Advertisement

ಉಗ್ರರ ವಿರುದ್ಧ ದೇಶ ಒಂದಾಯಿತು

12:30 AM Feb 16, 2019 | |

ಎಲ್ಲ ಭೇದಗಳನ್ನೂ ಮರೆತು ಒಗ್ಗಟ್ಟು ಪ್ರದರ್ಶಿಸಿದ ಭಾರತ
ಕೇಂದ್ರ ಸರಕಾರದ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ ಪ್ರತಿಪಕ್ಷಗಳು
ಮುಂಬಯಿ ದಾಳಿ ವೇಳೆ ಸಿಕ್ಕಿದ ಬೆಂಬಲ ಮಾದರಿಯೇ ಪುನರಾರ್ವತನೆ
ಭಯೋತ್ಪಾದನೆ ಮಟ್ಟ ಹಾಕಲು ಪಣ

Advertisement

ದಿಲ್ಲಿಯಲ್ಲಿನ ಪಾಕ್‌ ಹೈಕಮಿಷನ್‌ ಕಚೇರಿ ಹೊರಗಡೆ ಪ್ರತಿಭಟನೆ ನಡೆಸಿದ ಜಾಗತಿಕ ಉಗ್ರ ನಿಗ್ರಹ ಮಂಡಳಿಯ ಸದಸ್ಯರನ್ನು ವಶಕ್ಕೆ ಪಡೆದ ಪೊಲೀಸರು .
ಹುತಾತ್ಮ ಯೋಧರ ಕುಟುಂಬಕ್ಕೆ 51 ಲಕ್ಷ ರೂ. ಪರಿಹಾರ ಘೋಷಿಸಿದ ಮುಂಬಯಿನ ಶ್ರೀ ಸಿದ್ದಿವಿನಾಯಕ ದೇಗುಲ ಟ್ರಸ್ಟ್‌

ಹೊಸದಿಲ್ಲಿ: ಸರಿಯಾಗಿ ಹತ್ತು ವರ್ಷಗಳ ಹಿಂದಿನ ಮಾತು. 2008ರ ನ.26-29ರ ವರೆಗೆ ದೇಶದ ವಾಣಿಜ್ಯ ನಗರಿ ಮುಂಬಯಿ ಮೇಲೆ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿದ ಸಂದರ್ಭ. ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಆ ದಾಳಿಗೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಸಾಥ್‌ ನೀಡಿತ್ತು. ಅಂದಿನ ದಾಳಿಯ ಬೆನ್ನಲ್ಲೇ ಅಮೆರಿಕ, ರಷ್ಯ, ಬ್ರಿಟನ್‌, ಐರೋಪ್ಯ, ಪಾಶ್ಚಿಮಾತ್ಯ ರಾಷ್ಟ್ರಗಳ ಸರಕಾರಿ ಮುಖ್ಯಸ್ಥರು ಭಾರತಕ್ಕೆ ಅಭೂತಪೂರ್ವ ಬೆಂಬಲ ನೀಡುವ ಮೂಲಕ ನಾವು ನಿಮ್ಮ ಜತೆಗಿದ್ದೇವೆ ಎಂಬುದನ್ನು ಸಾರಿದ್ದರು. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರಕ್ಕೆ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಹಾಗೂ ಇತರೆ ಪಕ್ಷಗಳು ಕೂಡ ಸರ್ವ ರೀತಿಯ ಬೆಂಬಲ ಘೋಷಿಸಿದ್ದವು. ಪ್ರತಿಪಕ್ಷ ನಾಯಕ ರಾಗಿದ್ದ ಎಲ್‌.ಕೆ.ಅಡ್ವಾಣಿ, ಪ್ರಧಾನಿ ಯಾಗಿದ್ದ ಡಾ| ಮನಮೋಹನ್‌ ಸಿಂಗ್‌ ಜತೆಗೂಡಿ ಒಂದೇ ವಿಮಾನದಲ್ಲಿ ಮುಂಬಯಿಗೆ ಹೋಗು ವುದೂ ಕಾರ್ಯಸೂಚಿ ಯಲ್ಲಿದ್ದರೂ, ಅದು ಕೈಗೂಡಲಿಲ್ಲ. ಒಟ್ಟಿನಲ್ಲಿ ಅಂದಿನ ದಾಳಿಯು ದೇಶದೊಳಗಿನ ವಿವಿಧ ಪಕ್ಷಗಳನ್ನು ಒಂದುಗೂಡಿಸಿತ್ತು.

