Advertisement

Desi Swara: ಮಸ್ಕತ್‌ನಲ್ಲಿ ಮಿಂಚಿದ ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವ

12:56 PM Feb 03, 2024 | Team Udayavani |

ಮಸ್ಕತ್‌ ಕನ್ನಡಿಗರಿಗೆ ಜ.12 ಒಂದು ವಿಶೇಷ ದಿನವಾಗಿತ್ತು. ಅಂದು ಉತ್ತರ ಕರ್ನಾಟಕದ ವೈವಿಧ್ಯಮಯ ಜಾನಪದ ಜಾತ್ರೆಯನ್ನು ಹಮ್ಮಿಕೊಂಡ ದಿನ. ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವ, ಭಾಷೆ, ಸಾಹಿತ್ಯ, ಜಾನಪದ ಸೊಗಡನ್ನ ಪ್ರದರ್ಶಿಸಿ ಸಂಭ್ರಮಿಸಿದ ದಿನ ಮತ್ತು ಹೊಸವರ್ಷದ ಮೊಟ್ಟ ಮೊದಲ ಹಬ್ಬ ಕೂಡ. ಹೌದು ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದ ಮಸ್ಕ್ತ್‌ನಲ್ಲಿ ಬದುಕು ಕಟ್ಟಿಕೊಂಡಿರುವ ಉತ್ತರ ಕರ್ನಾಟಕದ ಸಮಾನ ಮನಸ್ಕರು ಸೇರಿ ರಚಿಸಿದ ಚಾಲುಕ್ಯ ಕೂಟ, ಮಸ್ಕತ್‌ನ ಹೊರವಲಯದ ವಿಶಾಲವಾದ ಫಾರ್ಮ್ ಹೌಸ್‌ವೊಂದರಲ್ಲಿ ಜಾನಪದ ಜಾತ್ರೆಯನ್ನು ಅದ್ದೂರಿಯಾಗಿ ಹಮ್ಮಿಕೊಂಡು, ಅತ್ಯುತ್ತಮವಾಗಿ ಸಂಯೋಜಿಸಿ, ನಿರೂಪಿಸಿ ಯಶಸ್ವಿಗೊಳಿಸಿದ್ದಾರೆ.

Advertisement

ಜಾನಪದ ಜಾತ್ರೆಯಲ್ಲಿ ಏನೇನಿತ್ತು?
ಸಾಮಾನ್ಯವಾಗಿ ಜಾತ್ರೆ ಎಂದಾಗ ಅದು ಅಲ್ಲಿನ ಗ್ರಾಮದೇವತೆ, ದೇವ ದೇವತೆಗಳನ್ನ ಕೇಂದ್ರೀಕರಿಸಿ ರಥೋತ್ಸವ, ದೀಪಾಲಂಕಾರಗಳೊಂದಿಗೆ ಅಚರಿಸುತ್ತಾರೆ. ಆದರೆ ಮಸ್ಕತ್ತ್ನ ಜಾನಪದ ಜಾತ್ರೆಯಲ್ಲಿ ಮಾತ್ರ ನಮ್ಮ ಮಣ್ಣಿನ ಜಾನಪದ ಸೊಗಡು, ದೇಸಿತನ, ಭಾಷೆ, ಸಾಹಿತ್ಯ, ಕಲೆಗಳೇ ದೇವರಾಗಿದ್ದವು. ಚಾಲುಕ್ಯ ಕೂಟದ ಜಾನಪದ ಜಾತ್ರೆಯ ಆಮಂತ್ರಣ ಪತ್ರ ಆರಂಭವಾಗಿದ್ದೆ ಹೀಗೆ ಉತ್ತರ ಕರ್ನಾಟಕದ ಧಾಟಿಯಲ್ಲಿ “ನೀವು ಬನ್ನಿ ನಿಮ್ಮವರನ್ನು ಕರಕೊಂಡ ಬನ್ರೀ’ ಎಂದು. ಈ ಶೀರ್ಷಿಕೆಯಲ್ಲಿದ್ದ ಜಾನಪದ ಸೊಗಡಿನ ಪರಿಮಳವಕ್ಕೆ ಮಾರುಹೋದ ಮಸ್ಕತ್‌ ಕನ್ನಡಿಗರು ತಾವಲ್ಲದೆ ತಮ್ನವರನ್ನೆಲ್ಲ ಕರೆತಂದು ಕಾರ್ಯಕ್ರಮಕ್ಕೆ ಸಾಕಷ್ಟು ಮೆರಗು ತಂದುಕೊಟ್ಟರು. ದೂರದ ಸಲಾಲಾ, ಸೋಹಾರ್‌ ಹಾಗೂ ಇಬ್ರಿಯಿಂದ ಕೂಡ ಕನ್ನಡಿಗರು ಆಗಮಿಸಿ ಸಂಭ್ರಮಿಸಿದರು.

