Advertisement

Government: ಕಾಲೇಜಿನಲ್ಲಿ 50 ದಿನಗಳಿಂದ “ತರಗತಿ ನಷ್ಟ’!

01:22 AM Sep 30, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಪದವಿ ತರಗತಿ ಆರಂಭವಾಗಿ 50 ದಿನ ಹತ್ತಿರವಾಗುತ್ತಿದ್ದರೂ, ಸರಕಾರಿ ಕಾಲೇಜುಗಳಲ್ಲಿ ಪಾಠ ಮಾಡಲು ಅತಿಥಿ ಶಿಕ್ಷಕರ ನೇಮಕ ಇನ್ನೂ ಆಗದೆ ಮಕ್ಕಳಿಗೆ “ಪಠ್ಯ ಕೊರತೆ’ ಕಾಡುತ್ತಿದೆ.

Advertisement

ಪದವಿ ತರಗತಿ ಆ. 12ರಿಂದ ಆರಂಭವಾಗಿದೆ. ಖಾಸಗಿ ಕಾಲೇಜುಗಳಲ್ಲಿ ಅಂದಿನಿಂದಲೇ ಪಾಠ ಶುರುವಾಗಿತ್ತು. 35 ಸರಕಾರಿ ಕಾಲೇಜುಗಳು ವಿ.ವಿ. ವ್ಯಾಪ್ತಿಯಲ್ಲಿವೆ. ಇಲ್ಲಿ ಶೇ. 30ರಿಂದ 40ರಷ್ಟು ಮಾತ್ರ ಖಾಯಂ ಉಪನ್ಯಾಸಕರಿದ್ದು, ಶೇ. 60ಕ್ಕಿಂತ ಅಧಿಕವಾಗಿ (600ರಷ್ಟು)ಅತಿಥಿ ಉಪನ್ಯಾಸಕರ ಅಗತ್ಯವಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಕಾರವು ಅತಿಥಿ ಉಪನ್ಯಾಸಕರ ನೇಮಕ ಮಾಡದೆ ಈಗ ವಿದ್ಯಾರ್ಥಿಗಳಿಗೆ ಕಷ್ಟ ಎದುರಾಗಿದೆ.

ಕೆಲವೆಡೆ ಒಂದೆರಡು ತರಗತಿ ನಡೆಸಿ ಮಕ್ಕಳನ್ನು ವಾಪಸ್‌ ಕಳುಹಿಸುವುದು ಹಾಗೂ ಕೆಲವು ಕಾಲೇಜಿನಲ್ಲಿ ರಜೆಯನ್ನೇ ನೀಡುವ ಪ್ರಮೇಯ ಎದುರಾಗಿದೆ.

ಕಳೆದ ಬಾರಿ (2023-24) ಕಾಲೇಜು ಆ. 23ಕ್ಕೆ ಆರಂಭವಾಗಿದ್ದರೂ, ಅಕ್ಟೋಬರ್‌ 7ಕ್ಕೆ ಕೌನ್ಸಿಲಿಂಗ್‌ ನಡೆಸಿ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿತ್ತು. 45 ದಿನ ಅತಿಥಿ ಉಪನ್ಯಾಸಕರಿಲ್ಲದೆ ಮಕ್ಕಳಿಗೆ ತರಗತಿ ನಷ್ಟವಾಗಿತ್ತು.

ಒಂದು ಸೆಮಿಸ್ಟರ್‌ಗೆ ಮೂರೂವರೆ ತಿಂಗಳು (90 ಕರ್ತವ್ಯದ ದಿನ) ಸಾಮಾನ್ಯವಾಗಿ ಸಿಗುವುದು. ಮೊದಲ ಸೆಮಿಸ್ಟರ್‌ನ ಪರೀಕ್ಷೆ ಡಿಸೆಂಬರ್‌ನಲ್ಲಿ ಆಗಬೇಕಿದೆ. ಈಗ ಒಂದೂವರೆ ತಿಂಗಳು ಅತಿಥಿ ಉಪನ್ಯಾಸಕರು ಇಲ್ಲದೆ ಪಾಠವೂ ಆಗದೆ ಸರಕಾರಿ ಕಾಲೇಜಿನಲ್ಲಿ ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಭಯ ಆರಂಭವಾಗಿದೆ. ಅತಿಥಿ ಉಪನ್ಯಾಸಕರು ಬಂದರೂ ಮೊದಲ ಸೆಮಿಸ್ಟರ್‌ನ ಪಾಠವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದು ಹೇಗೆ ಎಂಬುದು ಕೂಡ ಮತ್ತೊಂದು ಸಂಕಟ!

Advertisement

ಯಾಕೆ ತಡ?
ನೆಟ್‌, ಸ್ಲೆಟ್‌, ಪಿಎಚ್‌ಡಿ ಪದವಿ ಅರ್ಹತೆ ಹೊಂದಿದವರು ಮಾತ್ರ ಯುಜಿಸಿ ನಿಯಮಾವಳಿಯಂತೆ ಬೋಧಿಸಲು ಅರ್ಹರು ಎಂಬ ಹೈಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಹಾಗೂ ಖಾಯಂ ಉಪನ್ಯಾಸಕರ ವರ್ಗಾವಣೆ ಹಾಗೂ ಹೊಸ ಸಹಾಯಕ ಪ್ರಾಧ್ಯಾಪಕರ
ಆಯ್ಕೆ ಪ್ರಕ್ರಿಯೆ ವಿಳಂಬದಿಂದ ಅತಿಥಿ ಉಪನ್ಯಾಸಕರ ನೇಮಕ ಕಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾ.-ಪ್ರೌ.ಶಾಲೆ; ಎಪ್ರಿಲ್‌ವರೆಗೆ “ಶನಿವಾರ’ ಪೂರ್ಣ ತರಗತಿ!
ದ.ಕ. ಜಿಲ್ಲೆಯಲ್ಲಿ ಮಳೆ ಕಾರಣದಿಂದ ನೀಡಿದ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶನಿವಾರ ಪೂರ್ಣ ತರಗತಿ ಆರಂಭಿಸಲಾಗಿದೆ.

ಮಳೆ ಕಾರಣದಿಂದ ವಿವಿಧ ತಾಲೂಕುಗಳಿಗೆ ಸೂಕ್ತವಾಗುವ ಹಾಗೆ ಜಿಲ್ಲೆಯಲ್ಲಿ ಸುಮಾರು 12 ರಜೆ ನೀಡಲಾಗಿತ್ತು. ಇದನ್ನು ಸರಿದೂಗಿಸುವ ಅನಿವಾರ್ಯತೆಯಿಂದ ಶನಿವಾರ ಪೂರ್ಣ ತರಗತಿ ಆರಂಭಿಸಲಾಗಿದೆ. ಎಪ್ರಿಲ್‌ವರೆಗೂ ಇದು ನಡೆಯುವ ಸಾಧ್ಯತೆಯಿದೆ. ಅ. 3ರಿಂದ ಅ.20ರ ವರೆಗೆ ದಸರಾ ರಜೆ ಹೊರತುಪಡಿಸಿ ಉಳಿದಂತೆ ಈ ತರಗತಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next