ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜ್ಯಾದ್ಯಂತ ವಿವಾದ ಉಂಟಾದಾಗ ಡಾ.ಚಿದಾನಂದಮೂರ್ತಿಯವರು “ಪ್ರತ್ಯೇಕ ಧರ್ಮ ತಿರುಕನ ಕನಸು, ವೀರಶೈವ-ಲಿಂಗಾಯತ ಒಂದೇ, ಅದು ಹಿಂದೂ ಧರ್ಮ’ ಎಂದು ಪ್ರತಿಪಾದಿಸಿದ್ದರು.
2017 ಜುಲೈ 26 ರಂದು
“ಉದಯವಾಣಿ’ಗೆ ಸಂದರ್ಶನ ನೀಡಿದ್ದ ಅವರು, ಲಿಂಗಾಯತರು, ವೀರಶೈವರು ಇಬ್ಬರೂ ಹಿಂದೂಗಳೇ. ಹಿಂದೂ ಧರ್ಮದ ಆಚರಣೆ, ಶಿವ, ಓಂ, ಪರಲೋಕ ಎಲ್ಲವನ್ನೂ ನಂಬುತ್ತಾರೆ. ಪ್ರತ್ಯೇಕ ಧರ್ಮ ಪರಿಹಾರವಲ್ಲ ಎಂದಿದ್ದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮೀಸಲಾತಿ ಸೌಲಭ್ಯ ಎಂಬುದು ಅರ್ಹತೆ ಇರುವ ಎಲ್ಲರಿಗೂ ಸಿಗಲಿ. ಪ್ರತ್ಯೇಕ ಧರ್ಮ ಮಾನ್ಯತೆ ಕೊಡದೆ ಮೀಸಲಾತಿ ಅಥವಾ ಸವಲತ್ತು ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು.
ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ ಎಂಬ ಮಾತುಗಳನ್ನು ಕಟುವಾಗಿ ಖಂಡಿಸಿದ್ದ ಅವರು, ಇದು ಮೂರ್ಖತನದ ಮಾತು. ಇತಿಹಾಸ, ವಿಚಾರ, ಪರಂಪರೆ, ಸಂಸ್ಕೃತಿ ತಿಳಿಯದವರು ಆಡುವ ಮಾತಿದು. ಅಖೀಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ವೀರಶೈವರು ಹಿಂದೂಧರ್ಮಕ್ಕೆ ಸೇರಿದವರು ಎಂದು ನಿರ್ಣಯ ಮಾಡಲಾಗಿತ್ತು. ಅದರ ದಾಖಲೆಯೂ ನನ್ನ ಬಳಿ ಇದೆ ಎಂದು ಹೇಳಿದ್ದರು.
ಪ್ರತ್ಯೇಕ ಧರ್ಮದ ವಿಚಾರ ಯಡಿಯೂರಪ್ಪ ಅಥವಾ ಇನ್ಯಾರದೋ ಪ್ರಶ್ನೆಯಲ್ಲ. ವೀರಶೈವರು-ಲಿಂಗಾಯತರ ಪ್ರಶ್ನೆ. ಇವರೆಲ್ಲರೂ ಹಿಂದೂಗಳು. ಇದು ಸೂಕ್ಷ್ಮ ಮತ್ತು ಗಂಭೀರ ವಿಷಯ. ಇದರಲ್ಲಿ ಸರ್ಕಾರ ಅಥವಾ ಆಳುವ ಪಕ್ಷ-ಪ್ರತಿಪಕ್ಷಗಳು ಹುಡುಗಾಟಿಕೆ ಆಡುವುದು ಸರಿಯಲ್ಲ ಎಂದೇ ಖಡಕ್ ಆಗಿ ಹೇಳಿದ್ದರು.