Advertisement

ಸ್ವಾತಂತ್ರ್ಯ ಹೋರಾಟಗಾರರ ದೇಶಸೇವೆ ಅನನ್ಯ

04:55 PM Sep 17, 2018 | Team Udayavani |

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರು ಸೌಲಭ್ಯಕ್ಕಾಗಿ ಸರ್ಕಾರವನ್ನು ಹುಡುಕಿಕೊಂಡು ಹೋಗಬಾರದು; ಸರ್ಕಾರವೇ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಬಂದು ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ವಿಧಾನ ಪರಿಷತ್‌ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.

Advertisement

ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ ಹಾಗೂ ಬ್ಯಾಡಗಿಯ ಲಿಂ| ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ ಪ್ರತಿಷ್ಠಾನ ಆಶ್ರಯದಲ್ಲಿ ರವಿವಾರ ನಗರದ ಮೈಲಾರ ಮಹದೇವಪ್ಪನವರ ಸಭಾವನದಲ್ಲಿ ಏರ್ಪಡಿಸಿದ್ದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಬೃಹತ್‌ ಆಂದೋಲನ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ  ಹೋರಾಟಗಾರರ ಸೇವೆ ಮಾಡಲು ತಾವು ಸಿದ್ಧರಿದ್ದು ಅವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ಮಹಾತ್ಮಾ ಗಾಂಧೀಜಿಯ ಕರೆಯ ಮೇರೆಗೆ ದೇಶದ ಸ್ವಾತಂತ್ರ್ಯ  ಹೋರಾಟದಲ್ಲಿ ಅನೇಕ ಮಹಾನ್‌ ಹೋರಾಟಗಾರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಇವರ ಹೋರಾಟ, ದೇಶ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟಗಾರರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಹೋರಾಟ, ತ್ಯಾಗದ ಮನೋಭಾವನೆ ನಾವು ಮರೆತಿದ್ದು, ಅವರನ್ನು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಲಿಂ| ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ ಪ್ರತಿಷ್ಠಾನದ ಮುರಿಗೆಪ್ಪ ಶೆಟ್ಟರ್‌ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಸರ್ಕಾರದಿಂದ ಸವಲತ್ತುಗಳು ದೊರಕಬೇಕು. ಅಲ್ಲದೇ ಅವರ ಪರಿವಾರವ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಲಿಂ| ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ ಪ್ರತಿಷ್ಠಾನದ ಪ್ರಧಾನಕಾರ್ಯದರ್ಶಿ ಡಾ| ಜಗದೀಶ ಮಹರಾಜಪೇಟ, ನವದೆಹಲಿಯ ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ ಅಧ್ಯಕ್ಷ ಎನ್‌.ಆರ್‌. ಮಠದ, ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾ ಧಿಕಾರಿಗಳ ಸಂಘದ ಅಧ್ಯಕ್ಷ ಪರಮಣ್ಣ ಹರಕಂಗಿ, ಸ್ವಾತಂತ್ರ್ಯ ಹೋರಾಟಗಾರರಾದ ಮಳ್ಳಪ್ಪ ಕೊಪ್ಪದ, ವಿ.ಎಸ್‌. ಹಳ್ಳಿಕೇರಿ, ಎಚ್‌.ಮರುಳಸಿದ್ದಪ್ಪ, ಭರವಣ್ಣ ತಾವರಗಿ, ರವಿ ಹಾವೇರಿ, ಮಾಲತೇಶ ಅಳ್ಳಿಮಟ್ಟಿ, ಪ್ರಕಾಶ ಮನ್ನಂಗಿ, ವಿಶಾಲ ಯರೇಶಿಮಿ, ಚಿಕ್ಕಮ್ಮ ಆಡೂರ ಸೇರಿದಂತೆ ಇತರರು ಇದ್ದರು. ಜೆ.ಎಚ್‌. ಛತ್ರದ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next