ಇದೀಗ ಗುರುವಾರ ಪುಲ್ವಾಮಾದಲ್ಲಿ ಜೈಶ್‌-ಎ- ಮೊಹಮ್ಮದ್‌ ಎಂಬ ರಕ್ತಪಿಪಾಸು ಉಗ್ರ ಸಂಘಟನೆ ನಡೆಸಿದ ಬೀಭತ್ಸ ಕೃತ್ಯಕ್ಕೆ ಜಗತ್ತೇ ಮಮ್ಮಲ ಮರುಗಿದೆ. ಒಂದು ಕಡೆಯಿಂದ ವಿಶ್ವದ ಬಹುತೇಕ ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ ಸೂಚಕ ಸಂದೇಶಗಳು ಬಂದಿದ್ದರೆ, ಮತ್ತೂಂದು ಕಡೆ ಆಂತರಿಕವಾಗಿ ರಾಜಕೀಯ ಪಕ್ಷಗಳೂ ಒಂದಾಗಿವೆ. ಉಗ್ರರ ವಿರುದ್ಧ  ಸರಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೂ ನಾವು ಬದ್ಧರಾಗಿ ನಿಲ್ಲುತ್ತೇವೆ. ಈ ವಿಚಾರದಲ್ಲಿ ನಮ್ಮ ಒಗ್ಗಟ್ಟನ್ನು ಯಾರಿಗೂ ಮುರಿಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಖುದ್ದಾಗಿ ಹೇಳಿದ್ದರೆ, ಎನ್‌ಸಿಪಿ, ಆಪ್‌, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳೂ ಬೆಂಬಲ ಘೋಷಿಸಿವೆ.

ರಷ್ಯಾ ಅಧ್ಯಕ್ಷ ಪುಟಿನ್‌, ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಸೇರಿದಂತೆ ಹಲವಾರು ರಾಷ್ಟ್ರಗಳ ಸರಕಾರಿ ಮುಖ್ಯಸ್ಥರು ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿಗೆ ಪ್ರತ್ಯೇಕವಾಗಿ ಸಂದೇಶ ಕಳುಹಿಸಿ ಭಾರತಕ್ಕೆ ಬೆಂಬಲ ನೀಡುವುದಾಗಿ ವಾಗ್ಧಾನ ನೀಡಿದ್ದಾರೆ. ಜತೆಗೆ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಪಾಕಿಸ್ಥಾನ ಪ್ರೇರಿತ ಉಗ್ರ ಸಂಘಟನೆಯ ದುಷ್ಕೃತ್ಯವನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ಜತೆಗೆ ಹುತಾತ್ಮರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸಾರಿ ಸಾರಿ ಹೇಳಿವೆ. ಹಲವೆಡೆ ಪ್ರತಿಭಟನಾ ಮೆರವಣಿಗೆ, ಮೌನ ಮೆರವಣಿಗೆ, ಮೊಂಬತ್ತಿ ಮೆರವಣಿಗೆಗಳು ನಡೆದಿವೆ. ಪಕ್ಷ, ಜಾತಿ, ಧರ್ಮಭೇದಗಳನ್ನು ಮರೆತು ಭಾರತೀಯರು ಒಂದಾಗಿದ್ದಾರೆ. ಉಗ್ರ ರಿಗೆ ಕಠಿಣ ಸಂದೇಶ ಕಳುಹಿಸುವುದೊಂದೇ ಅವರೆಲ್ಲರ ಸದ್ಯದ ತುಡಿತವಾಗಿದೆ.