ನಮಸ್ಕಾರ ಬರ್ರಿ….’
ಇದು ಜಾನಪದ ಜಾತ್ರೆಗೆ ಬಂದವರನ್ನು ಸ್ವಾಗತ ಕೋರಲು ತಯಾರಿಸಿದ ಸ್ವಾಗತ ದ್ವಾರದ ಶೀರ್ಷಿಕೆಯಾಗಿತ್ತು. ಅಲ್ಲಿಗೆ ಬಂದವರೆಲ್ಲ ನೋಂದಣಿ ಮಾಡಿಕೊಂಡು, ಮಹಿಳೆಯರಿಗೆ ನತ್ತು, ಹೂವು, ಅರಿಶಿನ-ಕುಂಕುಮ, ಪುರುಷರಿಗೆ ಗಾಂಧಿ ಟೋಪಿ ಹಾಗೂ ಮಕ್ಕಳಿಗೆ ಚಿಗಳಿ ಕೊಟ್ಟು ಸ್ವಾಗತಿಸಲಾಯಿತು. ಅಲ್ಲಿಂದ ಮುಂದೆ ಸಾಗುತ್ತಿದ್ದಂತೆ ಅಲ್ಲಿನ ವಿಶಾಲವಾದ ಹಸುರು ಮೈದಾನದ ಮೂಲೆಯೊಂದರಲ್ಲಿ ನಿರ್ಮಿಸಿದ್ದ ಹಳ್ಳಿಮನೆ ಸೆಲ್ಪಿ ಬೂಥ್‌ ಎಲ್ಲರನ್ನು ತನ್ನೆಡೆಗೆ ಆಕರ್ಷಿಸುತ್ತಿತ್ತು. ಬಂದವರೆಲ್ಲ ಕುಟುಂಬದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮುಂದೆ ಕಾರ್ಯಕ್ರಮದ ವೇದಿಕೆಯೆಡೆಗೆ ಸಾಗುತ್ತಿದ್ದರು.

ಅದಾಗಲೇ ಭಜನೆಯೊಂದಿಗೆ ವೇದಿಕೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಚಾಲುಕ್ಯ ಕೂಟದ ಸದಸ್ಯರಿಂದ ಕಡಕೋಳ ಮಡಿವಾಳಪ್ಪನ “ಈ ಧರೆಯ ಭೋಗವ ಬಿಟ್ಟು ಗುರುಪಾದದ ಸೇವೆಗೆ ಬರ್ತೀರಾ? ನೀವು ಇಲ್ಲೇ ಇರ್ತೀರಾ?’ ಎಂಬ ಸಮೂಹಗಾನ ಎಲ್ಲೆಡೆ ಪಸರಿಸಿತ್ತು. ನಡುನಡುವೆ “ಗೀಯ ಗಾ….ಗಾಗೀಯ….ಗಾ ಗೀಗಿ’ ಪದದ ಸ್ವರ ತೇಲಿ ಬರುತ್ತಿತ್ತು. ಈ ಪರಿಯ ಹಳ್ಳಿ ಹಕ್ಕಿಗಳ ಹಾಡಿನ ಕಲರವ ಒಂದು ಕ್ಷಣ ನಾವು ಮಸ್ಕತ್‌ನಲ್ಲಿದ್ದೇವೆಯೋ, ಊರಲ್ಲಿದ್ದೆವೋ ಎನ್ನುವುದು ಗೊತ್ತಾಗದ ಮಟ್ಟಿಗೆ ಜನಪದ ಸೊಗಡಿನ ಕಂಪು ಆ ಪರಿಸರದಲ್ಲೆಲ್ಲ ಹರಡಿತ್ತು.

