ಬೆಂಗಳೂರು: ಕಾಂಗ್ರೆಸ್ ನಾಯಕರು, ಮುಖಂಡರ ವಿಶ್ವಾಸಾರ್ಹತೆಯೇ ಸತ್ತು ಹೋಗಿದೆ. ಹೀಗಿರುವಾಗ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಾರ್ಹತೆ ಹೇಗೆ ಅರ್ಥವಾಗಲು ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನಿಸಿದರು. “ಮೋದಿ 2.0ರ ಒಂದು ವರ್ಷ’ ಅಭಿಯಾನದ ಸಮಾರೋಪದ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಿಂದ ವಿಡಿಯೋ ಸಂವಾದದ ಮೂಲಕ ಸಮಾರೋಪ ಭಾಷಣ ಮಾಡಿದರು.
ಕೋವಿಡ್ 19 ಜತೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಗಡಿ ಸಮಸ್ಯೆಯೂ ಇದೆ. ಕಾಂಗ್ರೆಸ್‌ನ ರಾಹುಲ್‌ಗಾಂಧಿ ನಿತ್ಯ ಹೊಸ ಕಲ್ಪಿತ ವಿಡಿಯೋಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ಬೆಂಗಳೂರಿನಲ್ಲಿ ಎಲ್ಲವೂ ಸರ್ವನಾಶವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಹೇಳಿಕೆ ಕೊಡುತ್ತಾನೆ. ಆ ಪಕ್ಷದ ರಾಜ್ಯ ನಾಯಕರ ವಿಶ್ವಾಸಾರ್ಹತೆಯೇ ರಾಹುಲ್‌ಗಾಂಧಿ ವಿಶ್ವಾಸಾರ್ಹತೆಯಾಗಿದೆ ಎಂದು ವ್ಯಂಗ್ಯವಾಡಿದರು. ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಸ್ಥಾಯಿ ಸಮಿತಿ ಸದಸ್ಯರಾದ ರಾಹುಲ್‌ಗಾಂಧಿಯವರು ಈವರೆಗೆ ನಡೆದ 11 ಸಭೆಗಳಲ್ಲಿ ಒಂದೂ ಸಭೆ ಹಾಜರಾಗಿಲ್ಲ.
ಮೂರು ಬಾರಿ ಗಡಿ ಭಾಗಕ್ಕೆ ಸಮಿತಿ ಭೇಟಿ ನೀಡಿದ್ದು, ಆಗಲೂ ಹೋಗಿಲ್ಲ. ಏಕೆಂದರೆ ಅವರಿಗೆ ಅಲ್ಲಿನ ಚಳಿ ತಡೆಯಲು ಆಗುವುದಿಲ್ಲ. ಅವರಿಗೆ ಬೇಕಾದ ವ್ಯವಸ್ತೆ ಇರುವುದಿಲ್ಲ ಎಂದು ಹೇಳಿದರು. 39 ಕೋಟಿ ಬ್ಯಾಂಕ್ ಖಾತೆಗಳಿಗೆ 69,000 ಕೋಟಿ ರೂ. ಪರಿಹಾರ ಹಣ ವರ್ಗಾವಣೆಯಾಗಿದ್ದು, ಸೋರಿಕೆ, ಭ್ರಷ್ಟಾಚಾರವಿಲ್ಲದಂತೆ ಪ್ರಧಾನಿಯವರು ಕ್ರಮ ಕೈಗೊಂಡಿದ್ದಾರೆ. ಮುಂದೆಯೂ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ವ್ಯವಸ್ಥೆ ರೂಪಿಸುತ್ತಿದ್ದಾರೆ. ಅವರು ಮನಸ್ಸಿನಲ್ಲಿ ಮುಂದಿನ ಆರು ತಿಂಗಳು, ಆರು ವರ್ಷದ ಯೋಜನೆಗಳ ಬಗ್ಗೆ ಚಿಂತಿಸುತ್ತಿರುತ್ತಾರೆ ಎಂದು ಶ್ಲಾಘಿಸಿದರು.
ನೈತಿಕತೆ ಇಲ್ಲ: ಯಲಹಂಕ ಮೇಲುಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಕಾಂಗ್ರೆಸ್‌ನವರು ವಿರೋಧಿಸುವುದು ಅವರ ಬೌದಿಟಛಿಕ, ವೈಚಾರಿಕ, ಸಾಮಾಜಿಕ ದಿವಾಳಿತನವನ್ನು ತೋರಿಸುತ್ತದೆ. ರಾಜ್ಯದ ಜನ ಕ್ಯಾಂಟೀನ್‌ಗೆ ಅನ್ನಪೂರ್ಣ ಎಂಬ ಹೆಸರಿಡಬೇಕು ಎಂದು ಕೋರಿದರೂ ಸಂಬಂಧವೇ ಇಲ್ಲದ ಇಂದಿರಾಗಾಂಧಿ ಹೆಸರಿಟ್ಟರು. ಅಂತಹವರು ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಹೀಗೆ ಪ್ರಶ್ನೆ ಮಾಡುವ ಮೂಲಕ ಇತಿಹಾಸದ ಕಸದ ಬುಟ್ಟಿಗೆ ಸೇರುತ್ತಾರೆ. ಅವರಿಗೆ ಸಾವರ್ಕರ್ ಯಾರು ಎಂದು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಸಂಚಾಲ ಕತ್ವದಲ್ಲಿ ಎಸ್‌ಎಸ್ ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ರಾಜ್ಯದ ಜನತೆ ನಡೆದುಕೊಂಡ ರೀತಿ ವಿಶ್ವಾಸಾರ್ಹಾತೆಗೆ ಮೈಲುಗಲ್ಲು ಎನ್ನಿಸಿದೆ. ಈಗ ಎಲ್ಲ ಸರ್ಕಾರಗಳು ಪ್ರಮುಖ ಪರೀಕ್ಷೆಗಳನ್ನು ನಡೆಸಿಯೇ ತೀರುವ ಯೋಚನೆಯಲ್ಲಿವೆ.
-ಬಿ.ಎಲ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