Advertisement

ಪಾಕ್‌ ಪ್ರೇಮ ಮೆರೆದ ಸಿಧು
ಪಂಜಾಬ್‌ನ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಪುಲ್ವಾಮಾ ಘಟನೆಯನ್ನು ಅತ್ಯುಗ್ರ ಶಬ್ದಗಳಿಂದ ಖಂಡಿಸುವುದರ ಜತೆಗೆ ಪಾಕ್‌ ಪ್ರೇಮವನ್ನೂ ಮೆರೆದಿದ್ದಾರೆ. “ಇದೊಂದು ಹೇಡಿಗಳ ಕೃತ್ಯ. ಅದನ್ನು ಖಂಡಿಸಲೇಬೇಕು. ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುವವರಿಗೆ ಕಠಿನ ಶಿಕ್ಷೆಯಾಗಲೇಬೇಕು’ ಎಂದಿದ್ದಾರೆ. ಅದರ ಜತೆಗೆ ಕೆಲವೇ ಕೆಲವು ವ್ಯಕ್ತಿಗಳು ಕುಕೃತ್ಯ ನಡೆಸುತ್ತಾರೆ ಎಂದು ಇಡೀ ಪಾಕಿಸ್ಥಾನವನ್ನೇ ಏಕೆ ದೂಷಿಸಬೇಕು ಎಂದೂ ಪ್ರಶ್ನಿಸಿದ್ದಾರೆ. ಕಳೆದ ವರ್ಷ ಪಾಕಿಸ್ಥಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ  ಕ್ಕೆ ತೆರಳುವ ಮೂಲಕ ಸಿಧು ಹಲವು ವಿವಾದಗಳಿಗೆ ನಾಂದಿ ಹಾಡಿದ್ದರು.

ಕರಾಚಿಗೆ ಪ್ರೋಗಾ‹ಮ್‌ ಕ್ಯಾನ್ಸಲ್‌
ಪುಲ್ವಾಮಾ ಘಟನೆ ಹಿನ್ನೆಲೆಯಲ್ಲಿ ಬಾಲಿವುಡ್‌ ಗೀತರಚನೆಕಾರ ಜಾವೇದ್‌ ಅಖ್ತರ್‌ ಹಾಗೂ ಬಾಲಿವುಡ್‌ ನಟಿ ಶಬಾನಾ ಅಜ್ಮಿ ಕರಾಚಿಯಲ್ಲಿ ಭಾಗವಹಿಸಬೇಕಾಗಿದ್ದ ಕಾರ್ಯಕ್ರಮಕ್ಕೆ ತೆರಳದೇ ಇರಲು ನಿರ್ಧರಿಸಿ ದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿ ನಿರ್ಧಾರ ಪ್ರಕಟಿಸಿದ್ದಾರೆ. ಕರಾಚಿ ಆರ್ಟ್ಸ್ ಕೌನ್ಸಿಲ್‌ ಭಾರತೀಯ ಉರ್ದು ಕವಿ ಕೈಫಿ ಅಜ್ಮಿಯವರ ಶತಮಾನೋತ್ಸವ ನಿಮಿತ್ತ 2 ದಿನ ಕಾರ್ಯಕ್ರಮ ಆಯೋಜಿಸಿತ್ತು.