Advertisement

ಚಾಲುಕ್ಯ ವೈಭವ
ಉತ್ತರ ಕರ್ನಾಟಕದ ಗತ ವೈಭವವನ್ನು ನೆನಪಿಸಲು ಪುಟಾಣಿಗಳ ಫ್ಯಾಷನ್‌ ಶೋ ಮನಸೂರೆಗೊಂಡಿತ್ತು. ಕುಮಾರವ್ಯಾಸ, ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಸಿದ್ದೇಶ್ವರ ಸ್ವಾಮಿಜೀ, ಕೊರವಂಜಿ, ಗವಿಸಿದ್ದೇಶ್ವರ ಸ್ವಾಮಿ, ಬಸವಣ್ಣ, ಮಾಡರ್ನ್ ಗೌಡತಿ, ಗೌಡ್ರು, ಶರೀಫ‌ಜ್ಜ, ದ. ರಾ. ಬೇಂದ್ರೆ, ಅರ್ಚಕ, ಮತ್ತು ಬಳೆಗಾರ ಚೆನ್ನಯ್ಯನ ರೂಪದಲ್ಲಿ ವೇದಿಕೆ ಮೇಲೆ ಮಿಂಚಿದ ಪುಟಾಣಿಗಳನ್ನ ನೋಡುವುದೆ ಒಂದು ಖುಷಿ. ಅವರ ವೇಷಭೂಷಣ, ಹಾವಭಾವ, ಚಲನೆ ಗತಕಾಲದ ಚಾಲುಕ್ಯ ವೈಭವವನ್ನು ಎಲ್ಲರ ಕಣ್ಣ ಮುಂದೆ ತಂದು ಕಟ್ಟಿತ್ತು.

ಉಪಮಾತೀತ ಉತ್ತರ ಕರ್ನಾಟಕ
ಚಾಲುಕ್ಯ ಕೂಟದ ಆಮಂತ್ರಣ ಒಪ್ಪಿ ತಾಯ್ನಾಡಿನಿಂದ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಡಾ| ಶಂಭು ಬಳಗಾರ್‌ ಅವರು “ಉಪಮಾತೀತ ಉತ್ತರ ಕರ್ನಾಟಕ ಉಪನ್ಯಾಸ’ವನ್ನ ನೆರೆದ ಕನ್ನಡಿಗರಿಗೆಲ್ಲ ಉಣಬಡಿಸಿದರು. ಬಾಲ್ಯದಲ್ಲಿ ಅವರ ನೆಚ್ಚಿನ ಮಲ್ಲಯ್ಯನ ಹಾಸ್ಯಭರಿತ ಕ್ಯಾಸೆಟ್‌ಗಳನ್ನ ಕೇಳಿ ಬೆಳೆದ ನಮಗೆ ಇಂದು ಅವರ ಉಪನ್ಯಾಸವನ್ನ ನೇರವಾಗಿ ಕೇಳಿ ಅನಂದಿಸುವ ಭಾಗ್ಯ ದೊರಕಿತ್ತು.

