Advertisement
ನಮ್ಮ ದೇಶದಿಂದ ರಫ್ತು ಮಾಡುವ ನಾಲ್ಕು ಮುಖ್ಯ ಕೃಷಿ ಉತ್ಪನ್ನಗಳು: ಗೇರುಬೀಜ, ಬಾಸುಮತಿ ಅಕ್ಕಿ, ಸಾಂಬಾರ ಪದಾರ್ಥಗಳು ಮತ್ತು ಚಹಾ ಹುಡಿ. 2017ರಲ್ಲಿ ಗೇರುಬೀಜ ರಫ್ತಿನಿಂದ ನಮ್ಮ ದೇಶ ಗಳಿಸಿದ ಆದಾಯ 5,213 ಕೋಟಿ. ಆದರೆ, ನಮ್ಮ ದೇಶದ ಗೇರು ಸಂಸ್ಕರಣೆಯ ಪ್ರಧಾನ ಕೇಂದ್ರವಾದ ಕೇರಳದ ಕೊಲ್ಲಂನ ಸಂಸ್ಕರಣಾ ಘಟಕಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ, ಏರುತ್ತಿರುವ ಒಳಸುರಿಗಳ ವೆಚ್ಚ ಮತ್ತು ನಷ್ಟ.
Related Articles
Advertisement
ಅವರು ಕೊಲ್ಲಂನಿಂದ 28 ಕಿ.ಮೀ ದೂರದ ಪುತೂರಿನಲ್ಲಿರುವ ಅಲ್ಫೋನ್ಸೋ ಗೇರು ಉದ್ಯಮದ ಮಾಲೀಕರು. 1960ರ ದಶಕದಲ್ಲಿ ಹೆಚ್ಚುತ್ತಿರುವ ಸಂಸ್ಕರಣಾ ಉದ್ಯಮದ ಬೇಡಿಕೆ ಪೂರೈಸಲಿಕ್ಕಾಗಿ ಭಾರತವು ಅಸಂಸ್ಕರಿತ ಕಚ್ಚಾ ಗೇರುಬೀಜವನ್ನು ಆಮದು ಮಾಡಿಕೊಳ್ಳಲು ಆರಂಭಿಸಿತು. 1995 -2015ರ 20 ವರ್ಷಗಳ ಅವಧಿಯಲ್ಲಿ ಭಾರತದ ಗೇರು ಉತ್ಪಾದನೆಯ ಸಂಯುಕ್ತ ವಾರ್ಷಿಕ ಹೆಚ್ಚಳದ ದರ ಶೇ.3.1. ಇದಕ್ಕೆ ಹೋಲಿಸಿದಾಗ, ಆಂತರಿಕ ಗೇರುಬೀಜದ ಬೇಡಿಕೆಯ ಹೆಚ್ಚಳದ ದರ ಶೇ.5.3. (ಇದು ಭಾರತದ ಗೇರು ರಫ್ತು ಕೌನ್ಸಿಲ್ ನೀಡಿದ ಮಾಹಿತಿ.)
