Advertisement

ಮತ್ತೂಂದು ಗರಿಯ ನಿರೀಕ್ಷೆಯಲ್ಲಿ ಸಾಂಸ್ಕೃತಿಕ ನಗರ

12:38 PM Apr 30, 2017 | Team Udayavani |

ಮೈಸೂರು: ದೇಶದ ಪ್ರತಿಷ್ಠಿತ ನಗರಗಳ ನಡುವಿನ ಪೈಪೋಟಿ ನಡುವೆಯೂ ಎರಡು ಬಾರಿ ಸ್ವತ್ಛತೆಯಲ್ಲಿ ನಂ.1 ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದ ಸಾಂಸ್ಕೃತಿಕ ನಗರಿ ಮೈಸೂರು ಹ್ಯಾಟ್ರಿಕ್‌ ಸಾಧನೆಯ ನಿರೀಕ್ಷೆಯಲ್ಲಿದೆ.

Advertisement

ಈ ಹಿಂದೆ ನಡೆಸಲಾದ ಸ್ವತ್ಛ ಭಾರತ್‌ ಸಮೀಕ್ಷೆಯಲ್ಲಿ 10 ಲಕ್ಷ ಜನಸಂಖ್ಯೆ ಮೇಲ್ಪಟ್ಟ ದೇಶದ 74 ನಗರಗಳು ಪಾಲ್ಗೊಂಡಿತ್ತು. ಆದರೆ ಈ ಬಾರಿ 1 ಲಕ್ಷ ಜನಸಂಖ್ಯೆ ಹೊಂದಿರುವ 500 ನಗರಗಳ ನಡುವೆ ಸಮೀಕ್ಷೆ ನಡೆಲಾಗಿದ್ದು, ಈ ಹಿನ್ನೆಲೆ ಸ್ವತ್ಛ ಭಾರತ್‌ ಮಿಷನ್‌ ನೀಡಿದ ಎಲ್ಲಾ ನಿರ್ದೇಶನಗಳನ್ನು ಮೈಸೂರು ಮಹಾನಗರ ಪಾಲಿಕೆ ಅನುಸರಿಸಿತ್ತು.

ಹೀಗಾಗಿ ಕಳೆದ ಎರಡು ಸಮೀಕ್ಷೆಯಂತೆ ಈ ಬಾರಿಯೂ ಮೈಸೂರು ನಗರಕ್ಕೆ ನಂ.1 ಸ್ಥಾನ ದೊರೆಯುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಬಾರಿ ನಡೆದ ಸಮೀಕ್ಷೆಯಲ್ಲಿ ಮೈಸೂರು ನಗರ 2000 ಅಂಕಗಳಲ್ಲಿ 1749 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿತ್ತು.

ನಗರ ದೇಶದ ಸ್ವತ್ಛನಗರ ಎಂಬ ಹೆಗ್ಗಳಿಕೆ ದೊರೆತ ಬೆನ್ನಲ್ಲೆ ನಗರದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಅದರಂತೆ ನಗರದಲ್ಲಿ ಕಳೆದ ಜ.4 ರಿಂದ 6ರ ವರೆಗೆ ಸ್ವತ್ಛ ಸರ್ವೇಕ್ಷಣ್‌ ಸಮೀಕ್ಷೆ ನಡೆದಿದ್ದು, ಈ ಬಾರಿ ತ್ಯಾಜ್ಯ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ಕೆಲಸ-ಕಾರ್ಯಗಳ ದಾಖಲೀಕರಣಕ್ಕೆ ಶೇ.45 ಅಂಕ, ಅಧಿಕಾರಿಗಳ ವೈಯಕ್ತಿಕ ವೀಕ್ಷಣೆ ಶೇ.25 ಅಂಕ ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ಶೇ.30 ಅಂಕಗಳನ್ನು ನಿಗದಿ ಪಡಿಸಲಾಗಿತ್ತು.

ಸ್ವತ್ಛ ಭಾರತ್‌ ಅಭಿಯಾನ ಯೋಜನೆಯಡಿ “ಸ್ವತ್ಛ ನಗರಿ’ ಪ್ರಶಸ್ತಿ ಪಡೆಯಲು ದೆಹಲಿಗೆ ಮೇ 4 ರಂದು ಮೇಯರ್‌ ಅವರೊಂದಿಗೆ ಆಗಮಿಸುವಂತೆ ಸ್ವತ್ಛ ಭಾರತ್‌ ಮಿಷನ್‌ನಿಂದ ಕರೆ ಬಂದಿದ್ದು, ಮೈಸೂರಿಗೆ ಈ ಬಾರಿ ಯಾವ ಸ್ಥಾನ ದೊರೆತ್ತಿದೆ ಎಂಬುದನ್ನು ಬಹಿರಂಗ ಪಡಿಸಿಲ್ಲ. ಆದರೆ ನಗರದ ಸ್ವತ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರ ಪಾಲಿಕೆಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಈಗಾಗಲೇ ಅನುಸರಿಸಲಾಗುತ್ತಿದ್ದು, ಹೀಗಾಗಿ ಈ ಬಾರಿಯೂ ಮೈಸೂರಿಗೆ ನಂ.1ಸ್ಥಾನ ಲಭಿಸಲಿದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಮೇ 4ರಂದು ಪ್ರಶಸ್ತಿ ಪ್ರದಾನ
ದೇಶದ ಸ್ವತ್ಛನಗರಿಗಳ ಪಟ್ಟಿಯಲ್ಲಿ ಈ ಬಾರಿಯೂ ಮೈಸೂರು ತನ್ನ ಸ್ಥಾನ ಉಳಿಸಿ ಕೊಂಡಿರುವುದು ಖಚಿತವಾಗಿದ್ದು, ಮೂರನೇ ಬಾರಿಯೂ ಪ್ರಶಸ್ತಿ ಸ್ವೀಕರಿಸುವಂತೆ ಸ್ವತ್ಛ ಭಶರತ್‌ ಮಿಷನ್‌ನಿಂದ ಈಗಾಗಲೇ ನಗರ ಪಾಲಿಕೆಗೆ ಕರೆ ಬಂದಿದೆ. ಆದರೆ ಮೈಸೂರು ನಗರಕ್ಕೆ ಈ ಬಾರಿ ಎಷ್ಟನೇ ಸ್ಥಾನ ದೊರೆತ್ತಿದೆ ಎಂಬುದು ಈವರೆಗೂ ಖಾತ್ರಿಯಾಗಿಲ್ಲ.

ಹೀಗಾಗಿ ಈ ಬಾರಿಯೂ ಮೈಸೂರಿಗೆ ಸ್ವತ್ಛತೆಯಲ್ಲಿ ನಂ.1 ಪಟ್ಟ ದೊರೆಯಲಿದೆ ಎಂಬ ವಿಶ್ವಾಸ ನಗರ ಪಾಲಿಕೆ ಹೊಂದಿದ್ದು, ದೆಹಲಿಯಲ್ಲಿ ಮೇ 4ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲಿಕೆ ಮೇಯರ್‌ ಎಂ.ಜೆ. ರವಿಕುಮಾರ್‌ ಹಾಗೂ ಆಯುಕ್ತ ಜಿ. ಜಗದೀಶ್‌ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next