ಡಾ| ಶಂಭು ಬಳಗಾರ್‌ ಅವರು ಉಪನ್ಯಾಸದುದ್ದಕ್ಕೂ ಜಾನಪದ, ಕೌಟುಂಬಿಕ ಮೌಲ್ಯಗಳು, ಗ್ರಾಮೀಣ ಬದುಕು, ನಿಸರ್ಗದೊಂದಿಗಿನ ಸಮನ್ವಯ ಮತ್ತು ಅವುಗಳಲ್ಲೇ ಸಹಜವಾಗಿ ಹುಟ್ಟಿದ ಹಾಸ್ಯವನ್ನು ತಿಳಿಸಿದ ರೀತಿ ನಮ್ಮನ್ನೆಲ್ಲ ಮೋಡಿ ಮಾಡಿತ್ತು. ದೇಸಿ ಮಣ್ಣಿನ ತಾಜಾ ಪರಿಮಳ, ಸಹಜತೆ, ದೇಸಿ ಸೊಗಡು ಮತ್ತು ಸುಂದರ ನಿರೂಪಣೆ ಡಾ| ಶಂಭು ಬಳಗಾರ್‌ ಅವರ ಉಪನ್ಯಾಸದಲ್ಲಿ ಕಂಡು ಬಂದಿತು. ಮಧ್ಯೆಮಧ್ಯೆ ಜಾನಪದ ಹಾಡುಗಳನ್ನ ತಮ್ಮ ಸಿರಿಕಂಠದಲ್ಲಿ ಹಾಡಿ ಜನಪದ ಹಾಡುಗಳನ್ನ ಮತ್ತಷ್ಟು, ಶ್ರೀಮಂತವಾಗಿಸಿ ನಮ್ಮನ್ನೆಲ್ಲ ಮನರಂಜಿಸಿದರು.

ಜಾನಪದ ಸೊಗಡು
ತಾಯ್ನಾಡಿನಿಂದ ಬಂದ ಇನ್ನೊಬ್ಬ ಅಥಿತಿಗಳು ಎಂದರೆ ಜ್ಯೋತಿರ್ಲಿಂಗ ಮತ್ತು ಅವರ ಸಹ ಕುಟುಂಬ. ನಮಗೋಸ್ಕರ ಜಾನಪದ ಸೊಗಡಿನ ಸಂಗೀತದ ಬುತ್ತಿ ಹೊತ್ತು ತಂದಿದ್ದರು. ವ್ರತ್ತಿಯಲ್ಲಿ ಪೊಲೀಸ್‌ ಆಗಿರುವ ಜ್ಯೋತಿರ್ಲಿಂಗ ಅವರು ಅತ್ಯಂತ ಉತ್ಸಾಹದಿಂದ ಶಿಶುನಾಳ ಷರೀಫ‌ರ ತಣ್ತೀಪದಗಳನ್ನ, ಭಜನಾ ಪದಗಳನ್ನ, ಪ್ರಾರ್ಥನೆಗಳನ್ನ ತಂಬೂರಿ, ತಬಲಾ, ಹಾರ್ಮೋನಿಯಮಗಳೊಂದಿಗೆ ಲಯಬದ್ಧವಾಗಿ ಮತ್ತು ಸುಶ್ರಾವ್ಯವಾಗಿ ಹಾಡಿ ನಮ್ಮನ್ನೆಲ್ಲ ಮನರಂಜಿಸಿದರು. ಉತ್ತರ ಕರ್ನಾಟಕದ ಬಗೆಬಗೆಯ ಖಾದ್ಯಗಳನ್ನ ಸವಿದಿದ್ದ ನಮಗೆಲ್ಲ ಜ್ಯೋತಿರ್ಲಿಂಗ ಅವರ ಪರಿವಾರದಿಂದ “ಇನ್ನೂ ಯಾಕ್‌ ಬರಲಿಲ್ಲಾಂವ್‌ ಹುಬ್ಬಳ್ಳಿಯಾಂವಾ, ವಾರದಾಗ ಮೂರು ಸರ್ತಿ ಬಂದ ಹೋಗಾಂವ’ ಸುಪ್ರಸಿದ್ದ ಬೇಂದ್ರೆಯವರ ಕವನ ದೇಸಿ ಮಣ್ಣಿನ ಇಂಪು ಕಂಪು ಸಿಂಪಡಿಸಿತ್ತು.

