Advertisement

ಸರ್ಕಾರಕ್ಕೆ ಕೋರ್ಟ್‌ ಛಾಟಿ ಏಟು

06:10 AM Aug 10, 2018 | |

ಬೆಂಗಳೂರು: ಕೆಎಂಸಿ ಕಾಯ್ದೆ ಜಾರಿಗೆ ಬಂದು ನಾಲ್ಕು ದಶಕ ಕಳೆದರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ರೂಪಿಸದ ರಾಜ್ಯ ಸರ್ಕಾರದ ಧೋರಣೆಗೆ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿತು.

Advertisement

ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿ ಮತ್ತು ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆ ವೇಳೆ, ನ್ಯಾಯಪೀಠ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿತು.

ಕರ್ನಾಟಕ ಪೌರ ನಿಗಮಗಳ ಕಾಯ್ದೆ (ಕೆಎಂಸಿ ಕಾಯ್ದೆ) ಜಾರಿಗೆ ಬಂದು 40 ವರ್ಷವಾದರೂ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆಗೆ ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರ ವಿಫ‌ಲವಾಗಿದೆ. ಪ್ರತಿ ಬಾರಿಯೂ ಚುನಾವಣೆ ವೇಳೆ ಚಾಲ್ತಿಯಲ್ಲಿರುವ ಜನಗಣತಿ ವರದಿ ಆಧರಿಸಿ ತಾತ್ಕಾಲಿಕ ಮತ್ತು ಏಕಪಕ್ಷೀಯ ಮಾರ್ಗಸೂಚಿಗಳನ್ನು ರಚಿಸಿಕೊಂಡು ಮೀಸಲಾತಿ ನಿಗದಿಪಡಿಸುವ ಮತ್ತು ಕ್ಷೇತ್ರ ಮರುವಿಂಗಡಣೆ ಮಾಡುವ ಪರಿಪಾಠ ಬೆಳಸಿಕೊಂಡು ಬರಲಾಗಿದೆ. ಇದೊಂದು ರೀತಿಯಲ್ಲಿ ಕಾನೂನು ಮತ್ತು ಸಂವಿಧಾನ ಬಾಹಿರ ಕ್ರಮ ಎಂದು ನ್ಯಾಯಪೀಠ ತೀಕ್ಷಣವಾಗಿ ಹೇಳಿತು.

ಮೀಸಲಾತಿ ನಿಗದಿಯಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಣೆಯಾದ ಬಳಿಕವಷ್ಟೇ ಸಾರ್ವಜನಿಕರು, ಜನಪ್ರತಿನಿಧಿಗಳು ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಾರೆ. ಇದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಅನಗತ್ಯ ಹಸ್ತಕ್ಷೇಪ ಮತ್ತು ಅಡಚಣೆ ಆಗುತ್ತದೆ. ಅದರ ಬದಲಿಗೆ ಚುನಾವಣೆಗೆ ಮೊದಲೇ ಅರ್ಜಿಗಳನ್ನು ಸಲ್ಲಿಸಬಹುದಲ್ಲವೇ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ರಾಜ್ಯ ಸರ್ಕಾರವು ಇನ್ನಾದರೂ ಕೆಎಂಸಿ ಕಾಯ್ದೆ ಅನುಗುಣವಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ನೀತಿ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ತೀರ್ಪಿನಲ್ಲಿ ತಿಳಿಸಿತು.

ಅರ್ಜಿಗಳ ವಜಾ: ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆಗಳ ವಾರ್ಡ್‌ ಮರುವಿಂಗಡಣೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯಪೀಠ ಗುರುವಾರ ಅರ್ಜಿಗಳನ್ನು ವಜಾಗೊಳಿಸಿ, ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಹಸಿರು ನಿಶಾನೆ ತೋರಿಸಿತು.

Advertisement

ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಂತದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಪೀಠ ಅರ್ಜಿಗಳನ್ನು ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next