ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮೊದಲ ದಿನ ಮೂರು ಕಾರ್ಯಕ್ರಮಗಳು ಪ್ರಸ್ತುತಿಗೊಂಡವು. ಮಂಗಳೂರಿನ ಮಾಲಿನಿ ಕೇಶವ ಪ್ರಸಾದ್ ಅವರ ಸುಗಮ ಸಂಗೀತಕ್ಕೆ ಕೀಬೋರ್ಡ್‌ನಲ್ಲಿ ಸತೀಶ ಸುರತ್ಕಲ್, ತಬ್ಲಾದಲ್ಲಿ ದೀಪಕ್‌ರಾಜ್ ಉಳ್ಳಾಲ, ಮ್ಯಾಂಡೋಲಿನ್‌ನಲ್ಲಿ ದೇವರಾಜ ಆಚಾರ್ ಮತ್ತು ರಿದಂ ಪ್ಯಾಡ್‌ನಲ್ಲಿ ಸುರೇಶ ಉಡುಪಿ ಸಹಕರಿಸಿದ್ದು, ಕೃಷ್ಣಪ್ರಸಾದ್ ನಿರ್ವಹಣೆಗೈದರು.
ಮೂಲತಃ ಕಾಸರಗೋಡಿನ ಪ್ರತಿಭೆ ಪ್ರಸ್ತುತ ಮೈಸೂರಿನಲ್ಲಿ ಸಿ.ಎ.ಅಭ್ಯಸಿಸುತ್ತಿರುವ ವಿ| ಪವನಶ್ರೀ ಸುಮಾರು ಒಂದೂವರೆ ಗಂಟೆಗಳ ಕಾಲ ಭರತನಾಟ್ಯದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗªಗೊಳಿಸಿದರು. ಹಾವ, ಭಾವ, ಅಭಿನಯ, ಆಂಗಿಕಗಳಲ್ಲಿ ಸ್ವಂತಿಕೆಯ ಛಾಪು ಮೂಡಿಸಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಗೆ ವಿಶ್ವನಾಥಾಷ್ಟಕಂ ಮೂಲಕ ಪುಷ್ಪಾಂಜಲಿ ಅರ್ಪಿಸಿದ ಪವನಶ್ರೀ ರಾಗಮಾಲಿಕೆ ಆದಿತಾಳದಲ್ಲಿ ನೀಲಮೇಘ ಶ್ಯಾಮಸುಂದರ ಗೀತೆಗೆ ನವರಸಗಳ ಸ್ಪುಟವಾದ ಅಭಿನಯದಲ್ಲಿ ಭಾವತನ್ಮಯಗೊಳಿಸಿದ್ದಾರೆ.
ಭಕ್ತಿರಸದಲ್ಲಿ ಮಿಂದೇಳುವ ಸ್ವಾತಿ ತಿರುನಾಳ್ ಕೃತಿಗೆ ಉತ್ತಮ ಭಾವಾಭಿನಯದ ಸ್ಪರ್ಶ ನೀಡಿ ಮನಸೂರೆಗೊಂಡಿದ್ದಾರೆ. ತಿಲ್ಲಾನದ ಮೂಲಕ ತನ್ನ ಅದ್ಭುತ ಕಲಾವಂತಿಕೆಯನ್ನು ಅಭಿವ್ಯಕ್ತಗೊಳಿಸಿ ಕಲಾಭಿಮಾನಿಗಳ ಹೃನ್ಮನ ಸೂರೆಗೊಂಡಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ವಿ|ಬಾಲಸುಬ್ರಹ್ಮಣ್ಯ ಶರ್ಮ ಮತ್ತು ವಿ| ಸಿ.ಎಸ್.ಲಕ್ಷ್ಮೀ, ನಟುವಾಂಗದಲ್ಲಿ ವಿ| ಲಕ್ಷ್ಮೀ ಕುಮಾರ್, ಮೃದಂಗದಲ್ಲಿ ವಿ| ಎಚ್.ಎಲ್.ಶಿವಶಂಕರ ಸ್ವಾಮಿ, ಕೊಳಲಿನಲ್ಲಿ ವಿದ್ವಾನ್ ಕೃಷ್ಣಪ್ರಸಾದ್ ಸಹಕರಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದ್ದಾರೆ.