ಬುತ್ತಿ ಊಟ
ಡಾ| ಶಂಭು ಬಳಗಾರ್‌ ಅವರ ಉಪನ್ಯಾಸ ಮುಗಿಯುತ್ತಿದ್ದಂತೆ ಬುತ್ತಿ ಊಟ ಪ್ರಾರಂಭವಾಯಿತು. ಊಟದ ಪಟ್ಟಿಯಲ್ಲಿ ಇಡೀ ಉತ್ತರ ಕರ್ನಾಟಕವೇ ಕಾಣಿಸುತ್ತಿತ್ತು. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಮಡಕಿಕಾಳು ಪಲ್ಯ, ಬದನೆಕಾಯಿ ಪಲ್ಯ, ಜುನುಕದ ವಡೆ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಅಗಸಿ ಚಟ್ನಿ, ಕೆಂಪು ಚಟ್ನಿ, ಮೊಸರು, ಬುತ್ತಿಅನ್ನ, ಸಲಾಡ್‌, ಅನ್ನ, ಬೇಳೆಸಾರು, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಹುಗ್ಗಿ, ಶೇಂಗಾ ಹೋಳಿಗಿ ಮತ್ತು ಕರ್ಚಿಕಾಯಿ.

ಈ ಬುತ್ತಿ ಊಟದ ವಿಶೇಷತೆ ಎಂದರೆ ಬಹುತೇಕ ಪದಾರ್ಥಗಳನ್ನ ಇಲ್ಲಿಯೆ ಮಸ್ಕತ್‌ನಲ್ಲಿ ಚಾಲುಕ್ಯ ಕೂಟದ ಮಹಿಳಾ ಮಣಿಗಳು ತಮ್ಮ ತಮ್ಮ ಮನೆಗಳಲ್ಲೇ ಕೈಯಾರೆ ಸಿದ್ಧಪಡಿಸಿ ತಂದು ಉಣಬಡಿಸಿದ್ದು. ಮೇಲಾಗಿ ಎಲ್ಲರೊಂದಿಗೆ ಸೇರಿ ಕುಳಿತು ಜವಾರಿ ರುಚಿ ಸವಿಯುತ್ತ ನಮ್ಮ ನೆಲದ ಜನಪದ ಗೀತೆಗಳನ್ನ ಆಲಿಸುತ್ತಿದ್ದರೆ ನಮ್ಮ ಆನಂದಕ್ಕೆ ಆ ಕುಬೇರನು ಅಸೂಯೆ ಪಟ್ಟಿರಬಹುದು.

ಅತಿಥಿಗಳ ಸತ್ಕಾರ
ತಾಯ್ನಾಡಿನಿಂದ ಆಗಮಿಸಿ ಕಾರ್ಯಕ್ರಮದುದ್ದಕ್ಕೂ ಜಾನಪದ ಸೊಗಡು, ಸಂಗೀತ, ಹಾಸ್ಯ, ಹಾಡು, ಸಾಹಿತ್ಯದ ಅಮೃತಸಿಂಚನ ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ಡಾ| ಶಂಭು ಬಳೆಗಾರ ಹಾಗೂ ಜ್ಯೋತಿರ್ಲಿಂಗ ಮತ್ತು ಅವರ ಕುಟುಂಬವನ್ನು ಚಾಲುಕ್ಯ ಕೂಟದ ಕಾರ್ಯಕರ್ತರು ಹೂಗುತ್ಛ, ಶಾಲುಗಳಿಂದ ಸಮ್ಮಾನಿಸಿದರು ಹಾಗೂ ಜಾನಪದ ಜಾತ್ರೆಯನ್ನು ಅತ್ಯಂತ ಉತ್ಸಾಹದಿಂದ ಆನಂದಿಸಿ ಕೊನೆಯವರೆಗೂ ಇದ್ದು ಜಾತ್ರೆಗೆ ಮೆರಗು ತಂದು ಆಶೀರ್ವದಿಸಿದ ಮಸ್ಕತ್‌ನ ಗಣ್ಯರನ್ನು ಕೂಡ ಸಮ್ಮಾನಿಸಲಾಯಿತು.