ಅಜ್ಮಿರ್‌ ದರ್ಗಾಗಿಲ್ಲ ಪ್ರವೇಶ
ದಾಳಿಯನ್ನು ಖಂಡಿಸಿರುವ ರಾಜಸ್ಥಾನದ ಪ್ರಸಿದ್ಧ ಅಜ್ಮಿರ್‌ ಶರೀಫ್ ದರ್ಗಾ, ಇನ್ನು ಮುಂದೆ ಪಾಕಿಸ್ಥಾನಿ ಯಾತ್ರಿಕರಿಗೆ ದರ್ಗಾಗೆ ಬರಲು ಅನುಮತಿ ನೀಡಬಾರದೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಮಡಿದ ಯೋಧರಿಗೆ ಗೌರವ ಸಲ್ಲಿಸಿದ ಹಜ್ರತ್‌ ಖ್ವಾಜಾ ಮುಯಿನುದ್ದೀನ್‌ ಹಸ್ಸನ್‌ ಚಿಸ್ತಿ ದರ್ಗಾದ ದಿವಾನ್‌ ಸೆಯ್ಯದ್‌ ಝೈನುಲ್‌ ಅಲಿ ಖಾನ್‌, ಉರೂಸ್‌ ಮತ್ತು ಇತರ ಧಾರ್ಮಿಕ ಸಮಾರಂಭಗಳಿಗೆ ಪಾಕಿಸ್ಥಾನದಿಂದ ಅಜ್ಮಿರ್‌ಗೆ ಯಾತ್ರಿಕರ ಗುಂಪುಗಳು ಬರುತ್ತವೆ. ಸರಕಾರ ಇನ್ನು ಮುಂದೆ ಅವರನ್ನು ತಡೆಯಬೇಕು. ಪಾಕಿಸ್ಥಾನ ನಮ್ಮ ಯೋಧರ ಮೇಲೆ ನಡೆಸಿದ ಕೃತ್ಯ ಇಸ್ಲಾಂ ವಿರೋಧಿಯಾದುದು, ಅದಕ್ಕೆ ಕ್ಷಮೆಯಿಲ್ಲ ಎಂದಿದ್ದಾರೆ.

ಎಲ್ಲ ಕಾರ್ಯಕ‹ಮ ರದ್ದು
ಹುತಾತ್ಮರಾದ ಯೋಧರ ಗೌರವಾರ್ಥ ಬಿಜೆಪಿ ಶುಕ್ರವಾರ ಆಯೋಜನೆಗೊಳಿಸಿದ್ದ ಎಲ್ಲಾ ಕ್ರಾಯಕ್ರಮಗಳನ್ನೂ ರದ್ದು ಮಾಡಿದೆ. ಪ್ರಧಾನಿ ಮೋದಿ ಮಧ್ಯಪ್ರದೇಶದ ಇತಾರ್ಸಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಒಡಿಶಾದಲ್ಲಿ ಚುನಾವಣೆ ನಿಮಿತ್ತ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿದ್ದರು. 

ಬೆಂಬಲಿಸಿದಾತನ ಅಮಾನತು
ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಯೊಬ್ಬ ಪುಲ್ವಾಮ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ವಿವಿಯಿಂದ ಅಮಾನತು ಮಾಡಲಾಗಿದೆ. ಈ ಕುರಿತು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ವಿವಿ ವಕ್ತಾರ ಒಮರ್‌ ಪೀರ್‌ಝಾದಾ ತಿಳಿಸಿದ್ದಾರೆ. 

ಕ್ಷಮಿಸಲ್ಲ, ಮರೆಯಲ್ಲ
40 ಮಂದಿ ವೀರ ಯೋಧರನ್ನು ಕಳೆದುಕೊಂಡ ಸಿಆರ್‌ಪಿಎಫ್ ಬಹುವಾಗಿ ಕ್ರುದ್ಧಗೊಂಡಿದೆ. ಪಾಕಿಸ್ಥಾನದ ಉಗ್ರ ಸಂಘಟನೆಯ ವಿರುದ್ಧ ಸೇಡು ತೀರಿಸಿಕೊಂಡೇ ಸಿದ್ಧ ಎಂದು ಕೇಂದ್ರ ಅರೆಸೇನಾ ಪಡೆ ಹೇಳಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಹೇಳಿಕೆಯಲ್ಲಿ ಈ ಅಂಶ ಸ್ಪಷ್ಟಪಡಿಸಲಾಗಿದೆ. “ನಾವು ಖಂಡಿತವಾಗಿಯೂ ಈ ಘಟನೆಯನ್ನು ಮರೆಯುವುದೂ ಇಲ್ಲ; ಕ್ಷಮಿಸುವುದೂ ಇಲ್ಲ’ ಎಂದು ಟ್ವೀಟ್‌ ಮಾಡಿದೆ.

