Advertisement
ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಎರಡನೇ ದಿನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡರೆ ಮಾತ್ರವೇ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ. ಗುಲಾಮ ಗಿರಿಯನ್ನು ಒಪ್ಪಿಕೊಳ್ಳಲು ಕನ್ನಡಿಗರು ಸಿದ್ಧರಿಲ್ಲ ಎಂದು ಇದೇ ವೇಳೆ ಅವರು ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದರು. ರಾಜ್ಯಪಾಲರು ಮತ್ತು ರಾಷ್ಟ್ರಪತಿಯ ವರೆಗೆ ಹೋಗಲು ಕನ್ನಡಿಗರು ಸಿದ್ಧರಾಗಬೇಕೆಂದರು. ಮೊಸಳೆ ಕಣ್ಣೀರು ಸುರಿಸುವವರ ಬಗ್ಗೆ ಸದಾ ಜಾಗೃತರಾಗಿರಬೇಕೆಂದು ಹೇಳಿದ ಅವರು ಕನ್ನಡಿಗರು ಭಿಕ್ಷೆ ಬೇಡುತ್ತಿಲ್ಲ. ಸಂವಿಧಾನಬದ್ಧವಾಗಿ ನೀಡಿರುವ ಹಕ್ಕುಗಳನ್ನು ಮತ್ತು ಸವಲತ್ತುಗಳನ್ನು ಮಾತ್ರವೇ ಕೇಳುತ್ತಿದ್ದೇವೆ. ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಇನ್ನಷ್ಟು ತೀವ್ರವಾದ ಹೋರಾಟಕ್ಕೆ ಮುನ್ನುಗ್ಗುವುದು ಖಂಡಿತ ಎಂದರು.
ಹೋರಾಟದ ಕಿಚ್ಚನ್ನು ಇನ್ನಷ್ಟು ತೀವ್ರಗೊಳಿಸಬೇಕೆಂದ ಅವರು ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಡೆಯುವುದರಲ್ಲಿ ಸಂಶಯವಿಲ್ಲ ಎಂದರು. ಈಗ ಕಾನೂನು ರೂಪದ ಲಿಖೀತ ಆಜ್ಞೆ ಬರದಿದ್ದರೂ ಕಾಸರಗೋಡು ಡಿ.ಡಿ. ಬೆದರಿಕೆ ಮತ್ತು ಕುತಂತ್ರದಿಂದ ಮಲಯಾಳ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಡಿ.ಡಿ. ವಿರುದ್ಧವೂ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಧರಣಿಯನ್ನು ಉದ್ದೇಶಿಸಿ ನ್ಯಾಯವಾದಿ ಸದಾನಂದ ರೈ, ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ಕಾಸರಗೋಡು ನಗರಸಭಾ ಸದಸ್ಯರಾದ ಸವಿತಾ ಟೀಚರ್, ಶ್ರೀಲತಾ, ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಯುತ, ಪ್ರೊ| ಶ್ರೀಕೃಷ್ಣ ಭಟ್, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ, ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಬಿಜೆಪಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಭಟ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಂಘಟನೆ ಗಿಳಿವಿಂಡಿನ ಕಾರ್ತಿಕ್, ಕವಿ ಹರೀಶ್ ಪೆರ್ಲ, ಅಧ್ಯಾಪಕ ಅಬ್ದುಲ್ ರಹಿಮಾನ್ ಮೊದಲಾದವರು ಮಾತನಾಡಿದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದರು.ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಸ್ವಾಗತಿಸಿದರು. ಕಾಸರಗೋಡು ನಗರಸಭಾ ಸದಸ್ಯರಾದ ಸಂಧ್ಯಾ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸತ್ಯನಾರಾಯಣ ಕೆ., ಸೀತಾರಾಮ ಮಾಸ್ಟರ್, ಸತ್ಯನಾರಾಯಣ ಹೊನ್ನೆಮೂಲೆ, ಪದ್ಮರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಗಡಿನಾಡು ಕಾಸರಗೋಡು ಪ್ರದೇಶವು ಅಚ್ಚಗನ್ನಡ ನಾಡು. ಇತಿಹಾಸದಲ್ಲಿ ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ ಕ್ಷೇತ್ರ, ಊರು, ಉಸಿರು ಎಲ್ಲವೂ ಕನ್ನಡಮಯವಾಗಿದ್ದು, ಆದರೆ ಇತ್ತೀಚೆಗಿನ ವರ್ಷಗಳಿಂದ ಮಲೆಯಾಳ ಭಾಷೆಯು ತನ್ನ ಕಬಂಧಬಾಹುಗಳನ್ನು ವಿಸ್ತರಿಸಿಕೊಂಡಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯ ಅವನತಿಗೆ ನಾಂದಿ ಹಾಡಲಾಯಿತು. ಇನ್ನಾದರೂ ಇಲ್ಲಿನ ಕನ್ನಡ ಭಾಷೆ, ಶಿಕ್ಷಣಕ್ಕೆ ಒಂದಿನಿತೂ ಧಕ್ಕೆ ಬಾರದಂತೆ ಕೇರಳ ಸರಕಾರ ಮತ್ತು ಅಧಿಕಾರಿ ವರ್ಗ ಗಮನಹರಿಸಬೇಕೆಂದು ಅವರು ಆಗ್ರಹಿಸಿದರು. ರಾಜ್ಯದಲ್ಲಿ ಮಲೆಯಾಳ ಕಡ್ಡಾಯ ಆಧ್ಯಾದೇಶ ಜಾರಿಗೊಳಿಸಲಾಗಿದ್ದು, ಇದರಿಂದಾಗಿ ಕನ್ನಡಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಈ ನಿಟ್ಟಿನಲ್ಲಿ ಸರಕಾರದ ಸುಗ್ರೀವಾಜ್ಞೆಯನ್ನು ಪ್ರಬಲವಾಗಿ ಪ್ರತಿಭಟಿಸಬೇಕಾಗಿದೆ. ಕನ್ನಡಿಗರು ಎಂದಿಗೂ ಮಲೆಯಾಳ ಸಹಿತ ಬೇರೆ ಭಾಷೆಗಳನ್ನು ದ್ವೇಷಿಸುವವರಲ್ಲ. ಆದರೆ ಸಂವಿಧಾನಬದ್ಧವಾಗಿ ದೊರೆತಿರುವ ಕನ್ನಡಿಗರ ಹಕ್ಕು, ಸ್ವಾತಂತ್ರ್ಯ, ಸವಲತ್ತುಗಳನ್ನು ಕಸಿಯಲು ಹೊರಟರೆ ಸುಮ್ಮನೆ ಕೂರುವವರಲ್ಲ. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ. ಕಾಸರಗೋಡು ಪ್ರದೇಶವು ಎಂದೆಂದಿಗೂ ಕನ್ನಡ ನೆಲ ಹಾಗೂ ಕನ್ನಡ ಭಾಷಾ ಪ್ರದೇಶವೇ ಆಗಿದೆ ಎಂದು ಶ್ರೀಕಾಂತ್ ಎಂದು ಎಚ್ಚರಿಸಿದರು.