ಉಡುಪಿ ಜಿಲ್ಲೆ ಎಲ್ಲೂರಿನ ಶ್ರೀ ಪಂಚಾಕ್ಷರಿ ಮಕ್ಕಳ ಯಕ್ಷಗಾನ ಮೇಳದ ಮಕ್ಕಳಿಂದ ಸ್ವಯಂಪ್ರಭಾ ಪರಿಣಯ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಬ್ರಹ್ಮನ ಪುತ್ರಿ ಸ್ವಯಂಪ್ರಭೆಯನ್ನು ವರಿಸಲು ದೇವೇಂದ್ರ, ಮಣಿಪುರದ ಪದ್ಮಚೂಡ ಮತ್ತು ನಾಗರಾಜ ಸೋದರರು ಹೋರಾಟ ನಡೆಸಿ ಸೋಲನುಭವಿಸಿದಾಗ ಬ್ರಹ್ಮ ಮತ್ತು ಈಶ್ವರ ಸಂಧಾನದಿಂದ ನಡೆಯುವ ಸ್ವಯಂಪ್ರಭಾ ಪರಿಣಯ ಯಕ್ಷ ಕಲಾಭಿಮಾನಿಗಳ ಮನತಣಿಸಿತು. ಎಳೆಯ ಮಕ್ಕಳು ಗಂಡು ಕಲೆಯನ್ನು ಕರಗತ ಮಾಡಿಕೊಂಡು ಪ್ರಬುದ್ಧ ಅಭಿನಯದಿಂದ ಮೆಚ್ಚುಗೆ ಗಳಿಸಿದ್ದಾರೆ.
ಸುನಿಲ್ (ದೇವೇಂದ್ರ), ವಿನೀತ್ (ನಾಗರಾಜ), ಶ್ರೀಕಾಂತ್ (ಪದ್ಮಚೂಡ), ಗೌರಿಶ್ರೀ ಮತ್ತು ಶ್ರೀಲಕ್ಷ್ಮೀ(ಸ್ವಯಂಪ್ರಭೆ) ಉತ್ತಮ ಹಾವ-ಭಾವ, ಅಭಿನಯ ಹಾಗೂ ಮಾತುಗಾರಿಕೆಯಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಶ್ರೀಲತಾ (ಅಗ್ನಿ), ಶ್ರೀವಿದ್ಯಾ (ವಾಯು), ನಿತಿಶಾ (ವರುಣ), ಸ್ಪೂರ್ತಿ (ಕುಬೇರ), ಪ್ರದ್ಯುಮ್ನ (ನಾರದ), ಧನ್ಯಾ (ಶಚಿ), ಶ್ರೀವಾಣಿ (ಮಿತ್ರಶೋಭೆ), ದಿಶಾ (ದೂತಿ ಮತ್ತು ಈಶ್ವರ), ಸನತ್ (ಯಮ ದೌಷ್ಟ್ರ) ಮತ್ತು ಪ್ರಾಣೇಶ (ದುರ್ಜನ) ಪಾತ್ರಗಳಿಗೆ ನ್ಯಾಯ ದೊರಕಿಸಿದ್ದಾರೆ. ಹಾಡುಗಾರಿಕೆಯಲ್ಲಿ ಸೀತಾರಾಮ ಭಟ್, ಚೆಂಡೆ ಮದ್ದಲೆಯಲ್ಲಿ ಆನಂದ ಗುಡಿಗಾರ್, ವಿಷ್ಣುಮೂರ್ತಿ ಭಟ್ ಮತ್ತು ವಿಶ್ವನಾಥ ಭಟ್, ಚಕ್ರತಾಳದಲ್ಲಿ ಆದಿತ್ಯ ಇನ್ನಂಜೆ ಸಹಕರಿಸಿದ್ದು, ಯಕ್ಷಗಾನ ಗುರು ಸತೀಶ ಕಾಪು ಮಾರ್ಗದರ್ಶನ ನೀಡಿ ನಿರ್ದೇಶಿಸಿದ್ದರು.
ಸಾಂತೂರು ಶ್ರೀನಿವಾಸ ತಂತ್ರಿ