Advertisement

ಅನಾಥ ಮಕ್ಕಳ ರಕ್ಷಣೆಗೆ ರೈಲ್ವೆ ನಿಲ್ದಾಣದಲ್ಲಿ ಮಮತೆ ತೊಟ್ಟಿಲು

12:19 PM Jul 24, 2018 | |

ಕಲಬುರಗಿ: ಹೆತ್ತವರಿಗೆ ಬೇಡವಾಗಿ ಮುಳ್ಳು ಕಂಟಿಗಳಲ್ಲಿ, ಸಾರ್ವಜನಿಕ ಸ್ಥಳದಲ್ಲಿ, ಗುಡಿ, ಗುಂಡಾರಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಎಸೆಯಲಾಗುವ ಅನಾಥ ಮಕ್ಕಳ ರಕ್ಷಣೆಗಾಗಿ ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1 ರಲ್ಲಿ ಮಮತೆ ತೊಟ್ಟಿಲು ಎನ್ನುವ ಸೇವಾ ಸೌಲಭ್ಯಕ್ಕೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಚಾಲನೆ ನೀಡಿದರು.

Advertisement

ಜಿಲ್ಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಮುಳ್ಳು ಕಂಟಿ ಸೇರಿದಂತೆ ವಿವಿಧೆಡೆ ಬೇಡವಾದ ಮಕ್ಕಳನ್ನು ಎಸೆಯುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿವೆ. ಅದರಲ್ಲೂ ಆಳಂದ, ವಾಡಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಅನಾಥ ಮಕ್ಕಳನ್ನು ರಕ್ಷಿಸಿ, ಬೆಳೆಸುವ ಉದ್ದೇಶದಿಂದ ಮಮತೆಯ ತೊಟ್ಟಿಲು ಸೇವಾ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದರು.

ಇಂತಹ ಸೇವೆಯನ್ನು ಜಿಲ್ಲಾದ್ಯಂತ ವಿಸ್ತರಿಸಬೇಕು. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಮಮತೆಯ ತೊಟ್ಟಿಲು ತೂಗು ಹಾಕಲಾಗುತ್ತದೆ. ಇದರಿಂದ ಶಿಶುಗಳ ರಕ್ಷಣೆ ಹಾಗೂ ಪೋಷಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. 

ಮನೆಯಿಂದ ವಿವಿಧ ಕಾರಣಗಳಿಂದ ಓಡಿ ಬಂದ ಮಕ್ಕಳ ರಕ್ಷಣೆಗಾಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಚೈಲ್ಡಲೈನ್‌ ಹೆಲ್ಪ್ ಡೆಸ್ಕ್ಆ ರಂಭಿಸಲಾಗಿದೆ. ಅನಾಥ ಮಕ್ಕಳು ಕಂಡುಬಂದರೆ 1098 ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಹೈ.ಕ. ಭಾಗದಲ್ಲಿ ತಾಯಿ, ಮಕ್ಕಳ ಮರಣದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದಕ್ಕೆ ತಿಳಿವಳಿಕೆ ಕೊರತೆ ಹಾಗೂ ಅನಕ್ಷರತೆ ಕಾರಣವಾಗಿದೆ ಎಂದರು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಅದರಲ್ಲೂ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳು ಹೆಚ್ಚಾಗುತ್ತಿದ್ದು, ಸುಮಾರು 130 ಕ್ಕೂ ಅಧಿಕ ಬಾಲ್ಯವಿವಾಹ ತಡೆದು ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ.ರಾಮನ್‌ ಮಾತನಾಡಿ, ಅನಾಥ ಮಕ್ಕಳು ಯಾರಿಗಾದರೂ ಸಿಕ್ಕರೇ ಅವರು ಅಂತಹ ಮಕ್ಕಳನ್ನು ಮಮತೆಯ ತೊಟ್ಟಿಲಲ್ಲಿ ತಂದು ಹಾಕಿ. ಈ ಕುರಿತು ಯಾರೂ ಪ್ರಶ್ನಿಸಲ್ಲ, ದೂರು ದಾಖಲಿಸಲ್ಲ. ಮಕ್ಕಳ ರಕ್ಷಣೆ ಉದ್ದೇಶದಿಂದಲೇ ಸೇವೆ ಆರಂಭಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ಮಾತನಾಡಿ, ಚರಂಡಿ ಸೇರಿದಂತೆ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಬೇಡವಾದ ಮಗು ಎಸೆಯುವುದು ಕಾನೂನು ಪ್ರಕಾರ ಅಪರಾಧ. ಇಂತಹ ಕ್ರೂರ ಕೃತ್ಯ ಮಾಡುವ ಬದಲು ಬೇಡವಾದ ಮಕ್ಕಳನ್ನು ಮಮತೆಯ ತೊಟ್ಟಿಲಿಗೆ ಹಾಕಿ ಅವುಗಳನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.

