Advertisement

ಸಂವಿಧಾನದ ದೀಪ ಆರಿದರೆ ದೇಶ ಕಟ್ಟಲಾಗದು

03:49 PM Nov 27, 2018 | |

ಚಿತ್ರದುರ್ಗ: ಸಂವಿಧಾನದ ಆಶಯದಂತೆ ನಡೆದುಕೊಳ್ಳದ ಆಡಳಿತಾರೂಢರು ಸಂವಿಧಾನವನ್ನು ಮೌನವಾಗಿ ಉಸಿರುಗಟ್ಟಿಸಿ ಸಾಯಿಸುತ್ತಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ| ಬಂಜಗೆರೆ ಜಯಪ್ರಕಾಶ್‌ ಆತಂಕ ವ್ಯಕ್ತಪಡಿಸಿದರು.

Advertisement

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಲಂ ಜನಾಂದೋಲನ ಕರ್ನಾಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಬಹುತ್ವದ ಭಾರತಕ್ಕಾಗಿ ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ’ ವಿಷಯ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದರೆ, ಮತ್ತೂಬ್ಬರು ಸಂವಿಧಾನವನ್ನು ಸುಡುತ್ತೇವೆಂದು ಹೇಳುತ್ತಾರೆ. ಕೋಮುವಾದಿ, ಜಾತಿವಾದಿಗಳಿಂದ ಸಾಮಾಜಿಕ ನ್ಯಾಯದಂತಿರುವ ಸಂವಿಧಾನದ ದೀಪ ಆರಿದರೆ ಸಮೃದ್ಧ ಭಾರತವನ್ನು ಕಟ್ಟುವುದು ಅಸಾಧ್ಯ ಎಂದು ಎಚ್ಚರಿಸಿದರು.

ಸಂವಿಧಾನ ಶುಷ್ಕ ತರ್ಕದ ಗ್ರಂಥವಲ್ಲ. ಅದಕ್ಕೂ ಅಂತಃಕರಣವಿದೆ. ಅದು ಒಣ ಕಾನೂನನ್ನು ಬೋಧಿಸುತ್ತಿಲ್ಲ, ಅಂತಃಕರಣವೇ ಕಾನೂನಾಗಿದೆ. ಅಲ್ಲದೆ ಕುರುಡುತನದಿಂದ ಕೂಡಿಲ್ಲ. ತಾಯಿ ಹೃದಯ ಅದಕ್ಕಿದೆ. ಪ್ರಜಾಪ್ರಭುತ್ವ ಉಳಿದಿರುವುದೇ ಸಂವಿಧಾನದ ಮೇಲೆ. ದೌರ್ಜನ್ಯ ತಡೆ, ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ನೀಡಿ ಅವಕಾಶ ಕಲ್ಪಿಸಲು ಸಂವಿಧಾನ ಕೆಲಸ ಮಾಡುತ್ತಿದೆ. 

ಸಂವಿಧಾನವನ್ನು ಉಳಿಸಲು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ಗಳಿಂದ ಸಾಧ್ಯವಿಲ್ಲ. ಜನರು ಸಂವಿಧಾನವನ್ನು ಉಳಿಸಬೇಕಿದೆ. ಆದರೆ ನ್ಯಾಯಾಂಗದ ತೀರ್ಪು, ಸಂವಿಧಾನ ತಿದ್ದುಪಡಿಗಳ ಮೂಲಕ ಸಂವಿಧಾನವನ್ನು ಇರಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತೀಯರ ವಿವೇಕವೇ ಬುದ್ಧ, ಬಸವ, ಅಂಬೇಡ್ಕರ್‌, ಸಾಧು ಸಂತರನ್ನು ಸೃಷ್ಟಿಸಿದ್ದ ಎನ್ನುವುದನ್ನು ಆಡಳಿತಾ ರೂಢರು ಮರೆಯಬಾರದು. ದೇಶದ ಆಚಾರ, ವಿಚಾರ, ಸಂಸ್ಕೃತಿಗಳನ್ನು ಗೌರವಿಸಬೇಕು ಎಂದರು.

