ಕಲಬುರಗಿ: ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುವುದು ನಿಯಂತ್ರಿಸುವ ನಿಟ್ಟಿನಲ್ಲಿ ಸೋಮವಾರ ಲಾಕ್‌ಡೌನ್ ಅನುಷ್ಠಾನಕ್ಕೆ ಪೊಲೀಸರು ರಸ್ತೆಗಿಳಿದು, ಬೇಕಾಬಿಟ್ಟಿ ಮತ್ತು ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದರು. ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ 12 ಗಂಟೆಯೊಳಗೆ 300ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು. ಕಳೆದ ಒಂದು ತಿಂಗಳಿಂದ ನೈಟ್ ಕರ್ಫ್ಯೂ , ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಕೊರೊನಾ ಪ್ರಕರಣಗಳ ಹೆಚ್ಚುತ್ತಲೇ ಇದೆ. ಹೀಗಾಗಿ 14 ದಿನಗಳ ಕಾಲ ಸರ್ಕಾರ ಕಠಿಣ ನಿರ್ಬಂಧ ಜಾರಿಗೊಳಿಸಿದೆ.
ಸೋಮವಾರದ ಮೊದಲ ದಿನ ಬೆಳಗ್ಗೆ 10ಗಂಟೆಯ ಬಳಿಕ ಎಲ್ಲ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು. 10ಗಂಟೆ ನಂತರವೂ ಕದ್ದ ಮುಚ್ಚಿ ಅಂಗಡಿಗಳ ತೆರೆದವರು ಮತ್ತು ಅನವಶ್ಯಕವಾಗಿ ಸಂಚರಿಸುತ್ತಿದ್ದರಿಗೆ ಲಾಠಿ ರುಚಿ ತೋರಿಸಿದರು. ಅಲ್ಲದೇ, ಕಾರು, ಬೈಕ್‌ನಲ್ಲಿ ಬಂದವರು ಮಾಹಿತಿ, ದಾಖಲೆ ನೀಡಿದ್ದರೆ ವಾಹನ ವಶಕ್ಕೆ ಪಡೆದ ಬಿಸಿ ಮುಟ್ಟಿಸಿದರು. ಕೇಂದ್ರ ಬಸ್ ನಿಲ್ದಾಣ, ಎಂಎಸ್‌ಕೆ ಮಿಲ್ ಪ್ರದೇಶ, ರಾಷ್ಟ್ರಪತಿ ವೃತ್ತ, ಜೇವರ್ಗಿ ರಸ್ತೆ, ರಾಮ ಮಂದಿರ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ನೆಹರು ಗಂಜ್ ಸೇರಿದಂತೆ ಹಲವೆಡೆ ಪೊಲೀಸರು ಬಂದೋಬಸ್ತ್ ನಿಯೋಜನೆಗೊಂಡು ವಾಹನಗಳ ತಪಾಸಣೆ ಮತ್ತು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು.
ಆಸ್ಪತ್ರೆ, ಮೆಡಿಕಲ್‌ಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಓಡಾಡುವರು ಸೂಕ್ತ ದಾಖಲೆ ತೋರಿಸಿದಾಗ ಮಾತ್ರ ಬಿಟ್ಟು ಕಳುಹಿಸಿದರು. ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೊರಿಸಿದರು. ಚೈನಾ ಮಾರ್ಕೆಟ್‌ನಲ್ಲಿ ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದನ್ನು ಕಂಡು ಪೊಲೀಸರು ಒಳನುಗ್ಗಿ ಲಾಠಿ ಬಿಸಿ ಅಂಗಡಿಯವರನ್ನು ಹೊರ ಹಾಕಿದರು. ಗಲ್ಲಿ-ಗಲ್ಲಿಗಳಿಗೂ ಖಾಕಿ ಪಡೆ ಹೋಗಿ ನಿಮಯ ಉಲ್ಲಂಘಿಸುವವರ ಮೇಲೆ ನಿಗಾ ವಹಿಸಿ, ಎಚ್ಚರಿಕೆ ಕೊಟ್ಟು ಮನೆಗಳಿಗೆ ಕಳುಹಿಸಿದರು. ಕೆಲವೆಡೆ ಮನೆಗೆ ಹೋಗಿ ಎಂದು ಹೇಳಿದರೂ, ಕೇಳದವರಿಗೆ ಪೊಲೀಸರು ಅನಿವಾರ್ಯವಾಗಿ ಲಾಠಿ ಏಟು ನೀಡಿದರು.
