Advertisement

ಕೋರ್ಟ್‌ ನಿರಪರಾಧಿ ಎಂದರೂ ಬಿಸಿಸಿಐ ತಕರಾರೇಕೆ?

03:45 AM Feb 08, 2017 | |

ಕೇರಳ ಕ್ರಿಕೆಟಿಗ ಎಸ್‌. ಶ್ರೀಶಾಂತ್‌ ದೂಷಮುಕ್ತರೆಂದು ನ್ಯಾಯಾಲಯ ಘೋಷಿಸಿ ಒಂದು ವರ್ಷವಾಗಿದೆ. ಆದರೆ ಬಿಸಿಸಿಐ ಮಾತ್ರ ಶ್ರೀಶಾಂತ್‌ ಮೇಲಿನ ನಿಷೇಧವನ್ನು ಇನ್ನೂ ವಾಪಸ್‌ ಪಡೆದುಕೊಂಡಿಲ್ಲ. ಇದು ಸ್ಕಾಟ್ಲೆಂಡ್‌ ಲೀಗ್‌ನಲ್ಲಿ ಆಡಲು ಅವಕಾಶ ಪಡೆದಿರುವ ಶ್ರೀಶಾಂತ್‌ಗೆ ಭಾರೀ ಹಿನ್ನಡೆ ಯುಂಟುಮಾಡಿದೆಯಂತೆ. ಈ ಬಗ್ಗೆ ಸ್ವತಃ ಶ್ರೀಶಾಂತ್‌ ಕೊಚ್ಚಿಯಿಂದ “ಉದಯವಾಣಿ’ಗೆ ನೀಡಿದ ವಿಶೇಷ ದೂರವಾಣಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಮ್ಮ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. 

Advertisement

“ನಾನು ನಿರಪರಾಧಿ ಎಂದು ಈಗಾಗಲೇ ನ್ಯಾಯಾಲಯ ಘೋಷಿಸಿದ್ದರೂ ಬಿಸಿಸಿಐ ನನ್ನನ್ನು ಇನ್ನೂ ಅಪರಾಧಿಯಂತೆ ಕಾಣುತ್ತಿದೆ. ಇದು ಯಾಕೆ…’ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ನಿಷೇಧವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಬಿಸಿಸಿಐಗೆ ಶ್ರೀಶಾಂತ್‌ ಒತ್ತಾಯಿಸಿದ್ದಾರೆ. ಹೊಸದಾಗಿ ನೇಮಕವಾಗಿರುವ ಆಡಳಿತಾಧಿಕಾರಿಗಳಿಗೆ ಸೋಮವಾರ ಮತ್ತೆ ಮನವಿ ಪತ್ರ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಸಂದರ್ಶನದಲ್ಲಿ ಶ್ರೀಶಾಂತ್‌ ಹಲವು ವಿಷಯಗಳ ಬಗ್ಗೆ ಮಾತ ನಾಡಿದರು. ತನ್ನನ್ನು ಟ್ವೀಟರ್‌ನಲ್ಲಿ ಟೀಕಿಸಿದ್ದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ವಿರುದ್ಧವೂ ಹರಿಹಾಯ್ದರು.

ಶ್ರೀಶಾಂತ್‌, ನೀವು ಸ್ಕಾಟ್ಲೆಂಡ್‌ ಲೀಗ್‌ನಲ್ಲಿ ಆಡುವ ಮೂಲಕ ಮತ್ತೆ ಕ್ರಿಕೆಟ್‌ಗೆ ಮರಳುತ್ತಿದ್ದೀರಂತೆ? ಇದು ನಿಜವೆ?
-ಸ್ಕಾಟ್ಲೆಂಡ್‌ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಳ್ಳಲು ನನಗೆ ಅಲ್ಲಿನ ಕ್ರಿಕೆಟ್‌ ಮಂಡಳಿಯಿಂದ ಅವಕಾಶ ಸಿಕ್ಕಿದೆ. ಇದು ನಿಜ. ಆದರೆ ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಬೇಕು. ಇದಕ್ಕಾಗಿ ಕಾಯುತ್ತಿದ್ದೇನೆ.

ಸ್ಕಾಟ್ಲೆಂಡ್‌ ಕ್ರಿಕೆಟ್‌ ಲೀಗ್‌ನಲ್ಲಿ ಆಡಲು ನಿಮಗೆ ಬಿಸಿಸಿಐನಿಂದ ನಿರಾಕ್ಷೇಪಣಾ ಪತ್ರ ಯಾಕೆ ಬೇಕು? ಸ್ಕಾಟ್ಲೆಂಡ್‌ ಕ್ರಿಕೆಟ್‌ ಮಂಡಳಿ ಎನ್‌ಒಸಿ ಬಯಸಿದೆಯೇ?
-ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ನಿಯಮ ಪ್ರಕಾರ ಬಿಸಿಸಿಐನಿಂದ ನಾನು ನಿರಾಕ್ಷೇಪಣಾ ಪತ್ರ ಪಡೆದೇ ಆಡಬೇಕು. ಸ್ಕಾಟ್ಲೆಂಡ್‌ ಕ್ರಿಕೆಟ್‌ ಮಂಡಳಿ ಈ ಬಗ್ಗೆ ನನ್ನನ್ನು ಏನೂ ಕೇಳಿಲ್ಲ.