ಈ ಅಂತರವನ್ನು ತುಂಬಲಿಕ್ಕಾಗಿ, ಆಫ್ರಿಕಾ ಮತ್ತು ಏಷ್ಯಾದ ದೇಶಗಳಿಂದ ಭಾರತವು ಗೇರು ಬೀಜವನ್ನು ಆಮದು ಮಾಡಿಕೊಳ್ಳುತ್ತಿದೆ. ಸಮಸ್ಯೆ ಶುರುವಾದದ್ದೇ 2006ರಲ್ಲಿ. ಆಮದಾಗುವ ಅಸಂಸ್ಕರಿತ ಗೇರುಬೀಜಗಳ ಮೇಲೆ ಆ ವರ್ಷ ಕೇಂದ್ರ ಸರಕಾರ ಶೇ.9.4 ಸುಂಕ ಹೇರಿದಾಗ. ಈ ಸುಂಕದ ಹೊಡೆತ ತೀವ್ರವಾದದ್ದು 2016ರಲ್ಲಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಸಂಸ್ಕರಿತ ಗೇರುಬೀಜಗಳ ಬೆಲೆ ಟನ್ನಿಗೆ 800 ಡಾಲರಿನಿಂದ 1,800 ಡಾಲರಿಗೆ ಏರಿಕೆಯಾದಾಗ. ಇದಕ್ಕೆ ಮುಖ್ಯ ಕಾರಣ ವಿಯೆಟ್ನಾಂ ಮತ್ತು ಚೀನಾದಲ್ಲಿ, ಗೇರುಬೀಜ ಸಂಸ್ಕರಣಾ ಉದ್ಯಮ ಅಭಿವೃದ್ಧಿ ಹೊಂದಿರುವುದು
ಹಾಗೂ ಅಲ್ಲಿನ ಯಾಂತ್ರೀಕರಣದ ಮಟ್ಟ ನಮ್ಮ ದೇಶದ್ದಕ್ಕಿಂತ ಜಾಸ್ತಿ ಇರವುದು. ಭಾರತವು ಆಮದು ಮಾಡಿಕೊಂಡ ಅಸಂಸ್ಕರಿತ ಗೇರುಬೀಜದ ಪರಿಮಾಣ 2015-16ರಲ್ಲಿ 9,60,000 ಟನ್. ಇದು 2017-18ರಲ್ಲಿ 6,50,000 ಟನ್ನಿಗೆ ಕುಸಿಯಿತು. (ಕೊಲ್ಕೊತ್ತಾದ ವಾಣಿಜ್ಯ ಇಂಟೆಲಿಜೆನ್ಸ್ ಮತ್ತು ಅಂಕಿಸಂಖ್ಯೆಗಳ ಮಹಾನಿರ್ದೇಶಕರು ನೀಡಿದ ಮಾಹಿತಿ.) ಇದೇ ಸಮಯದಲ್ಲಿ ತಮ್ಮ ಬ್ಯಾಂಕ್ ಸಾಲಗಳ ಕಂತು ಮರುಪಾವತಿ ವಿಳಂಬವಾಯಿತು ಎಂಬುದು ಸಂಸ್ಕರಣಾಗಾರರ ಹೇಳಿಕೆ.
ಈ ವರ್ಷದ ಕೇಂದ್ರ ಬಜೆಟಿನಲ್ಲಿ ಈ ಆಮದು ಸುಂಕವನ್ನು ಶೇ.2.5ಕ್ಕೆ ಇಳಿಸಲಾಗಿದೆ ಎಂಬುದೊಂದು ಸಮಾಧಾನ. ಕಳೆದ 20 ವರುಷಗಳ ಅವಧಿಯಲ್ಲಿ ನಮ್ಮ ದೇಶದ ಗೇರು ಉತ್ಪಾದನೆ ಹೆಚ್ಚಾಗದಿರುವುದು ಸಮಸ್ಯೆ ಬಿಗಡಾಯಿಸಲು ಇನ್ನೊಂದು ಕಾರಣ. ಇದರ ಮೂಲದಲ್ಲಿದೆ ಸರಕಾರದ ಧೋರಣೆ. ಕೇರಳದಲ್ಲಿ ಭೂಸುಧಾರಣೆ ಮಸೂದೆ, ಇದು ಜಾರಿ ಆದದ್ದು 1970ರಿಂದ. ಇದರ ಅನುಸಾರ, ವ್ಯಕ್ತಿಯೊಬ್ಬ ಹೊಂದಿರಬಹುದಾದ ಜಮೀನಿನ ಗರಿಷ್ಠ ಮಿತಿ ಆರು ಹೆಕ್ಟೇರ್. ಆದರೆ ಪ್ಲಾಂಟೇಷನುಗಳಿಗೆ ಈ ಮಿತಿಯಿಂದ ವಿನಾಯ್ತಿ!
