ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿಸಿದ್ದು, ವರ್ತೂರು ಕೆರೆ ಸುತ್ತಲ ರಸ್ತೆಗಳಲ್ಲಿ ನೊರೆ ಸಮಸ್ಯೆ ಕಾಣಿಸಿಕೊಂಡು ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.
ವಾರದಿಂದ ವರ್ತೂರು ಕೆರೆಗೆ ನೀರಿನ ಹರಿವು ಹೆಚ್ಚಾಗಿರುವುದರಿಂದ ವರ್ತೂರು ಕೋಡಿ ಭಾಗದಲ್ಲಿ ನೊರೆಯ ಪರ್ವತವೇ ಸೃಷ್ಟಿಯಾಗಿದೆ. ಜೋರಾಗಿ ಬೀಸುವ ಗಾಳಿಗೆ ನೊರೆ ರಸ್ತೆಗೆ ಹಾರಿ ಬರುತ್ತಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಮಳೆಯಿಲ್ಲದಿದ್ದರೂ ಕೊಡೆ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ವಾಸನೆ ಹೆಚ್ಚಿದ್ದು, ಅಪಾಯಕಾರಿ ನೊರೆಯಿಂದಾಗಿ ಸುತ್ತಮುತ್ತಲಿನ ಜನರಲ್ಲಿ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ. ಬೆಳ್ಳಂದೂರು ಕೆರೆ ಸ್ವತ್ಛಗೊಳಿಸುವ ಕಾರ್ಯವನ್ನು ಬಿಡಿಎ ಅಧಿಕಾರಿಗಳು ಒಂದು ತಿಂಗಳಿನಿಂದ ಕೈಗೊಂಡಿದ್ದಾರೆ.
ಆದರೆ ನೊರೆ ಸಮಸ್ಯೆಗೆ ಪರಿಹಾರ ಕಾರ್ಯವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ದಿನೇ ದಿನೆ ನೊರೆ ಸಮಸ್ಯೆ ಹೆಚ್ಚುತ್ತಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಕಾಣಿಸಿಕೊಂಡ ನೊರೆ ಸಮಸ್ಯೆ ಇದೀಗ ಉತ್ತರಹಳ್ಳಿ ಬಳಿಯ ಸುಬ್ರಮಣ್ಯಪುರಕೆರೆಯಲ್ಲಿಯೂ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ನೀರಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬಂದ ನಂತರ ಕೆರೆಯಲ್ಲಿ ನೊರೆ ಸೃಷ್ಟಿಗೆ ಕಾರಣವೇನು ಎಂಬುದು ತಿಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.