Advertisement

ರಾಜ್ಯದ 2.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟ

01:57 PM Oct 25, 2017 | Team Udayavani |

ಹೂವಿನಹಡಗಲಿ: ಪ್ರಸ್ತುತ ರೈತರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಮಾಹಿತಿ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ಮಂಗಳವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ರೈತರ ಪರಿಸ್ಥಿತಿ ಅಧ್ಯಯನ ಮಾಡಲು ಪ್ರವಾಸ ಕೈಗೊಂಡಿದ್ದು, ಈಗಾಗಲೇ ಬಾಂಬೆ ಕರ್ನಾಟಕ ಭಾಗ ಮುಗಿಸಿ, ಈಗ ಹೈ-ಕ ಪ್ರದೇಶದಲ್ಲಿ ಭೇಟಿ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು. ಈ ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳಕ್ಕೆ ಸೈನಿಕ ಹುಳುಬಾಧೆ ಕಾಣಿಸಿಕೊಂಡರೆ, ದಾವಣಗೆರೆ, ಅರಸಿಕೆರೆ ಭಾಗದಲ್ಲಿ ರೈತರ ಅಡಿಕೆ, ತೆಂಗು ಬೆಳೆಗಳಿಗೆ ರೋಗ ಕಾಣಿಸಿಕೊಂಡಿದ್ದು, ಇದರಿಂದ ರೈತ ನಷ್ಟ ಅನುಭವಿಸುತ್ತಿದ್ದಾನೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಈ ಹಿಂದೆ ಕೆರಳದಲ್ಲಿ ತೆಂಗು ಬೆಳೆಗಾರರು ನಷ್ಟ ಅನುಭವಿಸಿದಾಗ ಅಂದಿನ ಯುಪಿಎ ಸರ್ಕಾರ ಮರಕ್ಕೆ ಒಂದರಂತೆ ನಷ್ಟ ಭರಿಸಿತ್ತು. ಈಗ ಆಗಿರುವ ನಷ್ಟವನ್ನು ಕೇಂದ್ರ ಸರ್ಕಾರ ಅದೇ ರೀತಿಯಾಗಿ ಭರಿಸಬೇಕಾಗಿದೆ. ನೆರೆ ಹಾವಳಿಯಿಂದ ಹಾನಿಯಾದ ಬೆಳೆ ನಷ್ಟಕ್ಕೆ ಹಣ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದರೆ, ಇತ್ತ ರಾಜ್ಯ ಸರ್ಕಾರ ನಾವು ಕೇಳಿದಷ್ಟು ಹಣ ಬಿಡುಗಡೆ ಮಾಡಿಲ್ಲ
ಎಂದು ಹೇಳುತ್ತಿದೆ. ಇದರಿಂದಾಗಿ ರೈತ ತುಂಬಾ ಕಷ್ಟಕ್ಕೆ ಸಿಲುಕಿದ್ದಾನೆ. ಕಣ್ಣಿದ್ದು ಕುರುಡಾಗಿರುವ, ಕಿವಿ ಇದ್ದು ಕಿವುಡಾಗಿರುವ ಸರ್ಕಾರ ಎನ್ನುವಂತಾಗಿದೆ ಇಂದಿನ ಪರಿಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವದಲ್ಲಿ ಹೋರಾಟ: 
ಮಹದಾಯಿ ಹಾಗೂ ಇತರೆ ವಿಷಯಗಳಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ವಿರುದ್ಧ ಹೋರಾಟ ಮಾಡಲು ಸಾಮೂಹಿಕ ನಾಯಕತ್ವದ ಮೂಲಕ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿನ 20 ತಿಂಗಳ ಆಡಳಿತದಲ್ಲಿ ಆಗಿರುವ ರಾಜ್ಯದ ಅಭಿವೃದ್ಧಿ ಕಾರ್ಯಗಳು ಜೆಡಿಎಸ್‌ ಮತ್ತೂಮ್ಮೆ ಅಧಿಕಾರಕ್ಕೆ ತರುವಲ್ಲಿ ಸಹಾಯಕವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಜನ ನೋಡಿದ್ದಾರೆ. ಈ ಸರ್ಕಾರಗಳಿಂದ ಜನ ಬೇಸರಗೊಂಡಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿಗೆ ಮತ್ತೂಮ್ಮೆ ಅಧಿಕಾರ ಕೊಡಬೇಕೆಂದು ಜನರಲ್ಲಿ ಭಾವನೆ ಬೇರೂರಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಇತರರ ನಾಯಕತ್ವದಲ್ಲಿ ಪಕ್ಷ ಹೋರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು. ರಾಜೀನಾಮೆ ಇಂಗಿತ: ಇತ್ತೀಚೆಗೆ ಸಂಸತ್ತಿನಲ್ಲಿ ನನಗೆ ಸಮರ್ಪಕವಾಗಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಸಾಕಷ್ಟು ಬೇಸರವಾಗಿದೆ. ಈ ಕುರಿತು ಹಲವು
ಬಾರಿ ನನ್ನ ಇಂಗಿತವನ್ನು ಸಹ ಸಂಸತ್ತಿನಲ್ಲಿ ವ್ಯಕ್ತಪಡಿಸಿದ್ದೇನೆ. ಕಳೆದ 2004ರಲ್ಲಿ ಜುಲೈ 24ರಂದು ಮನಮೋಹನ್‌ಸಿಂಗ್‌ ಸರ್ಕಾರದ ಬಜೆಟ್‌ ಮೇಲೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಂಸತ್ತಿನಲ್ಲಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಅಂಕಿ-ಅಂಶಗಳ ಮಾಹಿತಿ ಪಡೆದು ಮನಮೋಹನ್‌ಸಿಂಗ್‌ ಸರ್ಕಾರವನ್ನು ತುಂಬಾ ಕಟುವಾಗಿ ಟೀಕಿಸಿದ್ದೆ. ಈಗ ಸಂಖ್ಯಾಬಲದ ಆಧಾರದ ಮೇಲೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಬೇಸರವಾಗಿದೆ. ಇಬ್ಬರೂ ಸಂಸದರಿರುವ ನಮ್ಮ ಪಕ್ಷ 15ನೇ ರ್‍ಯಾಂಕ್‌ಗೆ ಇಳಿದಿದೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿದ್ದರೆ ಹೇಗೆ?  ಈ ಎಲ್ಲಾ ವಿಷಯ ಮುಂದಿಟ್ಟುಕೊಂಡು ರಾಜ್ಯದ ಜನರ ಬಳಿ ತೆರಳಿ ಹೋರಾಟ ಮಾಡುವುದಾಗಿ ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರಾದ ಸೋಮಪ್ಪ ನಾಯಕ, ತಾಲೂಕು ಜೆಡಿಎಸ್‌ ಅಧ್ಯಕ್ಷ ನಾಗರಾಜ್‌, ಕೋಡಬಾಳ್‌ ಚಂದ್ರಪ್ಪ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಡಾ| ವೆ.ಗೌಸಿಯಾ ಬೀ ಇದ್ದರು. ಇದೇ ಸಂದರ್ಭದಲ್ಲಿ ಎಚ್‌ .ಡಿ.ದೇವೇಗೌಡ, ತಾಲೂಕಿನ ಕೊಯಿಲಾರಗಟ್ಟಿ ಗ್ರಾಮದಲ್ಲಿ ಲಚ್ಚಾನಾಯ್ಕ ಎನ್ನುವವರ ಜಮೀನಿಗೆ ಭೇಟಿ ನೀಡಿ ಸೈನಿಕ ಹುಳು ಬಾಧಗೆ ಒಳಗಾಗಿರುವ ಮೆಕ್ಕೆಜೋಳ ಬೆಳೆ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next