ಉಗ್ರ ನಿಗ್ರಹಕ್ಕೆ ಕಠಿನ ಕ್ರಮ ಅಗತ್ಯ
ಕೇವಲ ಚರ್ಚೆ ಹಾಗೂ ರಾಜಕೀಯ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ಮಾಡುವುದರ ಬದಲಿಗೆ ಉಗ್ರರ ದಾಳಿ ತಡೆಗೆ ಕಠಿಣ ಕ್ರಮಗಳನ್ನು ಭಾರತ ತೆಗೆದುಕೊಳ್ಳಬೇಕು ಎಂದು ಮುಂಬಯಿ ದಾಳಿಯಲ್ಲಿ ಹುತಾತ್ಮರಾದ ಮೇಜರ್‌ ಸಂದೀಪ್‌ ಉಣ್ಣಿಕೃಷ್ಣನ್‌ರ ತಂದೆ ಕೆ. ಉಣ್ಣಿಕೃಷ್ಣನ್‌ ಹೇಳಿದ್ದಾರೆ. ಅಲ್ಲದೆ, ಸೂಕ್ತ ಪ್ರತಿಕ್ರಿಯೆ ನೀಡಲು ಸಿದ್ಧವಿಲ್ಲದೇ ಶತ್ರುವನ್ನು ಪ್ರಚೋದಿಸಬಾರದು. 2500ಕ್ಕೂ ಹೆಚ್ಚು ಸಿಬಂದಿಯನ್ನು ಸಾಗಿಸುವಾಗ ಈ ಭಾಗವನ್ನು, ಅದರಲ್ಲೂ ಹೆದ್ದಾರಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂದು ಉಣ್ಣಿಕೃಷ್ಣನ್‌ ಹೇಳಿದ್ದಾರೆ. ಇಂಥ ಘಟನೆಗಳು ಯಾವುದೇ ಸಮಯದಲ್ಲೂ ನಡೆಯಬಹುದಾದ್ದರಿಂದ, ಇದಕ್ಕೆ ಭಾರತ ಸಿದ್ಧವಾಗಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಯಾವುದೋ ಕೆಟ್ಟ ಉದ್ದೇಶಕ್ಕೆ ತನ್ನ ಜೀವವನ್ನು ಬಲಿಕೊಡಲು ಸಿದ್ಧನಿರುವ ವ್ಯಕ್ತಿ ಇರುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಚಾರಗಳಲ್ಲಿ ಸುದ್ದಿ ವಾಹಿನಿಗಳು ಚರ್ಚೆ ನಡೆಸುವುದನ್ನು ನಿಷೇಧಿಸಬೇಕು ಎಂದೂ ಅವರು ಹೇಳಿದ್ದಾರೆ.

ಉಗ್ರರಾದ ಹಫೀಜ್‌ ಸಯೀದ್‌, ಮಸೂದ್‌ ಅಜರ್‌ರನ್ನು ಭಾರತಕ್ಕೆ ಕರೆ ತರಬೇಕು ಇಲ್ಲವೇ ಒಸಮಾ ಬಿನ್‌ ಲಾಡೆನ್‌ನನ್ನು ಯಾವ ರೀತಿ ಕೊಲ್ಲಲಾಯಿತೋ ಅದೇ ರೀತಿಯ ಸಾವನ್ನು ಇವರಿಗೂ ಕಲ್ಪಿಸಬೇಕು.
ಬಾಬಾ ರಾಮ್‌ದೇವ್‌,  ಯೋಗಗುರು

ಭಯೋತ್ಪಾದನೆ ವಿರುದ್ಧ 1986ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯವನ್ನು ಶೀಘ್ರವೇ ಜಾರಿಗೊಳಿಸಲು ಭಾರತ ಒತ್ತಾಯಿಸುತ್ತದೆ. 33 ವರ್ಷಗಳಿಂದ ಅದನ್ನು ಜಾರಿ ಮಾಡಲಾಗಿಲ್ಲ. ಭಯೋತ್ಪಾದನೆ ಎಂದರೇನು ಎಂದು ಏಕೀಕೃತ ವಿಶ್ಲೇಷಣೆ ಇಲ್ಲದ್ದರಿಂದ ಹೀಗಾಗಿದೆ.
ಅರುಣ್‌ ಜೇಟ್ಲಿ, ಕೇಂದ್ರ ವಿತ್ತ ಸಚಿವ