ನಮ್ಮೂರ ಸಂತೆ
ನಮ್ಮೂರ ಸಂತೆ ಜಾನಪದ ಜಾತ್ರೆಯ ವಿಶೇಷ ಆಕರ್ಷಣೆಯಾಗಿತ್ತು ಕಾರಣ ಸಂತೆಯ ವ್ಯಾಪಾರ ಮಳಿಗೆಗಳನ್ನ ಸಂಪೂರ್ಣವಾಗಿ ನಿಭಾಯಿಸಿದ್ದು ಮಕ್ಕಳು ಮತ್ತು ಮಹಿಳಾಮಣಿಗಳು. ಅಜ್ಜಿ ಅಂಗಡಿ, ವೀರಭದ್ರೇಶ್ವರ ಅಂಗಡಿ, ಬ್ಯಾಡಗಿ ಮೆಣಸಿನಕಾಯಿ ಅಂಗಡಿ ಹೀಗೆ ಜವಾರಿ ಹೆಸರುಗಳೇ ಗ್ರಾಹಕರನ್ನ ಸೆಳೆದು ವ್ಯಾಪಾರಕ್ಕಿಳಿಸಿದ್ದವು. ಸಂತೆಯಲ್ಲಿನ ಬಹುತೇಕ ವಸ್ತುಗಳು ಉತ್ತರ ಕರ್ನಾಟಕದ ಉತ್ಪನ್ನಗಳಾಗಿದ್ದವು. ಮಕ್ಕಳಿಗೆ ಎಲ್ಲ ಬಗೆಯ ಆಟಿಕೆ ಸಾಮಾನುಗಳು, ಮಹಿಳೆಯರಿಗೆ ಆಕರ್ಷಕವಾದ ಬಗೆ ಬಗೆಯ ಅಭರಣಗಳು, ಖಾದಿ ಉತ್ಪನ್ನಗಳು, ಇಳಕಲ್‌ ಸೀರೆಗಳು, ಗುಳೆದಗುಡ್ಡದ ಖಣಗಳು, ಬಗೆ ಬಗೆಯ ಚಟ್ನಿಪುಡಿಗಳು, ಎಳ್ಳು ಬೆಲ್ಲ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ ಬ್ಯಾಡಗಿ ಮೆಣಸಿನಕಾಯಿ ಪುಡಿ, ಸುರುಳಿ ಹೋಳಿಗಿ, ಶೇಂಗಾ ಹೋಳಿಗಿ, ಹೆಸರಿನ ಉಂಡಿ, ಅಂಟಿನ ಉಂಡಿ, ಕರಂಡಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಬೆತ್ತೋಸ, ರುದ್ರಾಕ್ಷಿ ಮತ್ತು ವಿಭೂತಿಗಳು. ಕರ್ನಾಟಕದ ಇತರ ಭಾಗದ ಕನ್ನಡಿಗರಿಗೆ ಈ ಎಲ್ಲ ಬಗೆಯ ಉತ್ತರ ಕರ್ನಾಟಕದ ವಸ್ತುಗಳನ್ನು ಕೊಳ್ಳಲು ಒಂದು ಸದಾವಕಾಶ ಒದಗಿಸಿತ್ತು ಈ ನಮ್ಮೂರ ಸಂತೆ.

ಜವಾರಿ ಜೋಡಿ
ಜವಾರಿ ಜೋಡಿ ಕಾರ್ಯಕ್ರಮದಲ್ಲಿ ದಂಪತಿಗಳು ಉತ್ತರ ಕರ್ನಾಟಕದ ವೇಷಭೂಷಣಗಳನ್ನ ತೊಟ್ಟು ಫ್ಯಾಶನ್‌ ಶೋ ನಡೆಸಿ ಜನಮೆಚ್ಚುಗೆ ಗೊಳಿಸಿದರು. ಪುರುಷರು ಧೋತಿ, ನೆಹರೂ ಶರ್ಟ್‌, ಗಾಂಧಿ ಟೋಪಿ, ಪಟಕಾ ಧರಿಸಿ ಮೀಸೆ ತಿರುವುತ್ತಾ ಬಂದರೆ ಮಹಿಳೆಯರು ಇಳಕಲ್‌ ಸೀರೆಯುಟ್ಟು ಉತ್ತರ ಕರ್ನಾಟಕದ ಉಡುಗೆ ತೊಡುಗೆಯಲ್ಲಿ ರ್‍ಯಾಂಪ್‌ ವಾಕ್‌ ಮಾಡಿದರು, ಕೆಲವು ಜೋಡಿಗಳು ಜವಾರಿ ಒಡಪುಗಳನ್ನು ಹೇಳಿ ಚಪ್ಪಾಳೆ ಸಿಳ್ಳೆ ಗಿಟ್ಟಿಸಿಕೊಂಡರು.