Advertisement

ಆಹಾರ ಸಂಸ್ಕೃತಿ ಹೇರುವ ಷಡ್ಯಂತ್ರ ನಡೆಯುತ್ತಿದೆ. ಕಾಶ್ಮೀರಿ ಪಂಡಿತರಿಗೆ, ಬ್ರಾಹ್ಮಣರಿಗೆ ಅಲ್ಲಿ ದನದ ಮಾಂಸ ಬೇಕು. ಅದೇ ಮಾಂಸ ಬೇರೆಯವರಿಗೆ ಬೇಡವಾಗಿದೆ. ಮಂಗಳೂರು, ಕಾರವಾರಗಳ ಬ್ರಾಹ್ಮಣರಿಗೆ ಮೀನು, ಮೊಟ್ಟೆ ಸಸ್ಯಾಹಾರವಾಗಿದೆ. ದನ, ಕೋತಿ, ಹಲ್ಲಿ, ನಾಯಿ, ಬೆಕ್ಕು, ಹಂದಿಗಳನ್ನು ಒಂದು ಕಡೆ ಪೂಜಿಸಿದರೆ ಮತ್ತೂಂದು ಕಡೆ ತಿನ್ನುತ್ತಾರೆ. ಪ್ರಾಣಿದಯೆ, ಭಕ್ತಿ ತುಂಬಿದ ಸಮಾಜ ಇದು ಎನ್ನುವುದನ್ನು ಮರೆಯಬಾರದು. ಸ್ವಾತಂತ್ರ್ಯಾ ಪೂರ್ವದಲ್ಲಿ ದೇಶದ ಬಹುತೇಕ ಜನರು ಮಾಂಸಾಹಾರ ಸೇವಿಸುತ್ತಿದ್ದರು.

ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚಾಗಿ ಬೆಲೆ ಜಾಸ್ತಿಯಾದ ಮೇಲೆ ಸಸ್ಯಹಾರಿಗಳಾದರು. ಆದರೆ ಅದನ್ನೇ ಇಂದು ಕೆಲವರು ದೊಡ್ಡದಾಗಿಸುತ್ತಿದ್ದಾರೆ. ಗಂಡ, ಹೆಂಡತಿ ಮಧ್ಯೆ ಸಮಾನತೆ ಇಲ್ಲ. ಅವರಿಬ್ಬರ ಸಂಬಂಧ ಒಡೆಯ ಮತ್ತು ಆಳು ಮಾದರಿಯಲ್ಲಿದೆ ಎಂದರು. 

ಔಷಧ ಕ್ಷೇತ್ರದ ಮಾಫಿಯಾ ಇಡೀ ಜಗತ್ತನ್ನು ಆಳುತ್ತಿದೆ. ಹಂದಿ, ಕೋಳಿ, ಇಲಿ ಜ್ವರ ಮನುಷ್ಯರಿಗೇ ಏಕೆ ಬರಬೇಕು, ಇನ್ನೂ ಸಂಶೋಧನೆಯಲ್ಲೇ ಕಾಲಹರಣ ಮಾಡಲಾಗುತ್ತಿದೆ. ಗಣಿಗಾರಿಕೆ, ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ದೇಶವನ್ನು ತಿಂದು
ಮುಗಿಸಿ ಈಗ ನೀತಿ ಪಾಠ ಹೇಳುತ್ತಿರುವವರು ಯಾರು, ಜಾತಿ-ಧರ್ಮದ ಹೆಸರಿನಲ್ಲಿ ಆವೇಶಭರಿತ ಭಾಷಣ ಮಾಡಲಾಗುತ್ತಿದೆ. ಮುಂದೆ ಅಸ್ಪೃಶ್ಯತೆ ಕೂಡ ಭಾವನಾತ್ಮಕ ವಿಷಯವಾದರೆ ಅಚ್ಚರಿಯಿಲ್ಲ ಎಂದರು.

ಕಾರ್ಪೊರೆಟ್‌ ಕಂಪನಿಗಳ ಹಾವಳಿಯಿಂದಾಗಿ ಭೂಮಾಲೀಕರು ಕಣ್ಮರೆಯಾಗಿದ್ದಾರೆ. ಇವರೆಲ್ಲ ಬಿಪಿಎಲ್‌ ಕಾರ್ಡ್‌ಗಳಿಗೆ ಹಳ್ಳಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಲಂಚ ಹೊಡೆಯುವವರ ಮಕ್ಕಳು ಉನ್ನತ ವ್ಯಾಸಂಗ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ದೇಶದ ಸಂವಿಧಾನ ಎಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಚಿಂತಕರಾದ ಮಧುಭೂಷಣ, ಮಮತಾ ಸಂವಿಧಾನ ಹಾಗೂ ಮಹಿಳಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಶಿವರಾಜ್‌, ಕೆ. ರಾಜಣ್ಣ, ಟಿ. ಮಂಜಣ್ಣ, ಬೀಸ್ನಹಳ್ಳಿ ಜಯಣ್ಣ, ಫಾದರ್‌ ರಾಜು, ನರೇನಹಳ್ಳಿ ಅರುಣ್‌ ಕುಮಾರ್‌, ಕಸ್ತೂರಪ್ಪ, ಮಲ್ಲೇಶಪ್ಪ ಇದ್ದರು. ಮಲ್ಲಿಕಾರ್ಜುನ್‌ ಸ್ವಾಗತಿಸಿದರು. ವಿಮಲಾಕ್ಷಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next