ್‌. ಆಂಜನೇಯ ಅವರಿಗೆ ದಲಿತರ ಹೆಸರು ಹೇಳುವ ನೈತಿಕತೆ ಇಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಮೂಲ್ಯವಾದ ಮತಗಳನ್ನು ಹಣ, ಹೆಂಡಕ್ಕೆ ಮಾರಿಕೊಳ್ಳದೆ ಜೆಡಿಎಸ್‌ ಮತ್ತು ಬಿಎಸ್ಪಿ ಮೈತ್ರಿಕೂಟಕ್ಕೆ ಹಾಕಬೇಕು ಎಂದರು. 

ಗೋವು, ದೇವರು, ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿಯವರಿಂದ ದಲಿತರಿಗೆ ಯಾವ ಕಾರ್ಯಕ್ರಮವೂ ಇಲ್ಲ. ಮಾದಿಗ ಸಮಾಜವನ್ನು ಹಳೆ ಕಾಲಕ್ಕೆ ಕರೆದುಕೊಂಡು ಹೋಗುವ ಹುನ್ನಾರ ಬಿಜೆಪಿಯಿಂದ ನಡೆಯುತ್ತಿದೆ. ಸಂವಿಧಾನದಡಿ ಎಲ್ಲಾ ಜೀವಿಗಳಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಆದರೆ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿರುವವರು ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿ ದೇಶದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ಮನುಷ್ಯನನ್ನು ಕೊಲ್ಲುವುದು ಅಂಬೇಡ್ಕರ್‌ ತತ್ವವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ 31 ಜಡ್ಜ್ಗಳಿದ್ದಾರೆ. ಅದರಲ್ಲಿ ಒಬ್ಬರೂ ಎಸ್‌ಸಿ, ಎಸ್‌ಟಿಯವರಲ್ಲ. ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ 20 ಸಾವಿರ ನೌಕರರು ಹಿಂಬಡ್ತಿ ಪಡೆಯಲಿದ್ದಾರೆ. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ಸುಪ್ರೀಂ ಕೋರ್ಟ್‌ ತೀರ್ಪು ದಲಿತರಿಗೆ ಮರಣ ಶಾಸನವಾಗಿದೆ.

Advertisement

ದಲಿತರನ್ನು ಸಮಾಧಿ ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಚ್‌. ಪ್ರಕಾಶ್‌ ಬೀರಾವರ ಅಧ್ಯಕ್ಷತೆ ವಹಿಸಿದ್ದರು. ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್‌, ಕಣಿವೆ ಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು. ದಸಂಸ ರಾಜ್ಯ ನಿರ್ದೇಶಕ ಬೈಲಹೊನ್ನಯ್ಯ, ಗೌರವಾಧ್ಯಕ್ಷ ಅಂಗಡಿ ಮಂಜಣ್ಣ, ಕಾರ್ಯಾಧ್ಯಕ್ಷ ತಿಮ್ಮರಾಜು, ವಿಭಾಗೀಯ ಅಧ್ಯಕ್ಷ ಮಹಮ್ಮದ್‌ ಇರ್ಫಾನ್‌, ಯುವ ಘಟಕದ ವಿಭಾಗೀಯ ಅಧ್ಯಕ್ಷ ವಿಶ್ವನಾಥ ಮೂರ್ತಿ, ಜಗದೀಶ್ವರ್‌, ಸಾಗಲಗಟ್ಟೆ ಜಯಪ್ಪ ಇದ್ದರು. ‘

ಕಾಂಗ್ರೆಸ್‌ ಸೋಲಿಸಲು ಕೈ ಜೋಡಿಸಿ ದಲಿತರನ್ನು ಶೋಷಿತರನ್ನು ಧ್ವನಿ ಇಲ್ಲದವರನ್ನು ಸಮಾಜದಲ್ಲಿ ಮೇಲಕ್ಕೆತ್ತುವುದು ಅಂಬೇಡ್ಕರ್‌ ರವರ ಕನಸಾಗಿತ್ತು. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಪ್ರತಿಭಟನೆಗಳನ್ನು ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮಾಜ ಕಸ ಗುಡಿಸುವವರು, ಅವರ ಮಾತನ್ನು ನಾನು ಕೇಳಬೇಕೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು. ಇದು ಇಡೀ ಮಾದಿಗ ಸಮುದಾಯಕ್ಕೆ ಆದ ಅವಮಾನ. ದಲಿತರ ಕಡು ವೈರಿಯಾಗಿರುವ ಕಾಂಗ್ರೆಸ್‌ ಸರ್ಕಾರವನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವುದು ನಮ್ಮ ಮುಂದಿರುವ ಗುರಿ. ಇದಕ್ಕೆ ದಲಿತ ಸಮುದಾಯ ಕೈಜೋಡಿಸಬೇಕು ಎಂದು ಮೂರ್ತಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next