ಚಾ -ಚುರುಮರಿ ಜವಾರಿ ಜೋಡಿ ರ್‍ಯಾಂಪ್‌ ವಾಕ್‌ ಮುಗಿಯುತ್ತಲೆ ಉತ್ತರ ಕರ್ನಾಟಕದ ಟ್ರೇಡ್‌ ಮಾರ್ಕ್‌ ಸ್ನ್ಯಾಕ್ಸ್‌ ಎಂದೇ ಪ್ರಸಿದ್ಧಿಯಾದ ಚುರುಮುರಿ, ಬಿಸಿಬಿಸಿ ಭಜಿ ಮತ್ತು ಚಹಾ ಸಾಯಂಕಾಲದ ಚಳಿಯನ್ನು ಬಿಡಿಸಿತ್ತು.

ಉಡಕ್ಕಿ ಕಾರ್ಯಕ್ರಮ
ಜಾನಪದ ಜಾತ್ರೆ ಮುಗಿಯುತ್ತಿದ್ದಂತೆ ಜಾತ್ರೆಗೆ ಬಂದ ಮಹಿಳೆಯರಿಗೆಲ್ಲ ಉಡಕ್ಕಿ ತುಂಬಿ ಕುಬಸದ ಕಣಗಳನ್ನ ಕೊಟ್ಟು ಗೌರವದಿಂದ ಬೀಳ್ಕೊಡಲಾಯಿತು. ಈ ಚಿಕ್ಕ ಸಮ್ಮಾನ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮೆರೆದಿತ್ತು.

ಚಾಲುಕ್ಯಕೂಟ ಮಸ್ಕತ್‌ನ ಜಾನಪದ ಜಾತ್ರೆ
ಉತ್ತರ ಕರ್ನಾಟಕದ ಪುಣ್ಯಭೂಮಿ ಮಹಾಕವಿ ರನ್ನ, ಇಮ್ಮಡಿ ಪುಲಕೇಶಿ, ಕುಮಾರ ವಾಲ್ಮೀಕಿ, ಬಸವಣ್ಣ, ಕೋಂಡಗುಳಿ ಕೇಶಿರಾಜ, ಅಮೀರಬಾಯಿ ಕರ್ನಾಟಕಿ, ಆಲೂರ ವೆಂಕಟರಾವ್‌, ಶ್ರೀ ಸ್ವಾಮಿ ರಮಾನಂದ ತೀರ್ಥರು ಹಾಗೂ ವರಕವಿ ಬೇಂದ್ರೆಯವರಂತಹ ಮಹಾನ್‌ ಚೇತನಗಳಿಗೆ ಜನ್ಮಕೊಟ್ಟ ಭೂಮಿ. ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಹೇಮರಡ್ಡಿ ಮಲ್ಲಮ್ಮನಂತ ವೀರ ವನಿತೆಯರ, ಸಾದ್ವಿಯರನ್ನ ಕೊಟ್ಟ ನೆಲ. ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ತುಂಗಭದ್ರಾ ನದಿಗಳು ಹರಿಯುವ ನಾಡು ನಮ್ಮದು, ಬಂಗಾರದಂತ ಬೆಳೆಕೊಡುವ ಭೂಮಿ ನಮ್ಮದು. ಕೆ.ಎಲ್.ಈ., ಬಿ.ಎಲ್.ಡಿ.ಈ., ಬಿ.ವಿ.ವಿ. ಶಿಕ್ಷಣ ಸಂಸ್ಥೆಗಳು, ನೂರಾರು ದಾಸೋಹ ಮಠಗಳು ನಮ್ಮಲ್ಲಿವೆ. ರಾಜ್ಯದ ಸುಮಾರು ಅರ್ಧ ಡಜನ್‌ ಮುಖ್ಯಮಂತ್ರಿಗಳು ನಮ್ಮ ನಾಡಿನಿಂದ ಬಂದವರು. ನಮ್ಮಲ್ಲಿ ಬಸವಣ್ಣನಿ‌ದ್ದಾನೆ, ಶರೀಫ‌ಜ್ಜನಿದ್ದಾನೆ, ದಾಸಶ್ರೇಷ್ಠರಿದ್ದಾರೆ, ರಾಮಭಕ್ತ ಹನುಮಂತ, ಗುರುರಾಯ ರಾಘವೇಂದ್ರರಿದ್ದಾರೆ, ವಚನ ಸಾಹಿತ್ಯ, ದಾಸ ಸಾಹಿತ್ಯ ನಮ್ಮಲ್ಲಿದೆ, ಮೇಲಾಗಿ ಜಗತ್ತನ್ನೇ ಆಲಂಗಿಸಬಲ್ಲ “ಇವನಮ್ಮವ, ಇವನಮ್ಮವ, ಇವನಮ್ಮವ ಎಂದೆನಿಸಯ್ಯ’ ಎಂಬ ತತ್ವ ನಮ್ಮಲ್ಲಿದೆ.

