ಸಿಂಧನೂರು: ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಮುಖ್ಯಸ್ಥ ವಾತ್ಸವ್ ಹೇಳಿದರು
ನಗರದ ಸಂಗಮ ಪ್ಯಾಲೆಸ್‌ನಲ್ಲಿ ರವಿವಾರ ಏರ್ಪಡಿಸಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಯುವ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ಯುವಶಕ್ತಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತದಾರರು ಆಲೋಚನೆ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಪ್ರಧಾನಿ ಮೋದಿ ಅವರ ಸುಳ್ಳಿನ ಮಾತುಗಳಿಂದ, ಭರವಸೆಗಳಿಂದ ಜನರಿಗೆ ಭ್ರಮನಿರಸನವಾಗಿದೆ. ಹಾಗಾಗಿ ಈ ಬಾರಿ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಯುವ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಈ ಬಾರಿ ರಾಜ್ಯದಲ್ಲಿ ಯುವಕರಿಗೆ ಬಹಳ ಅವಕಾಶವಿದೆ ಎಂದರು.
ಎಐಸಿಸಿ ಸಲಹೆಗಾರ ಚೇತನ ರೆಡ್ಡಿ ಮಾತನಾಡಿ, ದೇಶದ ಯುವಶಕ್ತಿ ಮತ್ತಷ್ಟು ಸಂಘಟನೆಗೊಳಿಸಲು ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಪ್ರಚಾರ ಮಾಡುತ್ತಿದ್ದೇವೆ. ಈಗಾಗಲೇ ಅನೇಕರು ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 21 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಲವರ್ಧನೆಗೊಳ್ಳುತ್ತಿದೆ. ಪ್ರತಿಯೊಬ್ಬರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೈಗೊಂಡ ಕೆಲಸಗಳು ಜನಪ್ರಿಯವಾಗಿವೆ. ಅವನ್ನು ಜನತೆ ಮರೆತಿಲ್ಲ. ಈಗಿನ ದೋಸ್ತಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೈಹಿಡಿಯಬೇಕೆಂದು ಹೇಳಿದರು.
ಯುವ ಕಾಂಗ್ರೆಸ್ ತರಬೇತಿ ಮುಖ್ಯಸ್ಥೆ ಡಾ| ಜ್ಯೋತಿ, ತಾಲೂಕು ಅಧ್ಯಕ್ಷ ಖಾಜಾ ರೌಡಕುಂದಾ, ಪಂಪಾಪತಿ ಸೇರಿದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ನೂರಾರು ಯುವ ಕಾರ್ಯಕರ್ತರು ಭಾಗವಹಿಸಿದ್ದರು.