Advertisement

ತಯಾರಿಸಲು ಸುಲಭ, ತಿನ್ನಲು ರುಚಿಕರ…ಗುಗ್ಗರಿ ವೈವಿಧ್ಯ

06:25 PM Jan 11, 2021 | Team Udayavani |

ನೆನೆಸಿದ ಕಾಳುಗಳನ್ನು ಬೇಯಿಸಿ ಮಾಡಿದ ಪದಾರ್ಥಕ್ಕೆ ಉಸುಳಿ, ಹುಸಲಿ, ಗುಗ್ಗರಿ ಅನ್ನುತ್ತಾರೆ. ತಯಾರಿಸಲು ಸುಲಭ, ತಿನ್ನಲು ರುಚಿಕರ ಅನ್ನಬಹುದಾದ ಈ ಖಾದ್ಯ, ಆರೋಗ್ಯಕ್ಕೂ ಒಳ್ಳೆಯದು. ಹಬ್ಬ-ಹರಿದಿನಗಳ ಅಡುಗೆಯಲ್ಲಿ ಕಾಯಂ ಜಾಗ ಪಡೆದಿರುವ ಗುಗ್ಗರಿಯನ್ನು, ಸಂಜೆ ವೇಳೆಯ ಸ್ನ್ಯಾಕ್ಸ್‌ ಆಗಿಯೂ ಸವಿಯಬಹುದು.

Advertisement

ಹಸಿರು ಬಟಾಣಿ ಗುಗ್ಗರಿ
ಬೇಕಾಗುವ ಸಾಮಗ್ರಿ: ಹಸಿ ಬಟಾಣಿ ಕಾಳು -ಒಂದು ಕಪ್‌, ಒಣಮೆಣಸಿನಕಾಯಿ- 2, ತೆಂಗಿನತುರಿ- ಕಾಲು ಕಪ್‌, ರುಚಿಗೆ ತಕ್ಕಷ್ಟು ಕಲ್ಲುಪ್ಪು.

ಮಾಡುವ ವಿಧಾನ: ಮೊದಲಿಗೆ ಒಣಮೆಣಸು, ತೆಂಗಿನತುರಿ ಹಾಗೂ ಕಲ್ಲುಪ್ಪನ್ನು ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ ಸಿಡಿಸಿ ಇಂಗು ಹಾಕಿ, ತೊಳೆದ ಹಸಿಬಟಾಣಿ ಹಾಗೂ ಸ್ವಲ್ಪ ನೀರು ಹಾಕಿ ಬೇಯಿಸಿ. ಬಟಾಣಿ ಅರ್ಧ ಬೆಂದಾಗ ರುಬ್ಬಿಕೊಂಡ ಖಾರವನ್ನು ಸೇರಿಸಿ ಚೆನ್ನಾಗಿ ಮಗುಚಿ, ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.

ಹೆಸರುಕಾಳು ಮೊಳಕೆ ಗುಗ್ಗರಿ
ಬೇಕಾಗುವ ಸಾಮಗ್ರಿ: ಮೊಳಕೆ ಬರಿಸಿದ ಹೆಸರು ಕಾಳು-ಒಂದು ಕಪ್‌, ಹಸಿ ಮೆಣಸಿನಕಾಯಿ-5, ತೆಂಗಿನತುರಿ- ಕಾಲು ಕಪ್‌, ರುಚಿಗೆ ತಕ್ಕಷ್ಟು ಪುಡಿ ಉಪ್ಪು.

ಮಾಡುವ ವಿಧಾನ: ಮೊಳಕೆ ಬಂದ ಹೆಸರುಕಾಳನ್ನು ಕುಕ್ಕರ್‌ನಲ್ಲಿ ನಾಲ್ಕೈದು ವಿಷಲ್‌ ಬರುವವರೆಗೆ ಬೇಯಿಸಿಕೊಳ್ಳಿ. ಒಗ್ಗರಣೆಗೆ ಸಾಸಿವೆ ಸಿಡಿಸಿ, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ತೆಂಗಿನತುರಿ, ಚಿಟಿಕೆ ಇಂಗು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಬೆಂದ ಕಾಳು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಐದು ನಿಮಿಷ ಕೈಯಾಡಿಸುತ್ತ ತಳ ಹಿಡಿಯದಂತೆ ಮಗುಚಿ, ಉರಿ ಆರಿಸಿ.