ಆದ್ದರಿಂದ ಮಸ್ಕತ್‌ನಲ್ಲಿ ಮಿಂಚಿದ ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವದ ಮಿಂಚು ಜಗತ್ತಿನ ಮೂಲೆ ಮೂಲೆಯಲ್ಲಿರೋ ಉತ್ತರ ಕರ್ನಾಟಕದ ಕನ್ನಡಿಗರ, ನಾಡಿನ ಗಣ್ಯರ, ಉದ್ಯಮಿಗಳ, ಸಮಾಜೋ ಧಾರ್ಮಿಕ ಮುಖಂಡರ ಗಮನ ಸೆಳೆದು ನಾಡಿನ ಒಟ್ಟಾರೆ ಅಭಿವೃದ್ಧಿಯತ್ತ ಗಮನಹರಸಿ ಕಾರ್ಯೋನ್ಮುಖವಾಗಲಿ ಎನ್ನುವುದೇ ಈ ಜಾನಪದ ಜಾತ್ರೆಯ ಮಹದಾಸೆ. ಮಸ್ಕತ್‌ನಲ್ಲಿ ಜರುಗಿದ ಈ ಜಾನಪದ ಜಾತ್ರೆ ಉತ್ತರ ಕರ್ನಾಟಕದ ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಲಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಯ ಹಾದಿಯಲ್ಲಿ ಹೊಸ ಮನ್ವಂತರದ ಗಾಳಿ ಬೀಸಲಿ, ಚಾಲುಕ್ಯ ಕೂಟ ಮಸ್ಕತ್‌ ಮುಂದಿನ ವರ್ಷ ಇದಕ್ಕಿಂತ ದೊಡ್ಡ ಜಾನಪದ ಜಾತ್ರೆ ಆಯೋಜಿಸಿ ಯಶಸ್ಸು ಪಡೆಯಲಿ ಎಂದು ಆಶಿಸುವೆ.

ನೀವು ಮಸ್ಕತ್‌ನ ಜಾನಪದ ಜಾತ್ರೆಯನ್ನ ನೋಡಲು ಉತ್ಸುಕರಾಗಿದ್ದಲ್ಲಿ ಈ ಕೊಂಡಿ ಒತ್ತಿ-https://www.youtube.com/@ChalukyaKootaMuscat

ಮತ್ತೆ ಸಿಗೋನ್ರಿ…..

*ಪ್ರಕಾಶ ಉಳ್ಳೇಗಡ್ಡಿ, ಮಸ್ಕತ್

Advertisement

Udayavani is now on Telegram. Click here to join our channel and stay updated with the latest news.

Next