ಇದರಿಂದಾಗಿ, ಹಲವು ಭೂಮಾಲೀಕರು ತಮ್ಮ ಜಮೀನನ್ನು ಪ್ಲಾಂಟೇಷನ್‌ಗಳಾಗಿ ಪರಿವರ್ತಿಸಿದರು. ಗೇರು ಪ್ಲಾಂಟೇಷನ್ ಬೆಳೆ ಅಲ್ಲ; ಹಾಗಾಗಿ ಭೂಮಾಲೀಕರು ಗೇರುಕೃಷಿಯ ವಿಸ್ತರಣೆ ಮಾಡಲಿಲ್ಲ. ಗೇರು ರಫ್ತು ಪ್ರೋತ್ಸಾಹ ಕೌನ್ಸಿಲಿನ ಪ್ರಕಾರ, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಗೇರು ಬೆಳೆಯುವ ಪ್ರದೇಶ ಹತ್ತು ಲಕ್ಷ$ ಹೆಕ್ಟೇರುಗಳಿಗೆ ಸೀಮಿತವಾಗಿದೆ. ಅನೇಕ ಆಫ್ರಿಕನ್ ದೇಶಗಳು, ತಾವು ಉತ್ಪಾದಿಸುವ ಗೇರುಬೀಜದ ಅರ್ಧ ಪಾಲನ್ನು ತಮ್ಮಲ್ಲೇ ಸಂಸ್ಕರಿಸಿ, ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ತಯಾರಾಗುತ್ತಿವೆ.
ಈ ಹಿನ್ನೆಲೆಯಲ್ಲಿ, 2025ರ ಹೊತ್ತಿಗೆ ಭಾರತದ ಗೇರುಬೀಜ ಉತ್ಪಾದನೆಯನ್ನು 20 ಲಕ್ಷ ಟನ್ನುಗಳಿಗೆ ಹೆಚ್ಚಿಸಲು ಗೇರು ರಫ್ತು ಕೌನ್ಸಿಲ್ ಯೋಜನೆ ರೂಪಿಸಿದೆ. 2017-18ರಲ್ಲಿ ನಮ್ಮ ದೇಶದ ಗೇರುಬೀಜ ಉತ್ಪಾದನೆ 8 ಲಕ್ಷ ಟನ್. ಇದಕ್ಕೆ ಹೋಲಿಸಿದಾಗ, ಗೇರು ಅಭಿವೃದ್ಧಿ ಯೋಜನೆಯನ್ನು ಜಾರಿ ಮಾಡುವುದು ದೊಡª ಸವಾಲು. ಈಗಿರುವ ಹಳೇ ಗೇರು ಮರಗಳನ್ನು ಕಿತ್ತು ಹಾಕಿ, ಅಧಿಕ ಇಳುವರಿ ನೀಡುವ ತಳಿಗಳ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ; ಇದರಿಂದಾಗಿ, ಗೇರು ಇಳುವರಿ ಈಗಿನ ಹೆಕ್ಟೇರಿಗೆ 700 ಕಿಗ್ರಾ ಮಟ್ಟದಿಂದ,
ಹೆಕ್ಟೇರಿಗೆ 3,000 ಕಿ.ಗ್ರಾಂ ಮಟ್ಟಕ್ಕೆ ಏರಲು ಸಾಧ್ಯ. ಆದರೆ, ಗೇರು ಗಿಡಗಳಿಂದ ಫಸಲು ಸಿಗಬೇಕೆಂದರೆ ಮೂರು ವರುಷ ಕಾಯಬೇಕು! ಇದೀಗ, ಸಂಸ್ಕರಣಾ ಘಟಕಗಳಿಗೆ ಸಾಲ ನೀಡಿರುವ ಬ್ಯಾಂಕುಗಳು 160 ಸಂಸ್ಕರಣಾ ಘಟಕಗಳ ಸಾಲಗಳನ್ನು ಅನುತ್ಪಾದಕ (ಎನ್.ಪಿ.ಎ.) ಸಾಲಗಳೆಂದು ಘೋಷಿಸಲು ತಯಾರಿ ನಡೆಸಿವೆ. ಅಧಿಕ ಇಳುವರಿಯ ಗೇರು ಸಸಿಗಳನ್ನು ನೆಟ್ಟು, ಅವು ಫಸಲು ನೀಡುವವರೆಗೆ ಗೇರುಬೀಜ ಸಂಸ್ಕರಣಾ ಘಟಕಗಳು ಉಳಿದಿದ್ದರೆ ತಾನೇ ಗೇರುಕೃಷಿಯ ದೀರ್ಘಕಾಲಿಕ ಯೋಜನೆಗಳಿಂದ ಸಹಾಯವಾಗಲು ಸಾಧ್ಯ?
* ಅಡ್ಡೂರು ಕೃಷ್ಣ ರಾವ್