Advertisement

ನೃತ್ಯದ ಮೂಲಕ ಅನಾವರಣಗೊಂಡ ದೇಶದ ಸಾಂಸ್ಕೃತಿಕ ವೈಭವ

12:07 PM Jan 17, 2018 | |

ಬೆಂಗಳೂರು: ಕರ್ನಾಟಕದ ಜಾನಪದ, ತಮಿಳುನಾಡಿನ ಆದಿಮೇಳಂ, ತೆಲಂಗಾಣದ ಮಥುರಿ, ರಾಜಸ್ತಾನದ ಕಲ್‌ಬೇಲಿಯಾ ಹಾಗೂ ಉತ್ತರಖಂಡದ ಥಡ್ಯಾ ಚಪೆಲಿ ನೃತ್ಯ ಸೇರಿ ದೇಶದ ನಾನಾ ಭಾಗದ ಸಾಂಸ್ಕೃತಿಕ ನೃತ್ಯ ಪ್ರದರ್ಶನಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣ ವೇದಿಕೆಯಾಗಿತ್ತು.

Advertisement

ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ-2018ರ ಮೂರನೇ ದಿನವಾದ ಮಂಗಳವಾರ ದೇಶದ ವಿವಿಧ ಭಾಗದ ಸಾಂಸ್ಕೃತಿ ಸೊಗಡನ್ನು ಬಿಂಬಿಸುವ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡಿದೆ.

ಉತ್ತರಖಂಡದ ಕಲಾವಿದರು ಅಲ್ಲಿನ ಪ್ರಮುಖ ಜಾನಪದ ನೃತ್ಯವಾದ ಥಡ್ಯಾ ಚಪೆಲಿ ನೃತ್ಯವನ್ನು ವಿಶೇಷವಾದ ವೇಷಭೂಷಣ ಹಾಗೂ ತಾಳವಾದ್ಯದೊಂದಿಗೆ ಪ್ರಸ್ತುತ ಪಡಿಸಿದರು. ಕರ್ನಾಟಕ ಕಲಾವಿದರು “ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ’ ಮತ್ತು ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವ’ ನೃತ್ಯದ ಮೂಲಕ ಕರ್ನಾಟಕದ ಜಾನಪದ ಕಲೆಯ ವರ್ಣನೆ ಮಾಡಿದರು.

ತಮಿಳುನಾಡಿನಾದ್ಯಂತ ಹಬ್ಬ, ಉತ್ಸವ ಹಾಗೂ ದೇವಸ್ಥಾನದಲ್ಲಿ ಹೆಚ್ಚಾಗಿ ಆಯೋಜಿಸುವ ಆದಿಮೇಳಂ ನೃತ್ಯವನ್ನು ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಲ್ಲಿನ ಕಲಾವಿದರು ತುಂಬ ಸುಂದರವಾಗಿ ಸಾದರಿಪಡಿಸಿದರು. ತಮಿಳುನಾಡಿನ ಕರಗ, ಕಾವಡಿ, ಪೊಯಿಕಾಲ್‌ ಕುದುರೆ ಮೊದಲಾದ ನೃತ್ಯ ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧಗೊಳಿಸಿತು.

ಒರಿಶಾದ ಸಂಬಲ್‌ ಪುರಿ ನೈತ್ಯ, ಹಿಮಾಚಲ ಪ್ರದೇಶದ ಗುಡಿ ನೃತ್ಯ, ತೆಲಂಗಾಣದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸುವ ಮಥುರಿ ನೃತ್ಯದ ಜತೆಗೆ ಧೀಮ್ಸಾ ನೃತ್ಯ ಪ್ರದರ್ಶನ ಎಲ್ಲರನ್ನು ಭಾವನ ಲೋಕಕ್ಕೆ ಕೊಂಡೊಯ್ಯದಿದೆ. ವಯೋಲಿನ್‌ ವಾದಕ ಅಪೂರ್ವ ಕೃಷ್ಣ ಅವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು.

Advertisement

ಸಂಸ್ಕೃತಿ ಮಹೋತ್ಸವ: ಬೆಂಗಳೂರಿನಲ್ಲಿ ನಡೆದ ಮೂರು ದಿನದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದಲ್ಲಿ ಕರ್ನಾಟಕ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಉತ್ತರಖಂಡ, ರಾಜಸ್ತಾನ, ತಮಿಳುನಾಡು, ಕೇರಳ ಹೀಗೆ ಬಹುತೇಕ ಎಲ್ಲಾ ರಾಜ್ಯದ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ಕಂಡಿದೆ. ಜ.17 ಮತ್ತು 18ರಂದು ಹುಬ್ಬಳ್ಳಿ ಧಾರವಾಡ ನೆಹರು ಮೈದಾನದಲ್ಲಿ  ಹಾಗೂ ಜ.19 ಮತ್ತು 20ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ ನಡೆಯಲಿದೆ.

ಕರಕುಶಲ ಮೇಳ: ರಾಷ್ಟ್ರೀಯ ಸಾಂಸ್ಕೃತಿ ಮಹೋತ್ಸವಕ್ಕೆ ಇನ್ನಷ್ಟು ಮೆರಗು ನೀಡಲು ಕರಕುಶಲ ಮೇಳವನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳ ಕೈಮಗ್ಗ ಹಾಗೂ ಕರಕುಲಶ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next