ಬೆಂಗಳೂರು: ಪಿಯು ಉಪನ್ಯಾಸಕರ ಕೌನ್ಸೆಲಿಂಗ್‌ನಲ್ಲಿ ಕೆಲವು ಲೋಪದೋಷಗಳು ಕಂಡುಬಂದಿರುವ ಕಾರಣ ಜು.7ರಂದು ನಡೆಸಿದ್ದ ಕಡ್ಡಾಯ ವರ್ಗಾವಣೆ ರದ್ದು ಪಡಿಸಿ ಮರು ವರ್ಗಾವಣೆ ನಡೆಸಲು ಪಿಯು ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಸುಸೂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಸಲುವಾಗಿ ಜಿಲ್ಲಾ ಉಪ ನಿರ್ದೇಶಕರು, ತಮ್ಮ ಅಧೀನದಲ್ಲಿರುವ ಪಿಯು ಕಾಲೇಜುಗಳಲ್ಲಿ ಮುಂಜೂರಾದ, ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಜು.21ರೊಳಗೆ ಸಲ್ಲಿಸುವಂತೆ ಪಿಯು ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಪಿಯು ಇಲಾಖೆಗೆ ಜಿಲ್ಲಾ ಉಪನಿರ್ದೇಶಕರು ಕಚೇರಿ ಅಧೀಕ್ಷಕರು, ಖುದ್ದಾಗಿ ಹಾಜರಾಗಿ ಖಾಲಿ ಹುದ್ದೆ ಮಾಹಿತಿಯನ್ನು ಪರಿಷ್ಕರಣೆ ಮಾಡಬೇಕು. ಇದು ಸೂಕ್ಷ್ಮ ವಿಚಾರವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಪನಿರ್ದೇಶಕರು ವೈಯಕ್ತಿಕ ಗಮನಹರಿಸಿ ಮಾಹಿತಿ ನೀಡಲು ತಿಳಿಸಿದೆ. ತಪ್ಪಿದ್ದಲ್ಲಿ ಶಿಸ್ತುಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಉಪನ್ಯಾಸಕರ ವರ್ಗಾವಣೆ ತ್ವರಿತ: ಪಿಯು ಉಪನ್ಯಾಸಕರ ವರ್ಗಾವಣೆಯನ್ನು ತ್ವರಿತವಾಗಿ ಮಾಡುವಂತೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಸರ್ಕಾರ ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸಿದೆ.
ವರ್ಗಾವಣೆಗೆ ಅರ್ಜಿ ಅಹ್ವಾನಿಸಿದ್ದು, ಜೂನ್ ಎರಡನೇ ವಾರದಲ್ಲಿ ವರ್ಗಾವಣೆ ಆರಂಭಿಸುವುದಾಗಿ ಇಲಾಖೆ ಭರವಸೆ ನೀಡಿತ್ತು. ಈ ವರೆಗೆ ನಡೆದಿಲ್ಲ. 4 ವರ್ಷಗಳಿಂದ ವರ್ಗಾವಣೆಯಾಗಿಲ್ಲ. ದಯವಿಟ್ಟು ತಕ್ಷಣ ವರ್ಗಾವಣೆ ಆರಂಭಿಸುವಂತೆ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಮನವಿ ಮಾಡಿದ್ದಾರೆ.