ಉಗ್ರರ ಹೀನ ಕೃತ್ಯದಿಂದ ನೋವಾಗಿದೆ. ಈ ನೋವಿನ ಸಂದರ್ಭದಲ್ಲಿ ಇಡೀ ದೇಶ ಒಟ್ಟಿಗೇ ನಿಲ್ಲಬೇಕು. ಅಂತಾರಾಷ್ಟ್ರ ಮಟ್ಟದಲ್ಲಿ ಈ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಇದನ್ನು ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟಕ್ಕೆ ಬಳಸಿಕೊಳ್ಳಬೇಕು.
ಪ್ರಣಬ್‌ ಮುಖರ್ಜಿ, ಮಾಜಿ ರಾಷ್ಟ್ರಪತಿ

ಇದೊಂದು ಅತ್ಯಂತ ಹೀನ ಮತ್ತು ನೀಚ ಕೃತ್ಯ. ಗುಪ್ತಚರ ದಳ ಅಪಾಯವನ್ನು ಅರಿಯುವಲ್ಲಿ ವಿಫ‌ಲವಾಗಿದ್ದರೆ ಅದಕ್ಕೆ ಕಾರಣಕರ್ತರನ್ನು ಕೂಡಲೆ ಕರ್ತವ್ಯದಿಂದ ವಜಾಗೊಳಿಸಬೇಕು. ಪಾಕಿಸ್ಥಾನದ ಒಳಗೇ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಸಮಯ ಈಗ ಬಂದಿದೆ.
ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

ವಿಶ್ವನಾಯಕರ ಖಂಡನೆ
ಪಾಕಿಸ್ಥಾನ ಮೂಲಕ ಉಗ್ರ ಸಂಘಟನೆಯು ಭಾರತದ ಮಣ್ಣಲ್ಲಿ ನಡೆಸಿದ ಹೀನ ಕೃತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ, ನೇಪಾಳ, ಶ್ರೀಲಂಕಾ, ಸೌದಿ ಅರೇಬಿಯಾ, ಭೂತಾನ್‌, ಫ್ರಾನ್ಸ್‌ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಗ್ರ ನಿರ್ಮೂಲನೆಗಾಗಿ ಭಾರತದ ಜತೆ ಕೈಜೋಡಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ. ಜತೆಗೆ, ಹುತಾತ್ಮರ ಕುಟುಂಬಗಳಿಗೆ ಸಾಂತ್ವನವನ್ನೂ ನುಡಿದಿದ್ದಾರೆ. 

ಉಗ್ರರ ಹೀನ ಕೃತ್ಯವನ್ನು ನಾವು ಪ್ರಾಮಾಣಿಕವಾಗಿ ಖಂಡಿಸುತ್ತೇವೆ. ಉಗ್ರನಿಗ್ರಹದಲ್ಲಿನ ಸಹಕಾರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಾವು ಎಲ್ಲ ರೀತಿಯ ಬೆಂಬಲ ನೀಡುತ್ತೇಲೆ.
ವ್ಲಾದಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ

ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇವೆ. ಈ ನೋವಿನ ಕ್ಷಣದಲ್ಲಿ ನಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರೊಂದಿಗೆ ನಾವಿದ್ದೇವೆ.
ಸ್ಕಾಟ್‌ ಮಾರಿಸನ್‌, ಆಸ್ಟ್ರೇಲಿಯಾ ಪ್ರಧಾನಿ

