ಬೆಂಗಳೂರು: ಈ ದೇಶವನ್ನು ಆಳಬೇಕಾಗಿರುವುದು ಸಂವಿಧಾನವೇ ಹೊರತು ವ್ಯಕ್ತಿಯಲ್ಲ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಕಂದಾಯ ಭವನದಲ್ಲಿ ಹಮ್ಮಿಕೊಂಡಿದ್ದ “ಚುನಾವಣೆ ಮತ್ತು ಮಾಧ್ಯಮ’ ಕುರಿತ ವಿಚಾರ ಮಂಥನದಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಎಂಬುದು ಧರ್ಮ, ಜಾತಿ, ಅಪರಾಧೀಕರಣಗಳಿಂದ ಬಂಧಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಂಸತ್‌ಗೆ ಕೋಟ್ಯಾಧಿಪತಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಆಯ್ಕೆಯಾಗುತ್ತಿದ್ದು, ವಿವೇಕ ಉಳ್ಳವರು, ಹಿಂದುಳಿದ ವರ್ಗದವರು ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಹೀಗಾದರೆ, ಸಾಮಾಜಿಕ ನ್ಯಾಯ ದೊರೆಯಲು ಹೇಗೆ ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸತ್‌ನಲ್ಲಿ ಮಸೂದೆ ಮಂಡನೆಯಾಗುವ ಮೊದಲು ಅವುಗಳ ಬಗ್ಗೆ ಚರ್ಚೆಯಾಗುವುದು ವಾಡಿಕೆ. ಆದರೆ, ಇತ್ತೀಚೆಗೆ ಕೆಲವು ಮಸೂದೆಗಳು ಯಾವುದೇ ರೀತಿಯ ಚರ್ಚೆಯಾಗದೇ ಅಂಗೀಕಾರವಾಗಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಜನರು ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ದೇಶದ ಹಲವು ಮಂದಿಗೆ ಸಂವಿಧಾನದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲ. ಆ ಹಿನ್ನೆಲೆಯಲ್ಲಿ ಸಂವಿಧಾನದ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಆಗಬೇಕು. ಜತೆಗೆ ಬಹುತ್ವದ ಭಾರತವನ್ನು ಕಟ್ಟುವ ಕಾರ್ಯ ನಡೆಯಬೇಕು. ಮಾಧ್ಯಮಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.