Advertisement

ಅಲಸಂದೆಕಾಳು ಗುಗ್ಗರಿ
ಬೇಕಾಗುವ ಸಾಮಗ್ರಿ: ಅಲಸಂದೆಕಾಳು- ಒಂದು ಬಟ್ಟಲು, ಹೆಚ್ಚಿದ ಈರುಳ್ಳಿ ಸ್ವಲ್ಪ, ಹೆಚ್ಚಿದ ಹಸಿಮೆಣಸಿನಕಾಯಿ, ಎಣ್ಣೆ, ಸಾಸಿವೆ, ಕರಿಬೇವು, ಉಪ್ಪು, ಕಾಯಿತುರಿ.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಅರ್ಧ ಲೋಟ ನೀರು ಹಾಕಿ (ಕಾಳುಗಳು ಕರಗದಂತೆ), ಅಲಸಂದೆಕಾಳು, ಉಪ್ಪು ಮತ್ತು ಸ್ವಲ್ಪ ಎಣ್ಣೆ ಸ್ವಲ್ಪ ಹಾಕಿ ಬೇಯಿಸಿಕೊಳ್ಳಿ. ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಹಸಿಮೆಣಸು, ಈರುಳ್ಳಿ ಹಾಕಿ, ಕೆಲವು ನಿಮಿಷ ಹುರಿಯಿರಿ. ನಂತರ ಚಿಟಿಕೆ ಉಪ್ಪು ಹಾಕಿ, ಬೇಯಿಸಿರುವ ಕಾಳನ್ನು ಬೆರೆಸಿ, ಚೆನ್ನಾಗಿ ಮಗುಚಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಬೆರೆಸಿ.

ಕಡಲೆ ಬೇಳೆ ಗುಗ್ಗರಿ
ಬೇಕಾಗುವ ಸಾಮಗ್ರಿ: ಕೋಸಂಬರಿ ಮಾಡುವ ಹದಕ್ಕೆ ನೆನೆದ ಕಡಲೆಬೇಳೆ-ಒಂದು ಕಪ್‌, ಒಣ­ ಮೆಣಸಿನ­ಕಾಯಿ-3, ಶುಂಠಿ-ಸಣ್ಣ ತುಂಡು, ತೆಂಗಿನತುರಿ- ಕಾಲು ಕಪ್‌, ಕಲ್ಲುಪ್ಪು.

ಮಾಡುವ ವಿಧಾನ: ನೆನೆದ ಕಡಲೆಬೇಳೆಯನ್ನು ಸ್ವಲ್ಪ ನೀರು ಹಾಕಿ, ಕುಕ್ಕರ್‌ನಲ್ಲಿ ಮೂರು ಸಿಳ್ಳೆ ಕೂಗಿಸಿ, ತಣಿದ ನಂತರ ಹೆಚ್ಚುವರಿ ನೀರಿನ ಅಂಶವನ್ನು ಬಸಿದು ಬಿಡಿ. (ಈ ಬೇಳೆ ಕಟ್ಟನ್ನು ಸಾರು ಅಥವಾ ಸಾಂಬಾರಿಗೆ ಬಳಸಿಕೊಳ್ಳ ಬಹುದು )ಖಾರಕ್ಕೆ ಒಣಮೆಣಸು, ಶುಂಠಿ ತುಂಡು, ತೆಂಗಿನತುರಿ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ ಸಿಡಿಸಿ, ಇಂಗು ಹಾಕಿ. ರುಬ್ಬಿಕೊಂಡ ಖಾರ ಸೇರಿಸಿ ಒಂದು ನಿಮಿಷ ಹುರಿದು, ನಂತರ ಬೆಂದ ಕಡಲೇಬೇಳೆಯನ್ನು ಹಾಕಿ ಚೆನ್ನಾಗಿ ಬೆರೆಸಿ, ಐದು ನಿಮಿಷ ಕೈಯಾಡಿಸಿದರೆ ಕಡಲೆಬೇಳೆ ಗುಗ್ಗರಿ ಸಿದ್ಧ.

ಶೇಂಗಾ ಗುಗ್ಗರಿ
ಬೇಕಾಗುವ ಸಾಮಗ್ರಿ: ಕಡಲೆಕಾಯಿ ಬೀಜ-ಒಂದು ಕಪ್‌, ಹಸಿ ಮೆಣಸಿನಕಾಯಿ-5, ತೆಂಗಿನತುರಿ- ಕಾಲು ಕಪ್‌, ರುಚಿಗೆ ತಕ್ಕಷ್ಟು ಪುಡಿ ಉಪ್ಪು.

ಮಾಡುವ ವಿಧಾನ: ಕಡಲೆಕಾಯಿಬೀಜವನ್ನು ನಾಲ್ಕೈದು ತಾಸು ನೆನೆಸಿ, ನಂತರ ಕುಕ್ಕರ್‌ನಲ್ಲಿ 6-7 ಸಿಳ್ಳೆ ಕೂಗಿಸಿ.ಒಗ್ಗರಣೆಗೆ ಸಾಸಿವೆ ಸಿಡಿಸಿ, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ತೆಂಗಿನತುರಿ, ಚಿಟಿಕೆ ಇಂಗು ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಬೆಂದ ಕಡಲೆಕಾಯಿಬೀಜ,ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಐದು ನಿಮಿಷದ ನಂತರ ಉರಿ ಆರಿಸಿ.

Advertisement

Udayavani is now on Telegram. Click here to join our channel and stay updated with the latest news.

Next