ಎಚ್.ಡಿ.ಕೋಟೆ: ಕಳೆದ 7 ತಿಂಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಕೊನೆ ಗಳಿಗೆಯಲ್ಲಿ ಯುವತಿಯನ್ನು ವಂಚಿಸಲು ಯತ್ನಿಸಿ ನಾಪತ್ತೆಯಾಗಿದ್ದ ಅಂತರ್ಜಾತಿ ಪ್ರೇಮಿಯೊಬ್ಬನನ್ನು ಪತ್ತೆ ಹಚ್ಚಿದ ಪೊಲೀಸರು ಹಾಗೂ ತಾಲೂಕು ಮಹಿಳಾ ಸಾಂತ್ವನ ಕೇಂದ್ರ ಅಧಿಕಾರಿಗಳು, ಯುವಕನಿಗೆ ತಿಳಿಹೇಳಿ ಯುವತಿಯೊಂದಿಗೆ ಮದುವೆ ಮಾಡಿಸಿರುವ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ. ಪ್ರೇಮಿಗಳಾದ ಚೇತನ್ ಹಾಗೂ ಸುಶ್ಮಿತಾಪ್ರಿಯಾ ನವದಂಪತಿ.
ತಾಲೂಕಿನ ಸರಗೂರು ಪಟ್ಟಣದ ಸುಶ್ಮಿತಾಪ್ರಿಯಾ (19) ಎಂಬ ಯುವತಿಯನ್ನು ಪ್ರೀತಿಸಿ, ಲೈಂಗಿಕವಾಗಿ ಬಳಸಿಕೊಂಡು ಬಳಿಕ ಯುವತಿಯನ್ನು ವಂಚಿಸಲು ಯತ್ನಿಸಿದ ಯುವಕ ಕೂರ್ಣೆಗಾಲ ಗ್ರಾಮದ ಚೇತನ್ (23) ಎಂಬಾತ. ಈಗ ಎಚ್.ಡಿ.ಕೋಟೆ ಸಿಪಿಐ ಪುಟ್ಟಸ್ವಾಮಿ ಮತ್ತು ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಜಶೀಲ ಅವರ ಮಧ್ಯಸ್ಥಿಕೆಯಲ್ಲಿ ವಿವಾಹವಾದ ಯುವಕ.
ನಡೆದದ್ದೇನು?: ಚೇತನ್ ಸರಗೂರು ಪಟ್ಟಣದ ಸುಶ್ಮಿತಾ ಪ್ರಿಯಾ ಅವರ ಮನೆಯ ಸಮೀಪದಲ್ಲಿ ಔಷಧ ಮಾರಾಟ ಅಂಗಡಿ ತೆರೆದಿದ್ದ. ಅಂಗಡಿ ಪಕ್ಕದಲ್ಲೇ ಇದ್ದ ಯುವತಿ ಮತ್ತು ಚೇತನ್ ಪರಸ್ಪರ ಪ್ರೀತಿಸಿ, ನಂತರ ಸುಶ್ಮಿತಳನ್ನು ಮೈಸೂರಿಗೆ ಕರೆದುಕೊಂಡು ಆಕೆಯೊಡನೆ 2 ದಿನ ಕಳೆದು ಬಳಿಕ ತಾಲೂಕಿನ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಸ್ನೇಹಿತನ ಮನೆಗೆ ಕರೆತಂದು ಪೋಷಕರ ಮನವೊಲಿಸಿ ವಿವಾಹವಾಗುವ ಭರವಸೆ ನೀಡಿ ಹೋದವನು, ಮರಳಿ ಮನೆಗೆ ಬರಲಿಲ್ಲ.
ಜತೆಗೆ ಮೊಬೈಲ್ ಸ್ಪಿಚ್ ಆಫ್ ಮಾಡಿಕೊಂಡಿದ್ದ. ಬಳಿಕ ಯುವತಿ ಘಟನೆ ಕುರಿತು ತಾಲೂಕು ಮಹಿಳಾ ಸಾಂತ್ವನ ಕೇಂದ್ರ ಮತ್ತು ಎಚ್.ಡಿ.ಕೋಟೆ ಪೊಲೀಸರಿಗೆ ಘಟನೆ ಕುರಿತು ವಿವರಣೆ ನೀಡಿ ನ್ಯಾಯ ದೊರಕಿಸಿಕ್ಕಾಗಿ ಮೊರೆಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಸಾಂತ್ವನ ಕೇಂದ್ರದ ಜಶೀಲ, ಕೆಲವೇ ತಾಸುಗಳಲ್ಲಿ ತಲೆ ಮರೆಸಿಕೊಂಡಿದ್ದ ಪ್ರೇಮಿಯನ್ನು ಪೊಲೀಸರ ಸಂಪೂರ್ಣ ಸಹಕಾರದೊಂದಿಗೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ಯುವತಿಯನ್ನು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಯುವಕ ಯುವತಿಯೊಡನೆ ವಿವಾಹವಾಗಲು ನಿರಾಕರಿಸಿ ಜೈಲು ಶಿಕ್ಷೆ ಅನುಭವಿಸಲು ಸಿದ್ಧ ಎಂದು ರಂಪಾಟ ನಡೆಸಿದ. ಆದರೆ ಕೊನೆಯಲ್ಲಿ ಕಾನೂನಿನ ಅರಿವು ಮೂಡಿಸುತ್ತಿದ್ದಂತೆಯೇ ವಿವಾಹವಾಗಲು ಸಮ್ಮತಿಸಿದ. ಪಟ್ಟಣದ ಶ್ರೀರಾಮಮಂದಿರ ದೇವಸ್ಥಾನದಲ್ಲಿ ಸಾಂತ್ವನ ಮತ್ತು ಪೊಲೀಸರ ಪೌರೋಹಿತ್ಯದಲ್ಲಿ ಚೇತನ್ ಮತ್ತು ಸುಶ್ಮಿತಾಪ್ರಿಯಾಗೆ ಮಾಂಗಲ್ಯ ಧಾರಣೆ ನೆರವೇರಿಸುವ ಮೂಲಕ ಇಬ್ಬರೂ ಪರಸ್ಪರ ಸತಿಪತಿಗಳಾದರು.