ಒಂದು ವೇಳೆ ಬಿಸಿಸಿಐ ನಿಮಗೆ ನಿರಾಕ್ಷೇಪಣಾ ಪತ್ರ ನೀಡದಿದ್ದರೆ ಏನು ಮಾಡುತ್ತೀರಿ?
-ಅನುರಾಗ್‌ ಠಾಕೂರ್‌ ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ನನ್ನ ಮೇಲಿನ ನಿಷೇಧ ತೆರವುಗೊಳಿಸಿ ಎಂದು ಮನವಿ ಮಾಡಿದ್ದೆ. ಆದರೆ ಅವರ್ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ. ಈಗ ಬಿಸಿಸಿಐಗೆ ವಿನೋದ್‌ ರಾಯ್‌ ನೇತೃತ್ವದ ಸಮಿತಿಗೆ ಮನವಿ ಮಾಡಿಕೊಂಡು ಪತ್ರ ಬಂದಿದ್ದೇನೆ. ನನ್ನ ಮೇಲಿನ ನಿಷೇಧವನ್ನು ತೆರವುಗೊಳಿಸಿವ ವಿಶ್ವಾಸವಿದೆ. ಒಂದು ವೇಳೆ ಸಿಗದಿದ್ದರೆ ಮುಂದಿನ ದಾರಿ ಹುಡುಕುತ್ತೇನೆ.

Advertisement

ನೀವೊಬ್ಬ ಶ್ರೇಷ್ಠ ಬೌಲರ್‌. ಸ್ಪಾಟ್‌ ಫಿಕ್ಸಿಂಗ್‌ ಆರೋಪದ ಬಳಿಕ ಕ್ರಿಕೆಟ್‌ ಆಡುವ ಅವಕಾಶ ಕೈತಪ್ಪಿತು, ಬಳಿಕ ಸಿನಿಮಾಕ್ಕೆ ರಂಗದಲ್ಲಿ ಕಾಣಿಸಿಕೊಂಡಿರಿ. ರಾಜಕೀಯಕ್ಕೂ ಇಳಿದಿರಿ. ಇಷ್ಟೆಲ್ಲ ಆದ ಮೇಲೆ ಹಿಂದಿನ ರೀತಿಯಲ್ಲಿ ಮತ್ತೆ ಪ್ರದರ್ಶನ ನೀಡುವ ಭರವಸೆ ನಿಮಗಿದೆಯೇ
-ಖಂಡಿತ ಇದೆ. ವೃತ್ತಿಯಿಂದ ನಾನೊಬ್ಬ ಕ್ರಿಕೆಟರ್‌. ಹೀಗಾಗಿ ಕ್ರಿಕೆಟನ್ನು ಹೊಸದಾಗಿ ಕಲಿಯುವ ಆವಶ್ಯಕತೆ ಬರುವುದಿಲ್ಲ. ಫಿಟ್‌ನೆಸ್‌ ಕಾಯ್ದುಕೊಂಡಿದ್ದೇನೆ. ಇದಕ್ಕಿಂತ ಇನೇನು ಬೇಕು? ಅವಕಾಶ ನೀಡಿದರೆ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬಹುದು. ಇದನ್ನು ಹೊರತುಪಡಿಸಿ ಮಾತನಾಡುವುದಾದರೆ ಸ್ಪಾಟ್‌ ಫಿಕ್ಸಿಂಗ್‌ ಆರೋಪದಲ್ಲಿ ನನ್ನ ಹೆಸರನ್ನು ಅನಾವಶ್ಯಕವಾಗಿ ಬಳಸಿಕೊಳ್ಳಲಾಯಿತು. ಇದರಿಂದ ನಾನು ಸಾಕಷ್ಟು ನೊಂದಿದ್ದೆ. ಈ ನೋವು ನನ್ನನ್ನು ಕಾಡಬಾರದು  ಎನ್ನುವ ಕಾರಣಕ್ಕೆ ಸಿನಿಮಾ, ರಾಜಕೀಯಕ್ಕೆ ಪ್ರವೇಶ ಮಾಡಿದೆ.

ಸ್ಪಾಟ್‌ ಫಿಕ್ಸಿಂಗ್‌ ಆರೋಪ ನಿಮ್ಮ ಕ್ರಿಕೆಟ್‌ ಬದುಕನ್ನೇ ನುಂಗಿತೇ?
-ನಿರಪರಾಧಿಯಾಗಿರುವ ನನ್ನನ್ನು ಅಪರಾಧಿಯಂತೆ ಬಿಂಬಿಸಲಾಯಿತು. ಸತ್ಯಕ್ಕೆ ಯಾವಾಗಲೂ ಜಯವಿದೆ. ನಾನು ನಂಬಿದ ಗುರುವಾಯುರಪ್ಪ, ಕೇರಳ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆಯಿಂದ ಆರೋಪ ಮುಕ್ತನಾಗಿ ಹೊರಬಂದೆ. ಆದರೆ ಬಿಸಿಸಿಐ ಮಾತ್ರ ಇನ್ನೂ ನನ್ನನ್ನು ಅಪರಾಧಿಯಂತೆ ಕಾಣುತ್ತಿದೆ. ತಪ್ಪು ಮಾಡದಿರುವ ನನಗೆ ಯಾಕೆ ಇಂಥ ಶಿಕ್ಷೆ?

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next