Advertisement

ಲಾಕ್‌ಡೌನ್‌ ವದಂತಿ: ಗಂಗಾವತಿಯಲ್ಲಿ ಅಗತ್ಯ ವಸ್ತುಗಳ ದರ ದುಪ್ಪಟ್ಟು

09:02 PM Apr 19, 2021 | Team Udayavani |

ವರದಿ : ಕೆ. ನಿಂಗಜ್ಜ

Advertisement

ಗಂಗಾವತಿ: ಕೋವಿಡ್ ಎರಡನೇ ಅಲೆಯು ವ್ಯಾಪಕವಾಗುತ್ತಿದ್ದು, ಸರಕಾರ ಪುನಃ ಲಾಕ್‌ ಡೌನ್‌ ಘೋಷಣೆ ಮಾಡುತ್ತದೆ ಎಂಬ ಆತಂಕ ಜನರಲ್ಲಿದೆ. ಇಂತಹ ಸಂದರ್ಭದಲ್ಲಿ ನಗರದ ಕೆಲ ಕಿರಾಣಿ ವ್ಯಾಪಾರಿಗಳು ಮತ್ತು ಗುಟ್ಕಾ, ಸಿಗರೇಟ್‌ ಮಾರಾಟಗಾರರು ಅಗತ್ಯ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸಣ್ಣ ಕಿರಾಣಿ ಅಂಗಡಿಗಳ ಮಾಲೀಕರು ಗುಟ್ಕಾ, ಸಿಗರೇಟ್‌ ಖರೀದಿ ಮಾಡಲು ಅಂಗಡಿಗಳ ಮುಂದೆ ಕೋವಿಡ್  ಮಾರ್ಗಸೂಚಿ ಪಾಲಿಸದೇ ನಿಲ್ಲುತ್ತಿದ್ದಾರೆ. ಓಎಸ್‌ಬಿ ರಸ್ತೆಯಲ್ಲಿರುವ ಡೀಲರ್‌ ಅಂಗಡಿಗಳ ಮುಂದೆ ನೂರಾರು ಜನ ಮುಗಿಬಿದ್ದು ಗುಟ್ಕಾ, ಸಿಗರೇಟ್‌ ಖರೀದಿ ಮಾಡುವ ಸಂದರ್ಭದಲ್ಲಿ ಪೊಲೀಸರು ಜನರನ್ನು ಓಡಿಸಿ ಡೀಲರ್‌ಗೆ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿದೆ.

ದುಪ್ಪಟ್ಟು ದರ:

ಕಳೆದ ವರ್ಷದ ಕೋವಿಡ್  ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ಕೆಲ ಗುಟ್ಕಾ, ಸಿಗರೇಟ್‌ ಡೀಲರ್‌ಗಳು ತಾವು ಖರೀದಿ ಮಾಡಿದ ದರಕ್ಕಿಂತಲೂ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಪೊಲೀಸರು ಮತ್ತು ವಾಣಿಜ್ಯ ತೆರಿಗೆ ಅ ಧಿಕಾರಿಗಳ ಕೈಗೆ ಸಿಕ್ಕು ಹಾಕಿಕೊಂಡಿದ್ದರು. ಈಗ ಎರಡನೇಯ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಪುನಃ ಲಾಕ್‌ಡೌನ್‌ ಮಾಡಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಜನರು ಗುಟ್ಕಾ ಮತ್ತು ಸಿಗರೇಟ್‌, ಬೀಡಿ ಕೊರತೆಯಾಗದಂತೆ ಡೀಲರ್‌ಗಳು ಕೇಳಿದಷ್ಟು ಹಣ ನೀಡಿ ಖರೀದಿಸುತ್ತಿದ್ದಾರೆ. 120 ರೂ. ಇದ್ದ ಗುಟ್ಕಾ ಪ್ಯಾಕೆಟ್‌ 250 ರೂ.ಗೆ ಮಾರಾಟ ಮಾಡಲಾಗುತ್ತಿದೆ.

Advertisement

ಸಿಗರೇಟ್‌, ಬೀಡಿ, ತಂಬಾಕು ಪದಾರ್ಥಗಳನ್ನು ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಲಾಗುತ್ತಿದೆ. ಜನರು ಲಾಕ್‌ಡೌನ್‌ಗೆ ಹೆದರಿ ಅಗತ್ಯ ವಸ್ತು, ಮದುವೆ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದು, ಈ ವೇಳೆ ಕೋವಿಡ್  ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ. ಕಿರಾಣಿ, ಬಟ್ಟೆ ಅಂಗಡಿ ಸೇರಿ ಚಿನ್ನದಂಗಡಿಯವರು ಗ್ರಾಹಕರಿಗೆ ಕೋವಿಡ್  ಎಚ್ಚರಿಕೆ ನೀಡದೇ ಮತ್ತು ಸ್ಯಾನಿಟೈಜರ್‌ ವ್ಯವಸ್ಥೆ ಮಾಡಿರುವುದು ಕಂಡು ಬರಲಿಲ್ಲ. ಜನರಲ್‌ ಸ್ಟೋರ್‌ ಸೇರಿ ರವಿವಾರ ಬಹುತೇಕ ಅಂಗಡಿಗಳಲ್ಲಿ ಜನಜಂಗುಳಿ ಕಂಡುಬಂತು.

ನಗರಸಭೆ ಮೌನ:

ಕೋವಿಡ್  ಎರಡನೇಯ ಅಲೆ ಸಂದರ್ಭದಲ್ಲಿ ರಾಜ್ಯ ಸರಕಾರ ಜನತೆಗೆ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತಿದ್ದರೆ ಗಂಗಾವತಿಯ ಬಜಾರದಲ್ಲಿ ಬೀದಿ ಬದಿ ವ್ಯಾಪಾರಿಗಳು, ದೊಡ್ಡ ದೊಡ್ಡ ಅಂಗಡಿಯವರು ಹಾಗೂ ಜನರು ಯಾವುದೇ ಮುನ್ನೆಚ್ಚರಿಕೆ ಅನುಸರಿಸದೇ ತಿರುಗುತ್ತಿದ್ದಾರೆ. ಆದರೂ ನಗರಸಭೆಯವರು ಯಾವುದೇ ಕ್ರಮ ಅಥವಾ ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಜಾಗೃತಿ ಮೂಡಿಸದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ. ಪೊಲೀಸರಿಂದ ಎಚ್ಚರಿಕೆ: ಗುಟ್ಕಾ ಅಂಗಡಿ ಸೇರಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆ ಜನಜಂಗುಳಿ ಸೇರದಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ನಗರ ಠಾಣೆ ಪಿಐ ವೆಂಕಟಸ್ವಾಮಿ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next