ಅಫಜಲಪುರ: ಸ್ವಾತಂತ್ರ್ಯಾ ಬಂದಾಗಿನಿಂದ ಇಲ್ಲಿಯ ವರೆಗೆ ದೇಶ ಏನೆಲ್ಲ ಸಾಧನೆಯಾಗಿದೆಯೋ ಅದರಲ್ಲಿ ಸಿಂಹ ಪಾಲು ಕಾಂಗ್ರೆಸ್ ಪಕ್ಷದ್ದಾಗಿದೆ. ಕಾಂಗ್ರೆಸ್ ಪಕ್ಷದಿಂದಲೇ ದೇಶದ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೊಡ ಹೇಳಿದರು.
ಪಟ್ಟಣದ ಮಹಾಂತೇಶ್ವರ ಕಾಲೇಜು ಆವರಣದಲ್ಲಿ 2019ರ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಸಿದ್ಧತಾ ತರಬೇತಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯಾ ಬಂದಾಗ ದೇಶದಲ್ಲಿ ಒಂದು ಸೂಜಿಯೂ ತಯಾರಾಗುತ್ತಿರಲಿಲ್ಲ. ಅಲ್ಲದೇ ನುರಾರು ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿ ಮುನ್ನಡೆಸುವುದೇ ದೊಡ್ಡ ಸವಾಲಾಗಿತ್ತು. ಅಂತದ್ದರಲ್ಲಿ ನೂರಾರು ಕೈಗಾರಿಕೆಗಳನ್ನು ಸ್ಥಾಪಿಸಿ, ದೇಶದ ಗಡಿ ಭದ್ರಗೊಳಿಸಿದ್ದು ಕಾಂಗ್ರೆಸ್ ಎಂದು ಹೇಳಿದರು.
ವಿಜ್ಞಾನ, ತಂತ್ರಜ್ಞಾನ, ಹೈನೋದ್ಯಮ, ಆಹಾರ ಭದ್ರತೆ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಿಂದ ಹಿಡಿದು ಎಲ್ಲವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಪಕ್ಷದ ಯೋಜನೆಗಳ ಲಾಭ ಪಡೆದುಕೊಂಡವರೇ ಈಗ ಕಾಂಗ್ರೆಸ್‌ನ್ನು ತೆಗಳುತ್ತಾರೆ. ಇದು ನಿಜಕ್ಕೂ ವಿಚಿತ್ರವಾಗಿದೆ ಎಂದರು.
ಶಾಸಕ ಎಂ.ವೈ. ಪಾಟೀಲ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಮಾಸ್ಟರ್ ಟ್ರೇನರ್ ಆಗಿರುವ ಮಾಜಿ ಜಿಪಂ ಅಧ್ಯಕ್ಷ ರಮೇಶ ಮರಗೋಳ, ವಿಜಯಕುಮಾರ ಪಾಟೀಲ, ಜಿಪಂ ಮಾಜಿ ಸದಸ್ಯ ಸಂಜೀವಕುಮಾರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾದ ಕಾಂಗ್ರೆಸ್ ಪಕ್ಷದ ಭೂತ ಮಟ್ಟದ ಅಧ್ಯಕ್ಷ ಹಾಗೂ ಸದಸ್ಯರಿಗೆ, ಕಾರ್ಯಕರ್ತರಿಗೆ ಪಕ್ಷದ ಯೋಜನೆಗಳು, ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಜವಾಬ್ದಾರಿ ಕುರಿತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿಂ ಪೀರ್ ವಾಲೀಕಾರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮಕುಲ್ ಪಟೇಲ್, ಮಾಜಿ ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಸಿದ್ಧಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಶರಣು ಕುಂಬಾರ, ಮತೀನ್ ಪಟೇಲ್, ಬಿರಣ್ಣ ಕಲ್ಲೂರ, ಮಹಾಂತೇಶ ಪಾಟೀಲ ಇದ್ದರು.
ಹುಚ್ಚಾಟವಾಡೋ ಪಕ್ಷ ಸೋಲಿಸಿ
ಐದು ವರ್ಷಗಳ ಕಾಲ ಸುಳ್ಳುಗಳನ್ನೇ ಬಂಡವಾಳ ಮಾಡಿಕೊಂಡು ದೇಶದ ಜನರ ಭಾವನೆಗಳೊಂದಿಗೆ ಹುಚ್ಚಾಟ ಆಡುತ್ತಿರುವ ಪಕ್ಷಕ್ಕೆ ಈ ಬಾರಿ ಸೋಲಿಸಿ ಪುನಃ ಕಾಂಗ್ರೆಸ್ ಕೈಗೆ ಅಧಿಕಾರ ಕೊಡಲು ಜನ ನಿರ್ಧರಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ದೇಶದ ಭವಿಷ್ಯ ಬದಲಿಸುವ ದಿಕ್ಸೂಚಿಯಾಗಲಿದೆ. ಕಲಬುರಗಿ ಅಭಿವೃದ್ಧಿ ಹರಿಕಾರ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೂಮ್ಮೆ ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ.
ಪ್ರಕಾಶ ರಾಠೊಡ, ವಿಧಾನ ಪರಿಷತ್ ಸದಸ್ಯ