ಭಯೋತ್ಪಾದಕರ ಕೃತ್ಯವನ್ನು ಕಟು ಶಬ್ದಗಳಿಂದ ಖಂಡಿಸುತ್ತೇವೆ. ಎಲ್ಲ ರೀತಿಯ ಹಿಂಸೆಗಳನ್ನೂ ತಿರಸ್ಕರಿಸುವ ವಿಚಾರದಲ್ಲಿ ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ.
ಮೊಹಮ್ಮದ್‌ ಬಿನ್‌ ಸಲ್ಮಾನ್‌, ಸೌದಿ ಅರೇಬಿಯಾ ಭಾವೀ ದೊರೆ

ಯಾವುದೇ ರೀತಿಯ ಭಯೋತ್ಪಾದಕ ಕೃತ್ಯದ ಬಗ್ಗೆ ನಾವು ಶೂನ್ಯ ಸಹಿಷ್ಣು ಮನೋಭಾವ ಹೊಂದಿದ್ದೇವೆ. ಈ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ನಾವು ಕೈಜೋಡಿಸುತ್ತೇವೆ.
ಶೇಖ್‌ ಹಸೀನಾ, ಬಾಂಗ್ಲಾ ಪ್ರಧಾನಿ

ಸಾವಿನ ಹೆದ್ದಾರಿ
ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯು ನಮ್ಮ ಯೋಧರಿಗೆ “ಸಾವಿನ ಹೆದ್ದಾರಿ’ಯಾಗಿ ಪರಿಣಮಿಸಿದೆ ಎಂದರೆ ಸುಳ್ಳಲ್ಲ. ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಅತಿ ಹೆಚ್ಚು ದಾಳಿಗಳು ನಡೆದಿರುವುದು ಶ್ರೀನಗರ-ದಕ್ಷಿಣ ಕಾಶ್ಮೀರದ ಹೈವೇಯಲ್ಲೇ. 2013ರಿಂದ ಈವರೆಗೆ ಇಲ್ಲಿ ನಡೆದ ದಾಳಿಗಳಿಗೆ 68 ಯೋಧರು ಹುತಾತ್ಮರಾಗಿದ್ದಾರೆ.

13 2013ರಿಂದ ಈವರೆಗೆ ಈ ಹೆದ್ದಾರಿಯಲ್ಲಿ ನಡೆದ ಪ್ರಮುಖ ದಾಳಿಗಳ ಸಂಖ್ಯೆ  
68 ಈ ದಾಳಿಗಳಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 
2013 ಸಿಆರ್‌ಪಿಎ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ- ಒಬ್ಬ ಯೋಧ ಹುತಾತ್ಮ. ಇದಾದ ಬೆನ್ನಲ್ಲೇ ಪುಲ್ವಾಮಾದಲ್ಲಿ ಮತ್ತೂಂದು ದಾಳಿಗೆ ಯೋಧ ಬಲಿ.
2015 ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಪ್ರತ್ಯೇಕ ಕಡೆ ಉಗ್ರರ ದಾಳಿ – ಇಬ್ಬರು ಬಿಎಸ್‌ಎಫ್, ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮ
2016 ಈ ವರ್ಷ ಒಟ್ಟು 4 ದಾಳಿಗಳು ನಡೆದಿವೆ. ಭದ್ರತಾ ಪಡೆಯ 21 ಮಂದಿ ಯೋಧರು ಪ್ರಾಣತೆತ್ತಿದ್ದಾರೆ. 
2017 ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿ. 7 ಯಾತ್ರಿಕರ ಸಾವು. ಯೋಧರಿಗೆ ಯಾವುದೇ ಪ್ರಾಣಾಪಾಯವಿಲ್ಲ
2018  ಬಿಎಸ್‌ಎಫ್ ಗಸ್ತು ಪಡೆಯ ಮೇಲೆ ದಾಳಿ- ಇಬ್ಬರು ಯೋಧರ ಸಾವು
2019 ಪುಲ್ವಾಮಾದಲ್ಲಿ ಗುರುವಾರ ನಡೆದ ದಾಳಿಗೆ 40 ಯೋಧರು ಹುತಾತ್ಮ

Advertisement

Udayavani is now on Telegram. Click here to join our channel and stay updated with the latest news.

Next