Advertisement

ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್‌ ಮಾತನಾಡಿ, ಸಂಸ್ಥೆ ಕಳೆದ 16 ವರ್ಷದಿಂದ ಸೇವೆ ಸಲ್ಲಿಸುತ್ತಿದೆ. ಈ ವರೆಗೆ 11 ಸಾವಿರ ಮಕ್ಕಳನ್ನು ಬಾಲ ಮಂದಿರಕ್ಕೆ ಕಳಿಸುವ ಮೂಲಕ ರಕ್ಷಿಸಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಚೈಲ್ಡ್‌ಲೈನ್‌, ಇಂಡಿಯಾ ಫೌಂಡೇಶನ್‌, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್‌ಲೈನ್‌ ಸಂಯುಕ್ತಾಶ್ರಯದಲ್ಲಿ ಮಮತೆಯ ತೊಟ್ಟಿಲು ಸೇವಾ ಸೌಲಭ್ಯ ಆರಂಭಿಸಲಾಗಿದೆ.

ಮಾರ್ಗದರ್ಶಿ ಸಂಸ್ಥೆ ಅಧ್ಯಕ್ಷ ಜಾರ್ಜ್‌ ಕೊಲ್ಯಾಶ್ಯಾನಿ, ವಿಭಾಗೀಯ ಸಹಾಯಕ ಅಭಿಯಂತರ ಅವದೇಶ್‌ ಮೀನಾ, ರೈಲ್ವೆ ಇಲಾಖೆ ಅಧಿಕಾರಿ ಪಿಯುಸ್‌ ಕುಂಬಾರ, ಬಾಲ ನ್ಯಾಯ ಮಂಡಳಿ ಸದಸ್ಯೆ ಗೀತಾ ಸಜ್ಜನ್‌, ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಶಿಲ್ಪಾ ಹಿರೇಮಠ, ಸರ್ಕಾರಿ ವಿಶೇಷ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ದೀಪಾಕ್ಷಿ ಜಾನಕಿ, ಸರ್ಕಾರಿ ವೀಕ್ಷಣಾಲಯದ ಅಧಿಕಾರಿ ಬಾಲಕೃಷ್ಣ ಸಾಲವಾಡಿ, ರೈಲ್ವೆ ನಿಲ್ದಾಣದ ದಕ್ಷಿಣ ಮಧ್ಯ ವ್ಯವಸ್ಥಾಪಕ ಜಿ.ಜಿ ಮೋನ್‌, ಆರ್‌.ವಿ. ಜಗತಾಪ, ಶಾಮರಾಜ ಸಜ್ಜನ, ಫಾದರ್‌ ಸಜ್ಜಿ ಜಾರ್ಜ್‌, ಮಸೂದ ಸಿದ್ದಿಕಿ ಸೇಠ, ಸಂತೋಷ ಕುಲಕರ್ಣಿ, ಲಿಯಾಕತ್‌ ಅಲಿ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next