Advertisement

ಮೋದಿ ಆಡಳಿತದಲ್ಲಿ ದೇಶ ಪ್ರಗತಿ ಸಾಧಿಸಿಲ್ಲ

09:48 PM Apr 01, 2019 | Team Udayavani |

ತಿಪಟೂರು: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 5 ವರ್ಷದ ಅವಧಿಯಲ್ಲಿ ದೇಶ ಪ್ರಗತಿ ಸಾಧಿಸಿಲ್ಲ. ಬಡವರು ಬಡವರಾಗಿಯೇ ಉಳಿದಿದ್ದರೆ, ರೈತರ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ ದೂರಿದರು.

Advertisement

ನಗರದ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಸೋಮವಾರ ಆಯೋಜಿಸಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕ್ಷಮೆಯಾಚಿಸಲಿ: ದೇಶದ ಜನರ ಮುಂದೆ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು. ಕಳೆದ ಚುನಾವಣೆಯಲ್ಲಿ ಮೋದಿ ಸುಳ್ಳು ಭರವಸೆ ನೀಡಿ ದೇಶದ ಜನರಿಗೆ ಮಂಕುಬೂದಿ ಎರಚಿದ್ದೇ ಅವರ ಸಾಧನೆಯಾಗಿದೆ. 2 ಕೋಟಿ ವಾರ್ಷಿಕ ಉದ್ಯೋಗದಂತೆ 5 ವರ್ಷದಲ್ಲಿ 10 ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆಂದು ಅವರ ಭವಿಷ್ಯ ಹಾಳು ಮಾಡಿದ್ದಾರೆ.

ದೇಶದಲ್ಲಿ ಸಾವಿರಾರು ರೈತರು ಕೃಷಿಗೆ ಸಾಲಮಾಡಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದರೂ ಕೇಂದ್ರದಿಂದ ಬಿಡಿಗಾಸು ಸಾಲಮನ್ನಾ ಮಾಡಲಾಗಲಿಲ್ಲ. ರಾಜ್ಯದ ಸಿಎಂ ಕುಮಾರಸ್ವಾಮಿಯವರು 46ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾಮಾಡಿ ಬಹುದೊಡ್ಡ ಸಾಧನೆ ಮಾಡಿದ್ದಾರೆ.

ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ಸಿಂಗ್‌ರವರು ರೈತರ ಸುಮಾರು 72 ಸಾವಿರ ಕೋಟಿ ಸಾಲ ಮನಾ ಮಾಡಿ ಕೃಷಿಗೆ ಉತ್ತೇಜಿಸಿ ಜೊತೆಗೆ ರೈತರನ್ನು ಆತ್ಮಹತ್ಯೆಯಿಂದ ಹಿಂದೆ ಸರಿಯುವಂತೆ ಮಾಡಿದರು. ಆದರೆ ಮೋದಿಯವರು ರೈತರ ಸಾಲ ಮನ್ನಾ ಮಾಡಿದರೆ ದೇಶದ ಖಜಾನೆಗೆ ಹೊಡೆತ ಬೀಳುತ್ತದೆ ಎಂದು ರೈತರನ್ನು ಅವಮಾನಿಸಿದ್ದಾರೆ ಎಂದು ದೂರಿದರು.

Advertisement

ಜಿಎಸ್‌ಬಿಗೆ ಮತ ನೀಡಬೇಡಿ: ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜುರವರಿಗೆ ಮತ ನೀಡಲು ಬಿಡಬೇಡಿ. ಅವರು ಈ ಹಿಂದೆ 3ಬಾರಿ ಎಂಪಿ ಆಗಿದ್ದರೂ ಜಿಲ್ಲೆ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಅವರು ಬಹುದೊಡ್ಡ ಸುಳ್ಳುಗಾರ. ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಈ ಬಾರಿ ಮಾಜಿ ಪ್ರಧಾನಿ, ಹಿರಿಯರೂ, ಅಭಿವೃದ್ದಿಪರ ಎಚ್‌.ಡಿ. ದೇವೇಗೌಡರಿಗೆ ಮತ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಸಣ್ಣಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಮಾತನಾಡಿ, ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರ ಗೆಲುವು ಎರಡೂ ಪಕ್ಷದ ಕಾರ್ಯಕರ್ತರಿಗೆ ಸಲ್ಲುವಂತ ಗೆಲುವಾಗಿದ್ದು, ಹಗಲಿರುಳು ಮತದಾರರನ್ನು ಜಾಗ್ರತರನ್ನಾಗಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಬೇಕು ಎಂದರು.

