Advertisement

ಅಪರಾಧಿಗೆ ಜಾತಿ ಧರ್ಮದ ಬಣ್ಣ ಸಲ್ಲದು 

01:00 AM Feb 01, 2019 | Team Udayavani |

ಮಂಗಳೂರು: ವ್ಯಕ್ತಿಯೊಬ್ಬನ ಅಪರಾಧ ಕೃತ್ಯಕ್ಕೆ ಜಾತಿ-ಧರ್ಮದ ಬಣ್ಣ ಲೇಪಿಸಿ ದರೆ ಆ ಅಪರಾಧವು ಸೋಂಕಿನಂತೆ ಇನ್ನಷ್ಟು ಹರಡುತ್ತದೆಯೇ ವಿನಾ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗದು ಎಂದು ಹಿರಿಯ ಜಾನಪದ ವಿದ್ವಾಂಸ ಪ್ರೊ| ಬಿ.ಎ. ವಿವೇಕ ರೈ ಹೇಳಿದರು.

Advertisement

ಮೂರು ದಿನಗಳ ಕಾಲ ನಗರದ ಪುರಭವನ ದಲ್ಲಿ ನಡೆದ ದ.ಕ. 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ಅವರು ಸಮಾರೋಪ ಭಾಷಣ ಮಾಡಿದರು. 

ಕರಾವಳಿಯಲ್ಲಿ ಮಂಜೇಶ್ವರ ಗೋವಿಂದ ಪೈ ಅವರಂತಹ ಮಹಾನ್‌ ವ್ಯಕ್ತಿಗಳು ತಾವಿದ್ದ ನೆಲದಲ್ಲಿ ನಿಂತೇ ಜಗತ್ತಿನತ್ತ ಮುಖ ಮಾಡಿ ಬೆಳೆದರು. ಸಾಹಿತ್ಯವನ್ನೂ ಬೆಳೆಸಿದರು. ಶಿವರಾಮ ಕಾರಂತರು ಕೋಟದವರಾದರೂ ಪುತ್ತೂರು, ಸುಳ್ಯ ಬಂಟ್ವಾಳ, ಬೆಳ್ತಂಗಡಿಯ ಎಲ್ಲ ದಲಿತರ ಮನೆಗಳಿಗೆ ಭೇಟಿ ನೀಡಿ ಅವರ ಜೀವನ ಪದ್ಧತಿಯನ್ನು ಅರಿತುಕೊಳ್ಳುತ್ತಿದ್ದರು. ಮುಳಿಯ ತಿಮ್ಮಪ್ಪಯ್ಯ, ಕಡೆಂಗೋಡ್ಲು ಶಂಕರ ಭಟ್ಟರು, ಸಾರಾ ಅಬೂಬಕ್ಕರ್‌ ಮುಂತಾದವರು ತಾವು ಹುಟ್ಟಿ ಬೆಳೆದ ಪರಿಸರಕ್ಕಿಂತ ಹೊರಗಿನ ಲೋಕವನ್ನೂ ಅರಿಯುವ ನಿರಂತರ ಪ್ರಯತ್ನ ಮಾಡಿ ಸಾಹಿತ್ಯ ಲೋಕವನ್ನೇ ವಿಸ್ತರಿಸಿದರು ಎಂದರು.

ಕನ್ನಡ ವಿದ್ಯಾರ್ಥಿಗಳೇ ಅಧಿಕ: ಮೋಹನ ಆಳ್ವ
ಆಳ್ವಾಸ್‌ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದುಕೊಂಡರೂ ಪರೀಕ್ಷೆ ಬರೆಯುತ್ತಿರುವ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದು ಎಂಬುದು ಗಮನಾರ್ಹ ಅಂಶ. ಇದರಿಂದ ಕನ್ನಡಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕನ್ನಡ ಶಾಲೆಗಳಲ್ಲಿ ಓದಿದ 5.5 ಲಕ್ಷ ವಿದ್ಯಾರ್ಥಿಗಳು ಕಳೆದ ಬಾರಿ ಎಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ 3 ಲಕ್ಷ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ ಎಂದರು.

ಒಂದೊಂದೇ ಶಾಲೆಗಳನ್ನು ನಾವು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಾದರಿಯಲ್ಲಿ ಕಟ್ಟುತ್ತಾ ಹೋದರೆ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ಬಂದೇ ಬರುತ್ತಾರೆ ಎಂದರು. 

