ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್ ಸೃಷ್ಟಿಸಿ, ಹೊಸ ಮೊಬೈಲ್ ಅಪ್ಲಿಕೇಷನ್‌ನ ಪ್ರಚಾರ ರಾಯಭಾರಿಯಾಗುವಂತೆ ತೆಲಗು ನಟ ವಿಜಯ ದೇವರಕೊಂಡಗೆ ಅದೇ ಲೆಟರ್‌ಹೆಡ್‌ನಲ್ಲಿ ಪತ್ರ ಬರೆದ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಇನ್ಫೋಸಿಸ್ ಫೌಂಡೇಶನ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸೇನಾಧಿಕಾರಿ ಎಂ.ರಮೇಶ್ ಎಂಬುವವರು ಎಲ್.ಎಸ್.ಕೃಷ್ಣ ಎಂಬಾತನ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ದೂರು ಆಧರಿಸಿ ಕೃಷ್ಣ ಎಂಬಾತನ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿಸಿ ಉದ್ದೇಶ ಪೂರ್ವಕ ವಂಚನೆ ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿ ಕರ್ನಾಟಕ ಮೂಲದವನು ಎಂಬುದು ತಿಳಿದು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಏನಿದು ವಂಚನೆ?: ಡಾ.ಸುಧಾ ಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್‌ಹೆಡ್ ಸೃಷ್ಟಿಸಿದ್ದಲ್ಲದೆ, ಅವರ ಸಹಿಯನ್ನು ನಕಲು ಮಾಡಿರುವ ಆರೋಪಿ ಕೃಷ್ಣ, ಅದರಲ್ಲಿ ಪತ್ರವೊಂದನ್ನು ಬರೆದು ತೆಲುಗು ನಟ ವಿಜಯ್ ದೇವರಕೊಂಡ ಅವರ ಹೈದರಾಬಾದ್ ವಿಳಾಸಕ್ಕೆ ಕಳುಹಿಸಿದ್ದಾನೆ.
ಸುಧಾಮೂರ್ತಿ ಅವರ ಪ್ರಾಯೋಜಕತ್ವದಲ್ಲಿ “ಆಫರ್ಸ್ ನಿಯರ್ ಬೈ’ ಎಂಬ ಮೊಬೈಲ್ ಅಪ್ಲಿಕೇಷನ್ ನಿರ್ಮಿಸಿರುವುದಾಗಿ ನಕಲಿ ಲೆಟರ್‌ಹೆಡ್‌ನಲ್ಲಿ ಸುಳ್ಳು ವಿವರವನ್ನು ಆರೋಪಿ ನೀಡಿದ್ದ. ಜತೆಗೆ, ರಾಯಭಾರಿ ಆಗುವಂತೆ ನಟನನ್ನು ಕೋರಿ ಸ್ಪೀಡ್ ಪೋಸ್ಟ್ ಮಾಡಿದ್ದ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ನಟ ವಿಜಯ ದೇವರಕೊಂಡ ಅವರ ಕಚೇರಿ ಸಿಬ್ಬಂದಿ ಪೋಸ್ಟ್ ಸ್ವೀಕರಿಸಿಲ್ಲ.
ಈ ಹಿನ್ನೆಲೆಯಲ್ಲಿ ಪತ್ರ ನೇರವಾಗಿ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ವಾಪಸ್ ಬಂದಿದೆ. ಲಕೋಟೆಯಲ್ಲಿದ್ದ ನಕಲಿ ಲೆಟರ್ ಹೆಡ್, ಅದರಲ್ಲದ್ದಿ ಮಾಹಿತಿ ನೋಡಿ ಅಚ್ಚರಿಗೊಂಡ ಕಚೇರಿ ಸಿಬ್ಬಂದಿ ಕೂಡಲೇ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.