ಸಾರಿಗೆ ಬಸ್‌ಗಳ ಸಂಚಾರ ಈಗಾಗಲೇ ಸಂಪೂರ್ಣ ಸ್ಥಗಿತವಾಗಿದ್ದು, ರೈಲುಗಳ ಓಡಾಟ ಇದೆ. ಬೇರೆ-ಬೇರೆ ಕಡೆಗಳಿಂದ ರೈಲು ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ತಮ್ಮವರ ವಾಹನಗಳಲ್ಲಿ ಮನೆಗಳಿಗೆ ತೆರಳಿದ್ದು ಕಂಡು ಬಂದಿತು. ಕೆಲವರು ರೈಲು ಟಿಕೆಟ್ ತೋರಿಸಿದರೂ ಸಹ ಪೊಲೀಸರು ದಂಡ ಹಾಕಿದರು. ಬೈಕ್‌ಗಳ ಜಪ್ತಿ ಮಾಡಿದರು. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ರೈಲು, ವಿಮಾನ ಟಿಕೆಟ್ ತೋರಿಸಿದರೆ ವಾಹನ ಬಿಡಬೇಕು ಎಂದು ಸರ್ಕಾರದ ನಿಯಮ ಇದೆ. ಆದರೂ, ರೈಲ್ವೆ ಟಿಕೆಟ್ ಸಮೇತ ಬೈಕ್‌ನಲ್ಲಿ ಮನೆಗೆ ತೆರಳುವಾಗ ತಡೆದ ಪೊಲೀಸರು ಬೈಕ್ ಜಪ್ತಿ ಮಾಡಿದ್ದಾರೆ ಎಂದು ಇಬ್ಬರು ಪ್ರಯಾಣಿಕರು ಅಸಮಾಧಾನ ಹೊರಹಾಕಿದರು.
ಸಿಟಿ ರೌಂಡ್ ಹಾಕಿ ಕಮೀಷನರ್: ಲಾಕ್‌ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಕ್ಕಾಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ ಸಿಟಿ ರೌಂಡ್ ನಡೆಸಿದರು. “ಎ’ ಉಪ ವಿಭಾಗದ ಎಸಿಪಿ ಅಂಶುಕುಮಾರ, “ಬಿ’ ಉಪ ವಿಭಾಗದ ಎಸಿಪಿ ಗಿರೀಶ ಎಸ್.ಬಿ, “ಸಿ’ ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ ಅವರೊಂದಿಗೆ ಗಸ್ತು ಸುತ್ತಿದ ಪೊಲೀಸ್ ಆಯುಕ್ತರು ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದರು. ತಾವು ಸಂಚರಿಸಿದ ಕಡೆಗಳಲ್ಲಿ ಜನರ ಓಡಾಟ ಕಂಡು ಬಂದಾಗ ತಕ್ಷಣವೇ ಆಯಾ ಪ್ರದೇಶ ಇನ್‌ಸ್ಪೆಕ್ಟರ್‌ಗಳಿಗೆ ಕರೆ ಮಾಡಿ, ನಿಯಮ ಪಾಲಿಸುವಂತೆ ಎಚ್ಚರಿಕೆ ಸಂದೇಶ ನೀಡಿದರು.
ಇನ್‌ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಸಿದ್ದರಾಮೇಶ್ವರ ಗಡೇದ್, ಕಪಿಲ್‌ದೇವ, ಅರುಣಕುಮಾರ ಮುರಗುಂಡಿ, ಎಸ್.ಆರ್. ನಾಯಕ, ಬಸವರಾಜ ತೇಲಿ, ಶಿವಾನಂದ ಗಾಣಿಗೇರ, ಭಾಸು ಚವ್ಹಾಣ, ಅಸ್ಲಂಭಾಷಾ, ತಮ್ಮರಾಯ ಪಾಟೀಲ, ಚಂದ್ರಶೇಖರ ತಿಗಡಿ ಸೇರಿ ಹಿರಿಯ ಪೊಲೀಸರು ಪ್ರಮುಖ ಪ್ರದೇಶಗಳು ಮತ್ತು ವೃತ್ತಗಳಲ್ಲಿ ನಿಂತು ಜನರು ಓಡಾಟಕ್ಕೆ ಕಡಿವಾಣ ಹಾಕುವ ಕೆಲಸ ಮಾಡಿದರು. ರಸ್ತೆಗಳಲ್ಲಿ ಬ್ಯಾರಿಕೇಡ್: ಲಾಕ್‌ಡೌನ್ ಅನುಷ್ಠಾನಕ್ಕೆ ಅನುಕೂಲ ಮತ್ತು ವೇಗವಾಗಿ ವಾಹನಗಳ ಸಂಚಾರಕ್ಕೆ ತಡೆವೊಡ್ಡುವ ನಿಟ್ಟಿನಲ್ಲಿ ಮುಖ್ಯರಸ್ತೆಗಳಲ್ಲಿ ಅಡ್ಡಲಾಗಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ರೈಲು ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಜಗತ್ ವೃತ್ತ, ಸರ್ದಾರ್ ವಲ್ಲಭಭಾಯಿ ವೃತ್ತ, ಸೂಪರ್ ಮಾರ್ಕೆಟ್ ಮತ್ತು ರಿಂಗ್ ರಸ್ತೆಗಳಲ್ಲಿ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಿ ನಾಕಾ ಬಂದಿ ಮಾಡಲಾಗಿದೆ. ತುರ್ತು ಸಂಚಾರ ಹೊರತು ಪಡಿಸಿ ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಿರುವ ನಿಟ್ಟಿನಲ್ಲಿ ಜಿಲ್ಲಾ ಗಡಿಗಳಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.