Advertisement

ಡಾ| ಬಿ.ಎಂ. ಹೆಗ್ಡೆ ಸಮ್ಮೇಳನಾಧ್ಯಕ್ಷತೆ ವಹಿಸಿ ಕೇವಲ ಒಂದೇ ನಿಮಿಷ ಮಾತನಾಡಿ ಗಮನ ಸೆಳೆದರು. ಮಾತು ಕಡಿಮೆ ಮಾಡಿ, ಕೆಲಸ ಜಾಸ್ತಿ ಮಾಡಬೇಕಿದೆ. ಇನ್ನಷ್ಟು ಸಾಹಿತ್ಯಿಕ ಕೆಲಸಗಳು ಮುಂದೆಯೂ ಜಿಲ್ಲಾ ಸಾಹಿತ್ಯ ಪರಿಷತ್‌ನಿಂದ ನಡೆಯಲಿ ಎಂದು ಆಶಿಸಿದರು.

ವಿವಿಧ ಕ್ಷೇತ್ರಗಳ 54 ಸಾಧಕರನ್ನು ಸಮ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಎಂ.ಎಸ್‌. ಮಹಾಬಲೇಶ್ವರ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಮುಖರಾದ ಕದ್ರಿ ಗೋಪಾಲನಾಥ್‌, ಕುಡಿ³ ಜಗದೀಶ್‌ ಶೆಣೈ, ಸುರೇಶ್‌ ಶೆಟ್ಟಿ ಯೆಯ್ನಾಡಿ, ಶ್ರೀನಿವಾಸ ನಾಯಕ್‌ ಇಂದಾಜೆ ಉಪಸ್ಥಿತರಿದ್ದರು. 

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಪ್ರಸ್ತಾವಿಸಿದರು. ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್‌ ಪೇಜಾವರ ಅಭಿನಂದನ ಭಾಷಣ ನಡೆಸಿದರು. ಮಾಧುರಿ ಶ್ರೀರಾಮ್‌, ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಅಧಿವೇಶನದ ನಿರ್ಣಯಗಳು
ರಾಜ್ಯ ಸರಕಾರವು 1,000 ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯಲು ತೀರ್ಮಾನಿಸಿರುವುದು ಖಂಡನೀಯ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವೇ ಮಾಧ್ಯಮವಾಗಿರಬೇಕು. ಇಂಗ್ಲಿಷನ್ನು ಒಂದು ಭಾಷೆಯಾಗಿ ಇರಿಸಿಕೊಂಡು ರಾಜ್ಯಾದ್ಯಂತ ಏಕರೂಪ ಶಿಕ್ಷಣ ಜಾರಿಗೊಳಿಸಬೇಕು. ವೈದ್ಯಕೀಯಕ್ಕೆ ಸಂಬಂಧಿಸಿದ ವಿಷಯಗಳ ಬೋಧನೆಯನ್ನು ಪಠ್ಯದಲ್ಲಿ ಅಳವಡಿಸಬೇಕು, ಸ್ಮಾರ್ಟ್‌ಸಿಟಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ನಾಡಿನ ಪಾರಂಪರಿಕ ಕಟ್ಟಡ ಮತ್ತು ಪರಿಸರ ಸಂರಕ್ಷಣೆಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸಬೇಕು. ಯಕ್ಷಗಾನವನ್ನು ರಾಜ್ಯದ ಪ್ರಾತಿನಿಧಿಕ ಸಾಂಸ್ಕೃತಿಕ ಕಲೆಯೆಂದು ಪರಿಗಣಿಸಬೇಕು, ಸರಕಾರಿ ಮತ್ತು ಅನುದಾನಿತ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಶೀಘ್ರ ಭರ್ತಿಗೊಳಿಸಬೇಕು, ಶತಮಾನ ಕಂಡ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾರ್ಪಡಿಸುವುದಕ್ಕೆ ಈ ಹಿಂದೆ ಘೋಷಿಸಿರುವಂತೆ ತತ್‌ಕ್ಷಣ ಅನುದಾನ ಬಿಡುಗಡೆ ಮಾಡಬೇಕು, ತುಳು ಭಾಷೆಗೆ ಅಧಿಕೃತ ಭಾಷೆ ಎಂಬ ಮಾನ್ಯತೆ ನೀಡಬೇಕು ಎಂದು 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next