ಅಭಿವೃದ್ಧಿಗೆ ಸಹಕರಿಸಿ: ಜೆಡಿಎಸ್‌ ಮುಖಂಡ ಲೋಕೇಶ್ವರ ಮಾತನಾಡಿ ಕೋಮುವಾದಿ, ಸರ್ವಧಿಕಾರಿ ಬಿಜೆಪಿ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ. ಮೈತ್ರಿ ಅಭ್ಯರ್ಥಿ ದೇವೇಗೌಡರ ಆಯ್ಕೆಯಿಂದ ಜಿಲ್ಲೆಯು ರಾಜ್ಯದ ಅಭಿವೃದ್ಧಿ ಜಿಲ್ಲೆಗಳ ಸಾಲಿಗೆ ಸೇರಲಿದೆ. ಇಲ್ಲಿನ ನೀರಾವರಿ ಸಮಸ್ಯೆ ಬಗೆಹರಿದು ರೈತರು ಸುಭಿಕ್ಷಾ ಕಾಲ ಕಾಣಬೇಕಾದರೆ ಅದು ದೇವೇಗೌಡರಿಂದ ಮಾತ್ರ ಎಂದರು.

ಮಾಜಿ ಶಾಸಕ ಕೆ. ಷಡಕ್ಷರಿ ಮಾತನಾಡಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತಗಳು ಹೋಗಬಾರದು. ಅವರಿಗೆ ಹೋಗುವ ಮತಗಳನ್ನು ನಮ್ಮ 2ಪಕ್ಷಗಳ ಕಾರ್ಯಕರ್ತರು ತಡೆದು ನಮ್ಮ ಮೈತ್ರಿ ಅಭ್ಯರ್ಥಿ ದೇವೇಗೌಡರು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜು ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಕಾವೇರಿನದಿ ನೀರಿನ ಸಮಸ್ಯೆ ಸೇರಿದಂತೆ ಇತರೆ ನೀರಿನ ಸಮಸ್ಯೆ ಬಂದಗಲೆಲ್ಲಾ ದೇವೇಗೌಡರೇ ಬಗೆಹರಿಸಲು ಮುಂದಾಗಿರುವುದು ಜಿಲ್ಲೆಯ ಮತದಾರರಿಗೆ ತಿಳಿದಿರುವ ಸಂಗತಿ. ಮುಂದಿನ ದಿನಗಳಲ್ಲಿ ಅವರು ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ಮುಂದಾಗಲಿದ್ದು, ಅವರನ್ನೇ ಗೆಲ್ಲಿಸಿದರೆ ಜಿಲ್ಲೆ ದೇಶದಲ್ಲೇ ಗುರ್ತಿಸಲ್ಪಡುವಂತೆ ಅಭಿವೃದ್ದಿ ಕಾಣಲಿದೆ ಎಂದರು.

ಸಮಾರಂಭದಲ್ಲಿ ಎಂಎಲ್‌ಸಿ ಚೌಡರೆಡ್ಡಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಂ.ಡಿ. ಲಕ್ಷ್ಮೀನಾರಾಯಣ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಮುರಳೀಧರ್‌ಹಾಲಪ್ಪ, ರಾಧಾಕೃಷ್ಣ, ಜಿಪಂ ಸದಸ್ಯ ಜಿ.ನಾರಾಯಣ್‌, ತಾ. ಕಾಂಗ್ರೆಸ್‌ ಅಧ್ಯಕ್ಷ ಕಾಂತರಾಜು, ಜೆಡಿಎಸ್‌ ತಾ.ಅಧ್ಯಕ್ಷ ಸೊಪ್ಪುಗಣೇಶ್‌, ತಾಪಂ ಉಪಾಧ್ಯಕ್ಷ ಶಂಕರ್‌, ಜೆಡಿಎಸ್‌ ತಾ. ಕಾರ್ಯಾಧ್ಯಕ್ಷ ಶಿವಸ್ವಾಮಿ, ತಾ. ಜೆಡಿಎಸ್‌ ಮಾಜಿ ಅಧ್ಯಕ್ಷ ತಡಸೂರು ಗುರುಮೂರ್ತಿ, ಮಾಜಿ ನಗರಸಭಾ ಸದಸ್ಯೆ ರೇಖಾಅನೂಪ್‌, ಲಲಿತಾ ಸಂತೋಷ್‌, ಹಿಂಡಿಸ್ಕೆರೆ ಶಿವಶಂಕರ್‌ ಮತ್ತಿರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next