ಕೋವಿಡ್ ಹಾಗೂ ಹಾಗೂ ಲಾಕ್ ಡೌನ್ ಎರಡು ಮುಂದುವರೆಯುತ್ತಲೇ ಇದೆ. ಇಷ್ಟು ಸುದೀರ್ಘ ರಜೆ ಎಂದು ಸಿಕ್ಕಿರಲಿಲ್ಲ ಹಾಗೇಯೇ ರಜೆ ಸಿಕ್ಕರೂ ಏನು ಮಾಡಬೇಕೇಂಬುದನ್ನು ಎಂದೂ ಯೋಚಿಸಿರಲಿಲ್ಲ. ಕಾಲೇಜಿಗೆ ಹೋಗುವಾಗ ರಜೆ ಬೇಕು ಅಂದರೂ ಸಿಗುತ್ತಿರಲಿಲ್ಲ, ಆದರೆ ಈಗ ಸಿಕ್ಕಿರುವ ರಜೆಯಲ್ಲಿ ಕಾಲ ಕಳೆಯುವುದು, ಸಮಯ ದೂಡುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ. ಈ ಲಾಕ್ ಡೌನ್ ಸಮಯ ಕಳೆಯಲು ನನಗೆ ಜೊತೆಯಾಗಿದ್ದು ಸಾಹಿತ್ಯ, ಸಿನೆಮಾ, ಹಾಗೂ ಅಡುಗೆ.
ಪುಸ್ತಕ ಓದಲು ಸ್ವಾತಂತ್ರ್ಯ, ನನ್ನದೇ ಸಮಯ ಬಯಸುವವಳು ನಾನು. ಈ ರಜೆ ಇದಕ್ಕೆ ಪೂರಕವಾಯಿತು. ನನ್ನನ್ನ ನಾನು ಹೊಸ ಓದಿಗೆ, ಹೊಸ ಕತೆಗಳಿಗೆ, ಬರಹಗಳಿಗೆ, ಸಾಹಿತ್ಯಕ್ಕೆ ಪರಿಚಯಿಸಿಕೊಂಡಿದ್ದೇನೆ. ಓದುತ್ತಾ ಓದುತ್ತಾ ಅಲ್ಲಿನ ಪಾತ್ರಗಳ ಭಾವನೆಯನ್ನು ಅನುಭವಿಸಿದ್ದೇನೆ. ಸಾಹಿತ್ಯದ ನಂತರ ಸಮಯ ಕಳೆಯಲು ಸಹಾಯವಾಗಿದ್ದು ಸಿನೆಮಾ. ಭಾಷೆಯ ಮಿತಿಯಿಲ್ಲದೇ ನೋಡಿದ್ದೇನೆ. ಕೆಲವು ಸಿನೆಮಾಗಳ ಸಂಭಾಷಣೆಗಳು ಅರ್ಥವಾಗದಿದ್ದರೂ ನಟನೆಯಿಂದ ತಿಳಿದುಕೊಂಡಿದ್ದು ಇದೆ.
ಆಸ್ಕರ್ ವಿಜೇತ ಚಿತ್ರವಾದ ಪ್ಯಾರಾಸೈಟ್, ಅನಿಮೇಷನ್ ಚಿತ್ರ ಟಾಯ್ ಸ್ಟೋರಿ 4, ದಿಯಾ, ವಿಕೃತಿ ಹೀಗೆ ಮತ್ತಿಷ್ಟು. ಕೆಲವು ಚಿತ್ರಗಳು ಭಾರಿ ಖುಷಿ ನೀಡಿ ಮತ್ತೊಮ್ಮೆ ನೋಡ ಬೇಕೆಂದೆನಿಸಿದ್ದು ಇದೆ. ಸಾಹಿತ್ಯ, ಸಿನೆಮಾ ನಂತರ ನನ್ನನ್ನ ನಾನು ತೊಡಗಿಸಿಕೊಂಡಿರುವುದು ಅಡುಗೆಯಲ್ಲಿ. ಮೊದಲಿನಿಂದಲೂ ಅಡುಗೆ ಮಾಡುವುದರಲ್ಲಿ, ಹೊಸ ಹೊಸ ರುಚಿಯನ್ನು ಕಲಿಯುವುದರಲ್ಲಿ ಆಸಕ್ತಿ ಬೆಳಸಿಕೊಂಡವಳು. ಓದಿಗಾಗಿ ಹಾಸ್ಟೆಲ್ ನಲ್ಲಿ ಇರುವ ನನಗೆ ಈಗ ಮನೆಗೆ ಬಂದು ಮತ್ತೆ ನನ್ನನ್ನು ಈ ರುಚಿಯ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಒಟ್ಟಾರೆ ಈ ಲಾಕ್ ಡೌನ್ ರಜೆ ಬೇಸರ ಮೂಡಿಸುತ್ತಲೇ ನಮ್ಮ ಹವ್ಯಾಸಗಳಿಗೆ ಮರಳುವಂತೆ ಮಾಡಿದೆ. ಓದುವುದು, ನೋಡುವುದು ಹಾಗೂ ಪ್ರಯೋಗಕ್ಕೆ ಒಡ್ಡುವ ಮೂಲಕ ಹೊಸ ಕಲಿಕೆಯನ್ನು ನೀಡಿದೆ.
ವಿಧಾತ್ರಿ ಭಟ್, ಉಪ್ಪುಂದ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು ಉಜಿರೆ